ಶಿವಮೊಗ್ಗ, ಜ.೦೯:
ಇಂದಿನ ತಾಂತ್ರಿಕ ಯುಗದ ಸಾಮಾಜಿಕ ಜಾಲತಾಣಗಳಲ್ಲಿ ಬೌದ್ಧಿಕ ಅದಃಪತನ ಎದ್ದುಕಾಣುತ್ತಿದೆ. ಕ್ರಿಯಾಶೀಲತೆ ಮರೆಯಾಗುತ್ತಿದೆ. ಮಾನಸಿಕತೆ ಕುಂದುತ್ತಿದೆ ಎಂದು ಶಿವಮೊಗ್ಗ ಪೊಲೀಸ್ ಉಪ ಅಧೀಕ್ಷಕರಾದ ಬಾಲರಾಜ್ ಹೇಳಿದರು.
ಅವರು ಇಂದು ಮದ್ಯಾಹ್ನ ಶಿವಮೊಗ್ಗದ ಮಥುರಾ ಪ್ಯಾರೆಡೈಸ್‌ನಲ್ಲಿ ತುಂಗಾ ತರಂಗ ದಿನಪತ್ರಿಕೆಯ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡುತ್ತಾ, ಓದುವ ಹವ್ಯಾಸ ಎಲ್ಲಾ ಮನಸ್ಸುಗಳಲ್ಲಿ ಬೆಳೆಯಬೇಕಿದೆ ಎಂದರು.
ಸಾಮಾಜಿಕ ಜಾಲತಾಣಗಳ ದುರ್ಬಳಕೆಯಿಂದ ಕುಗ್ಗಿರುವ ಬೌದ್ಧಿಕತೆಯ ನಡುವೆ ತುಂಗಾ ತರಂಗ ದಿನಪತ್ರಿಕೆ ಪ್ರತಿ ವರ್ಷ ವಾರ್ಷಿಕ ವಿಶೇಶಾಂಕ ಕ್ಯಾಲೆಂಡರ್ ಬಿಡುಗಡೆಯಂತಹ ಸಮಾರಂಭಗಳನ್ನು ಆಯೋಜಿಸಿರುವುದು ಸ್ವಾಗತಾರ್ಹ ವಿಷಯ. ಇಂದಿನ ಅವಸರದ ಯುಗದ ಓಟದಲ್ಲಿ ಮನುಷ್ಯ ತನ್ನ ಬದುಕನ್ನೇ ಕಳೆದುಕೊಳ್ಳುತ್ತಿದ್ದಾನೆ. ಒಂದಿಷ್ಟು ಚಿಂತಿಸುವ ವ್ಯವದಾನ ಇಲ್ಲದಿರುವುದು ದುರಂತವೇ ಹೌದು ಎಂದು ಹೇಳಿದರು.
ದೃಶ್ಯ ಮಾಧ್ಯಮಗಳ ಓಟದ ನಡುವೆ ಮುದ್ರಣ ಮಾಧ್ಯಮ ಸೊರಗುತ್ತಿದೆ. ಆದರೆ ನಿಜವಾಗಿಯೂ ಮುದ್ರಣ ಮಾದ್ಯಮ ಬದುಕನ್ನು ಕಟ್ಟಿಕೊಡುತ್ತದೆ. ಓದುವ ಹವ್ಯಾಸ ಇಂದಿನ ಯುವಪೀಳಿಗೆಯಲ್ಲಿ ಕಡಿಮೆಯಾಗುತ್ತಿರುವುದನ್ನು ತಪ್ಪಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ, ಉದ್ಯಮಿ ಎಲ್. ಸತ್ಯನಾರಾಯಣ ರಾವ್ ಮಾತನಾಡುತ್ತಾ, ಪತ್ರಿಕೆ ನಡೆಸುವ ಇಂದಿನ ದಿನಮಾನಗಳು ಕಷ್ಟದ ಹಾದಿ ಸವೆಸಿದಂತೆಯೆ ಸರಿ. ಮುದ್ರಣ ಪತ್ರಿಕೆಗಳು ತನ್ನದೇ ಆದ ಶಕ್ತಿ ಪ್ರದರ್ಶನ ಮಾಡುತ್ತಿವೆ. ಬದುಕು ಸಾರ್ಥಕವಾಗಿ ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡುತ್ತಿವೆ ಎಂದು ತುಂಗಾ ತರಂಗದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶ್ರೀನಿಧಿ ಟೆಕ್ಸ್‌ಟೈಲ್ಸ್‌ನ ಟಿ.ಆರ್.ಅಶ್ವಥನಾರಾಯಣ ಶ್ರೇಷ್ಠಿ, ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್‌ನ ಶೋಭಾ ವೆಂಕಟರಮಣ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಎನ್.ಗೋಪಿನಾಥ್, ಜಯನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮಾದಪ್ಪ, ರಾಜ್ಯ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷ ಜಿ.ಪದ್ಮನಾಭ್, ಅ.ನಾ.ವಿಜಯೇಂದ್ರರಾವ್ ಮಾತನಾಡಿ, ತುಂಗಾ ತರಂಗ ಪತ್ರಿಕಾ ಬಳಗದ ನಿರಂತರ ಶ್ರಮವನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರು, ತೆರಿಗೆ ಇಲಾಖೆ ಅಧಿಕಾರಿಗಳಾದ ವೆಂಕಟೇಶ್ವರ ಬಿ. ಅವರನ್ನು ಆತ್ಮೀಯವಾಗಿ ಸನ್ಮಾಸಿ ಗೌರವಿಸಲಾಯಿತು.
ಸಂಪಾದಕ ಎಸ್.ಕೆ.ಗಜೇಂದ್ರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ತುಂಗಾ ತರಂಗ ಪತ್ರಿಕೆ ಕಳೆದ ೧೨ ವರ್ಷಗಳಿಂದ ನಿರಂತರವಾಗಿ ವಾರ್ಷಿಕ ವಿಶೇಷಾಂಕ, ವಾರ್ಷಿಕ ಕ್ಯಾಲೆಂಡರ್ ಜೊತೆಗೆ ಸಮಗ್ರ ಮಾಹಿತಿಯ ಸಚಿತ್ರ ವರದಿಗಳು, ತನಿಖಾ ವರದಿಗಳನ್ನು ನೀಡುತ್ತಾ, ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ದೇಶ ವಿದೇಶಗಳಲ್ಲಿಯೂ ಗುರುತಿಸಿಕೊಂಡಿರುವ ತುಂಗಾ ತರಂಗ ಶಿವಮೊಗ್ಗ ಜಿಲ್ಲೆಯಲ್ಲಿ ಮುದ್ರಣಗೊಂಡು ಹಂಚಿಕೆಯಾಗುತ್ತಿದೆ ಇದಕ್ಕೆ ಕಾರಣಕರ್ತರಾದ ಎಲ್ಲಾ ಓದುಗರನ್ನು ಹಾಗೂ ಜಾಹೀರಾತುದಾರರಿಗೆ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಸ್ಮಾರ್ಟ್‌ಸಿಟಿ ಕಂಪನಿಯ ಜನರಲ್ ಮ್ಯಾನೇಜರ್ ಶರತ್, ಶ್ರೀನಿಧಿ ಸಂಸ್ಥೆಯ ವೆಂಕಟೇಶ ಮೂರ್ತಿ, ಮೆಸ್ಕಾಂ ಇಂಜಿನಿಯರ್ ಜಗದೀಶ್, ಭಾರತೀಯ ಮಾನವ ಹಕ್ಕುಗಳ ಕಮಿಟಿಯ ಕೆ. ನಾಗರಾಜ್, ರಮೇಶ್ ಎಸ್., ಶಾರದಾ ಶೇಷಗಿರಿಗೌಡ, ಹಾಡೋನಹಳ್ಳಿ ಜಗದೀಶ್, ಎಸ್.ಹೆಚ್.ಕೃಷ್ಣಮೂರ್ತಿ, ಶೇಖರಪ್ಪ, ಡಾ.ಅರವಿಂದ್, ಆರುಂಡಿ ಶ್ರೀನಿವಾಸ್‌ಮೂರ್ತಿ, ಭರತೇಶ್, ಶಿ.ಜು.ಪಾಶ, ಚಂದ್ರಶೇಖರ್, ಸೋಮಶೇಖರ್, ಮೋಹನ್, ಅಭಿನಂದನ್, ಗಣೇಶ್, ಅರುಣ್, ಮಾಲತೇಶ್, ಮಾಲತೇಶ್, ಮಂಜುನಾಥ್, ಶಿಕ್ಷಕಿ ವೀಣಾರಾಣಿ, ಮಲ್ಲಿಕ್, ದರ್ಶನ್, ಉದಯ್, ರವಿ, ಬಿ.ಇ. ಪದವೀಧರ ತಿಮ್ಮೇಶ್, ಉಮೇಶ್, ರಾಕೇಶ್ ಸೋಮಿನಕೊಪ್ಪ ಸೇರಿದಂತೆ ಮತ್ತಿತರರಿದ್ದರು.