ಶಿವಮೊಗ್ಗ: ಶಿವಮೊಗ್ಗ ಐಎಂಎ ಕ್ರಿಕೇಟ್ ಅಸೋಸಿಯೇಷನ್ ವತಿಯಿಂದ ಡಿ.23 ರಿಂದ 25ರ ವರೆಗೆ ಐಎಂಎ ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಪಂದ್ಯಾವಳಿಯ ಸಂಚಾಲಕ ಡಾ.ಬಿ.ಬಸವರಾಜ ತಿಳಿಸಿದರು. 

 ಅವರು ಇಂದು ಮೀಡಿಯಾಹೌಸ್ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಸತತ 7 ವರ್ಷಗಳಿಂದ ಐಎಂಎ ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯು ರಾಜ್ಯದ ಹಲವು ಜಿಲ್ಲೆಗಳಲ್ಲಿ ಯಶಸ್ವಿಯಾಗಿ ನಡೆದಿದೆ. ಪ್ರಥಮ ಬಾರಿಗೆ 8ನೇ ಆವೃತ್ತಿಯನ್ನು ಶಿವಮೊಗ್ಗದಲ್ಲಿ ಆಯೋಜಿಸಲಾಗಿದೆ ಎಂದರು.

 ಶಿವಮೊಗ್ಗ ಐಎಂಎ ಘಟಕದ 4 ತಂಡಗಳು ಸೇರಿದಂತೆ ವಿವಿಧ ಜಿಲ್ಲೆಯ ಸುಮಾರು 32 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದು, ಸುಮಾರು 500ಕ್ಕೂ ಹೆಚ್ಚು ಆಟಗಾರರು ಭಾಗವಹಿಸುತ್ತಿದ್ದಾರೆ. ಈ ಆಟಗಾರರೆಲ್ಲರೂ ಕಡ್ಡಾಯವಾಗಿ ಐಎಂಎ ಶಾಶ್ವತ ಸದಸ್ಯರಾಗಿರಬೇಕು ಎಂಬ ನಿಯಮವಿದೆ. ರಾಜ್ಯಮಟ್ಟದ ಪಂದ್ಯಾವಳಿ ಆಯೋಜನೆಯಿಂದಾಗಿ ಐಎಂಎ ಸದಸ್ಯತ್ವ ಅಭಿಯಾನ ಮತ್ತು ಒಗ್ಗಟ್ಟನ್ನು ಪ್ರೋತ್ಸಾಹಿಸುತ್ತಿದೆ ಎಂದರು. 

 ಶಿವಮೊಗ್ಗ ನಗರದ ಪೆಸೆಟ್ ಕಾಲೇಜ್, ಸಹ್ಯಾದ್ರಿ ಕಾಲೇಜ್, ಜೆಎನ್ಎನ್ಸಿ ಕಾಲೇಜ್ ಹಾಗೂ ಭದ್ರಾವತಿಯ ವಿಐಎಸ್ಎಲ್ ಕ್ರೀಡಾಂಗಣದಲ್ಲಿ ಪಂದ್ಯಾವಳಿಗಳು ನಡೆಯಲಿದ್ದು, ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಈ ಪಂದ್ಯಾವಳಿ ನಡೆಯಲಿದೆ. ಪ್ರತಿ ತಂಡದಲ್ಲಿ 15 ಆಟಗಾರರಿರುತ್ತಾರೆ. 40 ಸಾವಿರ ರೂ. ನೋಂದಣಿ ಶುಲ್ಕವಿದೆ ಎಂದರು. 

 ಡಿ.23ರ ಬೆಳಿಗ್ಗೆ 8 ಗಂಟೆಗೆ ಪೆಸೆಟ್ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಾವಳಿಯ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ಕುಮಾರ್ ನೆರವೇರಿಸಲಿದ್ದಾರೆ. 25ರ ಸಂಜೆ 4.30ಕ್ಕೆ ಪೆಸೆಟ್ ಕಾಲೇಜಿನ ಕ್ರೀಡಾಂಗಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಎಂದರು. 

 ಪತ್ರಿಕಾಗೋಷ್ಟಿಯಲ್ಲಿ ಐಎಂಎ ಶಿವಮೊಗ್ಗ ಘಟಕದ ಅಧ್ಯಕ್ಷ ಡಾ.ಎಂ.ಎಸ್.ಅರುಣ್, ಪದಾಧಿಕರಿಗಳಾದ ಡಾ.ಕೆ.ಗಿರೀಶ್ಕುಮಾರ್, ಡಾ.ದಯಾನಂದ್, ಡಾ.ಶ್ರೀನಿವಾಸ್, ಡಾ.ರಂಜಿತ್, ಡಾ.ಶಶೀರ್ ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!