ಶಿವಮೊಗ್ಗ: ಶಿವಪ್ಪನಾಯಕ ಮಾರುಕಟ್ಟೆಯ ಬ್ಯಾರೀಸ್ ಮಾಲ್ ಗೆ ಸಂಬಂಧಿಸಿದಂತೆ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅಜೆಂಡಾಕ್ಕೆ ಸೇರಿಸಿರುವುದು ಆಡಳಿತ ಪಕ್ಷದ ನಾಯಕ ಎಸ್.ಎನ್. ಚನ್ನಬಸಪ್ಪ ಎಂಬುದು ಸಾಬೀತಾಗೀರುವುದರಿಂದ ಅವರು ತಮ್ಮ ಸ್ಥಾನಕ್ಕೆ ತಕ್ಷಣವೇ ರಾಜೀನಾಮೆ ನೀಡಬೇಕೆಂದು ಪಾಲಿಕೆ ವಿಪಕ್ಷ ನಾಯಕಿ ರೇಖಾ ರಂಗನಾಥ್ ಒತ್ತಾಯಿಸಿದರು.
ಅವರು ಇಂದು ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬ್ಯಾರೀಸ್ ಮಾಲ್ ಗೆ ಸಂಬಂಧಿಸಿದಂತೆ ಹಲವು ಗೊಂದಲಗಳು ಮೂಡಿದ್ದವು. 99 ವರ್ಷ ಲೀಸ್ ಗೆ ಮುಂದುವರೆಸುವುದಕ್ಕೆ ಸಂಬಂಧಿಸಿದಂತೆ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅಜೆಂಡಾಕ್ಕೂ ತರಲಾಗಿತ್ತು. ಈ ಅಜೆಂಡಾಕ್ಕೆ ತರಲು ಹೇಗೆ ಸಾಧ್ಯ? ಆಯುಕ್ತರು ಮತ್ತು ಮೇಯರ್ ಗಮನಕ್ಕೆ ಏಕೆ ಬರಲಿಲ್ಲ ಎಂದು ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ಕೂಡ ನಡೆಸಿದ್ದರು. ಇದಕ್ಕಾಗಿ ಸಮಿತಿ ಕೂಡ ರಚಿಸಲಾಗಿತ್ತು. ಪ್ರತಿಭಟನೆ ನಂತರ ವರದಿಯನ್ನು ಬಿಡುಗಡೆ ಮಾಡಲಾಗಿದೆ ಎಂದರು.
ವರದಿ ಅನ್ವಯ ಪಾಲಿಕೆಯ ಸಿಬ್ಬಂದಿ ಸಮಿತಿಯ ಮುಂದೆ ಹೇಳಿಕೆ ನೀಡಿದ್ದಾರೆ. ಚನ್ನಬಸಪ್ಪ ಅಜೆಂಡಾದಲ್ಲಿ ಸೇರಿಸುವಂತೆ ನನಗೆ ಫೋನ್ ಕರೆ ಮಾಡಿದ್ದರು. ನಾನು ಮೇಯರ್ ಮತ್ತು ಆಯುಕ್ತರಿಗೆ ತಿಳಿಸಬೇಕು ಎಂದಿದ್ದೆ. ನಾನು ತಿಳಿಸುತ್ತೇನೆ. ನೀವು ಸೇರಿಸಿ ಎಂದು ಒತ್ತಡ ತಂದಿದ್ದರಿಂದ ನಾನು ಸೇರಿಸಿದೆ ಎಂದು ಒಪ್ಪಿಕೊಂಡಿದ್ದಾರೆ. ಹಾಗಾಗಿ ಅಜೆಂಡಾಕ್ಕೆ ವಿಷಯ ಬರಲು ಚನ್ನಬಸಪ್ಪ ಅವರೇ ನೇರ ಕಾರಣ ಎಂದು ಆರೋಪಿಸಿದರು.
ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಚನ್ನಬಸಪ್ಪ ಅವರು ಕಾಂಗ್ರೆಸ್ ಮೇಲೆ ತಪ್ಪು ಹೊರಿಸಿದ್ದಾರೆ. 60 ವರ್ಷಕ್ಕೆ ವಿಸ್ತರಿಸಲು 2015 ರ ಮಾರ್ಚ್ 28 ರಂದು ನಡೆದ ಸಭೆಯಲ್ಲಿ ಈ ವಿಷಯವನ್ನು ಮುಂದುಟ್ಟವರೇ ಕಾಂಗ್ರೆಸ್ ಸದಸ್ಯರು ಎಂದು ಆರೋಪಿಸಿದ್ದಾರೆ. ಆದರೆ, ಅವರಿಗೆ ನೆನಪಿರಲಿಕ್ಕಿಲ್ಲ. ಮೇಯರ್ ಮಂಗಳಾ ಅಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಮ್ಮತದಿಂದ ಎಲ್ಲಾ ಸದಸ್ಯರು ತೀರ್ಮಾನ ಕೈಗೊಂಡು 60 ವರ್ಷ ಕೊಡಲು ಸಾಧ್ಯವಿಲ್ಲ. 32 ವರ್ಷ ಎಂದು ತೀರ್ಮಾನ ಮಾಡಲಾಗಿತ್ತು ಎಂದರು.
ಚನ್ನಬಸಪ್ಪ ಅವರು ತಮ್ಮ ತಪ್ಪು ಮುಚ್ಚಿಕೊಳ್ಳಲು ಕಾಂಗ್ರೆಸ್ ಸದಸ್ಯರ ಮೇಲೆ ಆರೋಪ ಮಾಡುತ್ತಿದ್ದಾರೆ. ಸ್ಥಾಯಿ ಸಮಿತಿ ಮುಂದೆ ಈ ವಿಷಯ ಬಂದಿದ್ದು, ಸ್ಥಾಯಿ ಸಮಿತಿ ಕೂಡ ತಿರಸ್ಕರಿಸಲ್ಪಟ್ಟ ಈ ವಿಷಯವನ್ನು ಅಜೆಂಡಾಕ್ಕೆ ತರಲು ಇವರೇ ಕಾರಣ. ಇದರ ಹಿಂದೆ ಕಿಕ್ ಬ್ಯಾಕ್ ಕೂಡ ತೆಗೆದುಕೊಂಡಿದ್ದಾರೆ ಎಂಬ ಆರೋಪಗಳು ಕೂಡ ಕೇಳಿ ಬರುತ್ತಿವೆ. ಹಾಗಾಗಿ ಇದು ಕೋಟ್ಯಂತರ ರೂ.ಗಳ ಹಗರಣ ಕೂಡ ಆಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ರಮೇಶ್ ಹೆಗ್ಡೆ, ಆರ್.ಸಿ. ನಾಯ್ಕ್, ಹೆಚ್.ಸಿ. ಯೋಗೀಶ್, ಯಮುನಾ ರಂಗೇಗೌಡ, ಮಂಜುಳಾ ಶಿವಣ್ಣ ಇದ್ದರು.