ಸಿ ಸಿ ಕ್ಯಾಮರಾದಲ್ಲಿ ಸಿಕ್ಕ ಚಿತ್ರ
ಭದ್ರಾವತಿ,ಸೆ.22:
ತಾಲ್ಲೂಕಿನ ಕಾಡಿನ ಅಂಚಿನಲ್ಲಿರು ಕೆಲ ಗ್ರಾಮಗಳಲ್ಲಿ ಚಿರತೆಗಳ ಕಾಟ ಹೆಚ್ಚಾಗಿದ್ದು ಜನ ಆತಂಕದ ಬದುಕು ಕಳೆಯಬೇಕಾದ ಅನಿವಾರ್ಯತೆ ಬಂದಿದೆ.
ಈ ಚಿರತೆಗಳ ರಾತ್ರಿ ಬೇಟೆಯಿಂದ ಗ್ರಾಮಗಳ 35 ಹೆಚ್ಚು ನಾಯಿಗಳ ಆಹುತಿಯಾಗಿವೆ.
ಭದ್ರಾವತಿ ತಾಲ್ಲೂಕಿನ ದಿಗ್ಗೇನಹಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರಿಗೆ ಕಳೆದ ಕೆಲವು ದಿನಗಳಿಂದ ರಾತ್ರಿ ಚಿರತೆಯದೇ ಚಿಂತೆಯಾಗಿದೆ. ರಾಜಾರೋಷವಾಗಿ ಓಡಾಡುವ ಈ ಚಿರತೆಗಳು ಯಾವ ಸಮಯದಲ್ಲಿ ಬಂದು ದಾಳಿ ಮಾಡುತ್ತವೆ ಎನ್ನುವ ಭಯ ಹೊಂದಿದ್ದಾರೆ.
ದಿಗ್ಹೇನಹಳ್ಳಿ ಗ್ರಾಮದಲ್ಲಿರುವ ಅನೇಕ ನಾಯಿಗಳನ್ನು ಆ ಚಿರತೆಗಳು ಬೇಟೆಯಾಡಿವೆ. ಕಾಡಿನಲ್ಲಿರಬೇಕಾದ ಕಾಡು ಪ್ರಾಣಿಗಳು ಗ್ರಾಮಗಳಿಗೆ ಬಿಂದಾಸ್ ಆಗಿ ಗ್ರಾಮಗಳಿಗೆ ಎಂಟ್ರಿಕೊಡುತ್ತಿವೆ. ಸದ್ಯ ಚಿರತೆಗಳ ಸೆರೆಹಿಡಿಯಲು ಅರಣ್ಯ ಇಲಾಖೆಯು ಹರಸಾಹಸ ಪಡುತ್ತಿದೆ. ಚಿರತೆ ಬಲೆಗೆ ಬೋನು ಹಾಕಿದ್ದರೂ ಪ್ರಯೋಜನವಿಲ್ಲ. ಬೋನಿಗೆ ಬೀಳದ ಚಿರತೆಗಳು ಗ್ರಾಮದಲ್ಲಿ ಭಯ ಹುಟ್ಟಿಸಿವೆ.
ಭದ್ರಾವತಿ ತಾಲೂಕಿನ ದಿಗ್ಗೇನಹಳ್ಳಿ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಎರಡು ಚಿರತೆಗಳು ಬಿಂದಾಸ್ ಆಗಿ ಒಡಾಡಿಕೊಂಡಿವೆ. ಕಾಡಿನಿಂದ ಚಿರತೆಗಳು ಆಹಾರಕ್ಕಾಗಿ ಗ್ರಾಮಗಳತ್ತ ಬೇಟೆಗೆ ಮುಂದಾಗಿವೆ. ಸದ್ಯ ರಾತ್ರಿ ಆದ್ರೆ ಸಾಕು ದಿಗ್ಗೇನಹಳ್ಳಿ, ಆದ್ರಿಹಳ್ಳಿ, ಸೈದರಕಲ್ಲಹಳ್ಳಿ ಗ್ರಾಮಗಳಲ್ಲಿ ಚಿರತೆಯ ಹಾವಳಿ ಜೋರಾಗಿದೆ. ಶಾಂತಿಸಾಗರ ಅರಣ್ಯವ್ಯಾಪ್ತಿಯಲ್ಲಿ ಚಿರತೆಗಳ ಸಂಖ್ಯೆಯು ಗಣನೀಯವಾಗಿ ಹೆಚ್ಚಾಗಿವೆ. ಇದರಿಂದ ಚಿರತೆಗಳು ಗ್ರಾಮಗಳಿಗೆ ನುಗ್ಗಿ ರಾತ್ರಿ ಸಾಕುಪ್ರಾಣಿಗಳನ್ನು ತಿನ್ನುತ್ತಿವೆ. ಅದರಲ್ಲೂ ಸುತ್ತುಮುತ್ತಲಿನ ಗ್ರಾಮದಲ್ಲಿರುವ ನಾಯಿಗಳನ್ನು ಚಿರತೆಗಳು ತಿನ್ನುತ್ತಿವೆ. ಈ ನಾಯಿಗಳ ಸಾವಿನಿಂದ ಸದ್ಯ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಎರಡು ಚಿರತೆಗಳು ಗ್ರಾಮದ ಸುತ್ತುಮುತ್ತಲಿದ್ದು, ಅವು ಯಾವ ಸಂದರ್ಭದಲ್ಲಿ ಅಟ್ಯಾಕ್ ಮಾಡುತ್ತವೆ ಎನ್ನುವುದೇ ಸದ್ಯ ದೊಡ್ಡ ಆತಂಕ ಎದುರಾಗಿದೆ. ಹೀಗಾಗಿ ದಿಗ್ಗೇನಹಳ್ಳಿ ಮತ್ತು ಅಕ್ಕಪಕ್ಕದ ಗ್ರಾಮಸ್ಥರು ಸದ್ಯ ಮನೆಯಿಂದ ಹೊರಗೆ ಹೋಗುವುದಕ್ಕೆ ಭಯಬೀಳುತ್ತಿದ್ದಾರೆ.
ಚಿರತೆಗಳ ದಾಳಿ ಕುರಿತು ಈಗಾಗಲೇ ಭದ್ರಾವತಿಯ ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರು ದೂರು ನೀಡಿದ್ದಾರೆ. ಕಳೆದ ಮೂರು ನಾಲ್ಕು ದಿನಗಳ ಹಿಂದೆ ಚಿರತೆಯು ಗ್ರಾಮದ ಗಗನ ಎನ್ನುವ ಮಹಿಳೆಯ ಮನೆಯ ಆವರಣದಲ್ಲಿ ಸುತ್ತಾಡಿ ನಾಯಿಯನ್ನು ತೆಗೆದುಕೊಂಡು ಹೋಗಿದೆ. ಇದೇ ಮನೆಯಿಂದ ನಾಲ್ಕು ನಾಯಿಗಳನ್ನು ಚಿರತೆಗಳು ಬೇಟೆಯಾಡಿವೆ. ಚಿರತೆಯು ಮನೆಯ ಆವರಣದಲ್ಲಿ ಓಡಾಡಿಕೊಂಡಿರುವುದು ಸಿಸಿ ಕ್ಯಾಮರ್ ದಲ್ಲಿ ಸೆರೆಯಾಗಿದೆ. ಸದ್ಯ ಗ್ರಾಮದಲ್ಲಿ 25ಕ್ಕೂ ಹೆಚ್ಚು ನಾಯಿಗಳು ಚಿರತೆಗಳಿಗೆ ಬಲಿಯಾಗಿವೆ. ಚಿರತೆಗಳನ್ನು ಸೆರೆಹಿಡಿಯಬೇಕೆಂದು ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ರಾತ್ರಿ ಸಮಯದಲ್ಲಿ ಎರಡು ಚಿರತೆಗಳ ಚಲನವಲನ ಈ ಗ್ರಾಮದಲ್ಲಿ ಹೆಚ್ಚಾಗಿದೆ. ಗ್ರಾಮದಲ್ಲಿರುವ ಸಾಕು ಪ್ರಾಣಿಗಳನ್ನು ಗ್ರಾಮಸ್ಥರು ಚಿರತೆಗಳ ಭಯದಿಂದ ಮನೆ ಒಳಗೆ ಕಟ್ಟುತ್ತಿದ್ದಾರೆ. ಭದ್ರಾವತಿಯ ಅರಣ್ಯಾಧಿಕಾರಿಗಳು ಸದ್ಯ ಈ ಎರಡು ಚಿರತೆಗಳ ಬಲೆಗೆ ಬೋನ್ ನನ್ನು ಗ್ರಾಮದಲ್ಲಿಟ್ಟಿದ್ದಾರೆ. ಆದ್ರೆ ಚಾಲಾಕಿ ಚಿರತೆಗಳು ಮಾತ್ರ ಬೋನ್ ಒಳಗೆ ಬೀಳುತ್ತಿಲ್ಲ. ಇದರಿಂದ ಗ್ರಾಮಸ್ಥರು ಆತಂಕ ಮತ್ತಷ್ಟು ಹೆಚ್ಚಾಗಿದೆ. ಗ್ರಾಮಸ್ಥರು ಸಂಜೆಯಾಗುತ್ತಲೇ ಭಯದಿಂದ ಮನೆ ಸೇರುತ್ತಿದ್ದಾರೆ. ಗ್ರಾಮಸ್ಥರಿಗೆ ಅರಣ್ಯದಿಂದ ಕಾಡುಪ್ರಾಣಿಗಳು ಒಂದಲ್ಲ ಒಂದು ಸಮಸ್ಯೆಗಳನ್ನು ಮಾಡುತ್ತಿವೆ. ಕಳೆದ ತಿಂಗಳವಷ್ಟೇ ಕರಡಿಯು ಗ್ರಾಮದ ಓರ್ವ ವ್ಯಕ್ತಿಯ ಮೇಲೆ ದಾಳಿ ಮಾಡಿತ್ತು. ಈ ನಡುವೆ ಗದ್ದೆಯಲ್ಲಿ ಕಾಡು ಹಂದಿಗಳ ಹಾವಳಿ ಕೂಡಾ ಜೋರಾಗಿದೆ. ರೈತರ ಮೆಕ್ಕೆಜೋಳ ಬೆಳೆ ಕಾಡು ಹಂದಿಗಳು ಹಾಳುಮಾಡುತ್ತಿವೆ. ಈ ಪ್ರಾಣಿಗಳ ಕಾಟದ ನಡುವೆ ಈಗ ಚಿರತೆಗಳು ಗ್ರಾಮಕ್ಕೆ ಲಗ್ಗೆಯಿಟ್ಟಿವೆ. ಗ್ರಾಮಸ್ಥರು ಸದ್ಯ ನೆಮ್ಮದಿಯಿಂದ ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಚಿರತೆಯನ್ನು ಬೋನಿನಲ್ಲಿ ಬೀಳಿಸುವ ವಿಶ್ವಾಸದಲ್ಲಿದ್ದಾರೆ. ಕಳೆದ ವರ್ಷ ಕೂಡಾ ಈ ಭಾಗದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿತ್ತು. ಅರಣ್ಯಾಧಿಕಾರಿಗಳು ಆ ಚಿರತೆಯನ್ನು ತಮ್ಮ ಬೋನಿಗೆ ಬೀಳಿಸಿದ್ದರು. ಈ ವರ್ಷ ಕೂಡಾ ಮತ್ತೆ ಚಿರತೆಗಳು ಗ್ರಾಮದಲ್ಲಿ ಪ್ರತ್ಯಕ್ಷವಾಗಿವೆ. ಈ ಚಿರತೆಗಳ ಕಾಟದಿಂದ ತಮಗೆ ಮುಕ್ತಿಕೊಡಬೇಕೆಂದು ಗ್ರಾಮದ ಮುಖಂಡರು ಅರಣ್ಯಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಕಾಡಿನಲ್ಲಿ ಆಹಾರ ಹುಡುಕುವುದು ಚಿರತೆಗಳಿಗೆ ಕಷ್ಟವಾಗಿದೆ. ಈ ಹಿನ್ನಲೆಯಲ್ಲಿ ಚಿರತೆಗಳಿಗೆ ಕಾಡಿನ ಸಮೀಪದಲ್ಲಿರುವ ಗ್ರಾಮದಲ್ಲಿರುವ ನಾಯಿಗಳು ಸುಲಭವಾಗಿ ಬಲೆಗೆ ಬೀಳುತ್ತಿವೆ ಎಂಬ ಕಾರಣಕ್ಕೆ ಬರುತ್ತಿವೆ ಎನ್ನಲಾಗಿದೆ. ಸದ್ಯ ಈ ಗ್ರಾಮ ಮತ್ತು ಸುತ್ತಮುತ್ತಲು ರಾತ್ರಿಹೊತ್ತಿನಲ್ಲಿ ಚಿರತೆಗಳ ಓಡಾಟ ಹೆಚ್ಚಾಗಿವೆ. ನಾಯಿಗಳ ಬೇಟೆಯಾಡುವ ಚಿರತೆಗಳಿಗೆ ಅಪ್ಪಿತಪ್ಪಿ ಮನುಷ್ಯರು ಕೈಗೆ ಸಿಕ್ಕರೇ ಕಥೆ ಏನು? ಚಿರತೆಗಳು ನರಭಕ್ಷಕ ಆಗುವ ಮೊದಲೇ ಅವುಗಳನ್ನು ಅರಣ್ಯಾಧಿಕಾರಿಗಳು ತಮ್ಮ ಬಲೆಗೆ ಬೀಳಿಸಬೇಕಿದೆ.