ಖ್ಯಾತ ಶೇರ್ ಬ್ರೋಕರ್ ರಾಕೇಶ್ ಜುಂಜುನ್ ವಾಲಾ ಬಡತನದಲ್ಲಿ ಬೆಳೆದು ಕೊನೆಗೆ ಸಾವಿನ ಸಮಯದಲ್ಲಿ ಸುಮಾರು 40 ಸಾವಿರ ಕೋಟಿಯಷ್ಟು ಹಣವನ್ನು ಸಂಪಾದಿಸುತ್ತಾನೆ. ಬಹುತೇಕ ಎಲ್ಲರೂ ಆತನನ್ನು ಒಬ್ಬ ಯಶಸ್ವಿ ಉದ್ಯಮಿ ಎಂದೇ ಕರೆಯುತ್ತಾರೆ ಮತ್ತು ಒಪ್ಪಿಕೊಳ್ಳುತ್ತಾರೆ.
ಆದರೆ ಮದ್ಯ ವಯಸ್ಸಿನಲ್ಲಿಯೇ ಅನಾರೋಗ್ಯಕ್ಕೆ ತುತ್ತಾಗುವ ಆತ ಆ ಒತ್ತಡದ ಕಾರಣದಿಂದ ನಾನೊಬ್ಬ ವಿಫಲ ವ್ಯಕ್ತಿ ಎಂದೇ ತನ್ನನ್ನು ಭಾವಿಸುತ್ತಾನೆ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ……….
62 ನೆಯ ವಯಸ್ಸಿನಲ್ಲಿ ಆತ ದೀರ್ಘಕಾಲದ ಅನಾರೋಗ್ಯದಿಂದ ಇಹಲೋಕ ತ್ಯಜಿಸುತ್ತಾನೆ.
ಹಾಗಾದರೆ ಬದುಕಿನ ನೆಮ್ಮದಿಯ ಇನ್ನೊಂದು ಮುಖವನ್ನು ಕುರಿತು ಯೋಚಿಸಿದಾಗ……
ಕೂಲಿಕಾರರೊಬ್ಬರ ಬದುಕಿನ ಆತ್ಮಕಥನ…….
” ಇಂದಿಗೆ ಸರಿಯಾಗಿ ನಾನು ಕೂಲಿ ಕೆಲಸ ಮಾಡಲು ಆರಂಭಿಸಿ 70 ವರ್ಷವಾಯಿತು.
7 ನೇ ವಯಸ್ಸಿನಲ್ಲಿ ಪ್ರಾರಂಭವಾದ ನನ್ನ ಕೂಲಿ ಕೆಲಸ ಈಗಿನ ನನ್ನ 77 ನೆಯ ಈ ವಯಸ್ಸಿನಲ್ಲೂ ನಿರಂತರವಾಗಿ ನಡೆಯುತ್ತಿದೆ…………….
ಕೂಲಿ ಎಂದರೆ ಪೇಟೆ ಅಂಗಡಿಗಳಲ್ಲಿ ತರಕಾರಿ ಮೂಟೆ ಹೊರುವುದು. ಲಾರಿಗಳಿಗೆ ಮೂಟೆ ತುಂಬಿಸುವುದು ಮತ್ತು ಇಳಿಸುವುದು.
ಈಗಿನ ಹುಡುಗರಿಗೆ ತುಂಬಾ ಆಶ್ಚರ್ಯವಾಗಬಹುದು ಅಥವಾ ಕೆಲವರು ನಂಬದೇ ಇರಬಹುದು.
ಇಲ್ಲಿಯವರೆಗೂ ನಾನು ಒಮ್ಮೆಯೂ ಯಾವುದೇ ಗಾಯ ಅಥವಾ ಖಾಯಿಲೆಯಿಂದ ಆಸ್ಪತ್ರೆಗೆ ಹೋಗಿಲ್ಲ. 65 ನೆಯ ವಯಸ್ಸಿನಲ್ಲಿ ಒಮ್ಮೆ ಹೊಟ್ಟೆ ನೋವು ಮತ್ತು 73 ನೆಯ ವಯಸ್ಸಿನಲ್ಲಿ ಹಲ್ಲು ನೋವು ಬಂದಾಗ ಔಷಧಿ ಅಂಗಡಿಯಿಂದ ಎರಡೆರಡು ಮಾತ್ರೆ ತೆಗೆದುಕೊಂಡಿದ್ದು ಬಿಟ್ಟರೆ ಆ ಕಡೆ ತಲೆಯೇ ಹಾಕಿಲ್ಲ.
ಅದ್ದೂರಿಯಾಗಿ ನಡೆದ ಶ್ರೀ ಸೀತಾರಾಮಾಂಜನೇಯ ಸ್ವಾಮಿಯ ವೈಭವದ ತೆಪ್ಪೋತ್ಸವ https://tungataranga.com/?p=17490
ಕೊಟ್ಟಿರುವ 👆👆 ಲಿಂಕ್ ಬಳಸಿ ಸಂಪೂರ್ಣ ಸುದ್ದಿ ಓದಿ
ನನಗೆ 6 ಜನ ಮಕ್ಕಳು. 4 ಗಂಡು 2 ಹೆಣ್ಣು. ನನ್ನಾಕೆಯ ಎಲ್ಲಾ ಹೆರಿಗೆಗಳು ಸಹಜವಾಗಿ ಮತ್ತು ಮನೆಯಲ್ಲಿಯೇ ಆಗಿದೆ.
ಎರಡು ದಿನಕ್ಕೆ ಒಮ್ಮೆ ಹಲ್ಲುಜ್ಜುವ ನನ್ನ ಎಲ್ಲಾ ಹಲ್ಲುಗಳು ಈಗಲೂ ಕಬ್ಬನ್ನು ಕಚ್ಚಿ ತಿನ್ನುವಷ್ಟು ಗಟ್ಟಿಯಾಗಿಯೇ ಇದೆ.
ಈಗಲೂ ತಲೆಯಲ್ಲಿ ದಟ್ಟ ಕೂದಲಿದೆ. ತಿಂಗಳಿಗೊಮ್ಮೆ ಕಟಿಂಗ್ ಮಾಡಿಸಿದರೂ ಕೂದಲು ಸೊಂಪಾಗಿ ಬೆಳೆಯುತ್ತದೆ. ನಾನು ವಾರಕ್ಕೆ ಒಮ್ಮೆ ಮಾತ್ರ ತಲೆಗೆ ಸ್ನಾನ ಮಾಡುವುದು.
ಕಣ್ಣುಗಳು ಸಹ ಇರುವಂತೆಯೇ ಇದೆ. ಸಮಯವಾದಾಗ ಬರಿಗಣ್ಣಿನಿಂದ ಕನ್ನಡ ಪತ್ರಿಕೆ ಓದುತ್ತೇನೆ. ದೂರದ ವಸ್ತುಗಳೂ ಸ್ಪಷ್ಟವಾಗಿ ಕಾಣುತ್ತದೆ.
ಊಟದಲ್ಲಿ ಪಥ್ಯ ಎಂಬುದೇ ಗೊತ್ತಿಲ್ಲ. ಮನೆ ಊಟದ ಜೊತೆಗೆ ಹೊರಗಡೆ ಯಾರು ಏನೇ ಕೊಟ್ಟರೂ ಅಥವಾ ಕೊಡಿಸಿದರು ತಿನ್ನುತ್ತೇನೆ.
ಯಾವುದೇ ಸಮಯದಲ್ಲೂ ದಿಂಬಿನ ಮೇಲೆ ತಲೆ ಇಟ್ಟರೆ ಸಾಕು ಮೈ ಮರೆಯುವಷ್ಟು ನಿದ್ದೆ ಮಾಡುತ್ತೇನೆ.
ಸಿಗರೇಟು ಮದ್ಯದ ದುರಭ್ಯಾಸ ಮಾತ್ರ ಇಲ್ಲ.
ಮೂಟೆ ಕೂಲಿಯ ಕೆಲಸದ ನನಗೆ ಸುಳ್ಳು ಹೇಳುವ ಅವಕಾಶವೇ ಬರಲಿಲ್ಲ.
ಆಸೆ ಪಡುವಷ್ಟು ಆಯ್ಕೆಗಳೂ ನನಗಿರಲಿಲ್ಲ.
ಪ್ರವಾಸ ತೀರ್ಥಯಾತ್ರೆ ಒಮ್ಮೆಯೂ ಹೋಗಿಲ್ಲ.
ಎಲ್ಲಾ 6 ಮಕ್ಕಳಿಗೂ ಮದುವೆಯಾಗಿದೆ. ನನ್ನ ಹೆಂಡತಿಯ ಸಂಬಂಧಿಕರಲ್ಲೇ ಋಣಾನುಬಂಧ ಕೂಡಿ ದೇವಸ್ಥಾನಗಳಲ್ಲಿ ಮದುವೆ ಮಾಡಿ ಕೊಟ್ಟೆವು. ಮದುವೆ ದಿನ ಕೂಡ ನಾನು ಅರ್ಧ ದಿನ ಕೂಲಿ ಮಾಡಿದೆ.
ನನ್ನ ಯಾವ ಮಕ್ಕಳೂ ಶಾಲೆಗೆ ಹೋಗಿಲ್ಲ. ಅವರೂ ಕೂಲಿ ಮಾಡುತ್ತಲೇ ಬದುಕು ಕಟ್ಟಿಕೊಂಡವರು.
ಮನೆಯೇ ಇಲ್ಲದೆ ಸ್ವಾತಂತ್ರ್ಯ ಪೂರ್ವದಲ್ಲಿ ಬೀದಿಯಿಂದ ಪ್ರಾರಂಭವಾದ ಬದುಕು ಮೊದಲು ಗುಡಿಸಲು, ನಂತರ ಧರ್ಮ ಛತ್ರ, ಆಮೇಲೆ ಕೊಳಗೇರಿ, ಅನಂತರ ಈಗ ಸರ್ಕಾರ ಉಚಿತವಾಗಿ ಕೊಟ್ಟಿರುವ ಮನೆಯಲ್ಲಿ ಜೀವನ ನಡೆಸುತ್ತಿದ್ದೇನೆ.
ಯಾವುದೇ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿಯೂ ಬಿಪಿ ಶುಗರ್ ಅಥವಾ ಇನ್ಯಾವುದೂ ಚೆಕ್ ಮಾಡಿಸಿಲ್ಲ. ಈಗಾಗಲೇ 77 ರಲ್ಲಿರುವ ನಾನು ಶಿವ ಕರೆದಾಗ ಹೋಗಲು ಸಿದ್ದನಾಗಿದ್ದೇನೆ.
ಅದ್ಯಾರೋ ಬಸವಣ್ಣ ಅಂತ ಒಬ್ಬರು ಬಹಳ ಹಿಂದೆಯೇ ಹೇಳಿದ್ದರಂತೆ.
“ಕಾಯಕವೇ ಕೈಲಾಸ ” ಅಂತ.
ಅದು ನಿಜವಿರಬೇಕು ಅನಿಸುತ್ತಿದೆ….”
ಇದೂ ಸಹ ಪರಿಪೂರ್ಣವಲ್ಲ…..
ಆದರೆ ಬದುಕಿನ ನೆಮ್ಮದಿಯ ಒಂದು ಮುಖ ಮಾತ್ರ. ಆದರೆ ಅರ್ಥ ಮಾಡಿಕೊಳ್ಳಲು ಮತ್ತು ಅಳವಡಿಸಿ ಕೊಳ್ಳಲು ಇಬ್ಬರಿಂದಲೂ ಸಾಕಷ್ಟು ಪಾಠಗಳಿವೆ ಅಲ್ಲವೇ……….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ ಎಚ್. ಕೆ.
9844013068…