ಶಿವಮೊಗ್ಗ: ರೈತರಿಗೆ ಹಕ್ಕುಪತ್ರ ಕೊಡಿಸುವಲ್ಲಿ ಶಾಸಕ ಕೆ.ಬಿ. ಅಶೋಕ ನಾಯ್ಕ ತಾರತಮ್ಯ ಎಸಗುತ್ತಿದ್ದಾರೆ ಎಂದು ರಾಜ್ಯ ಬಂಜಾರ ರೈತಸಂಘ ಆರೋಪಿಸಿದೆ.
ಇಂದು ಮೀಡಿಯಾ ಹೌಸ್ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥಾಪಕ ರಾಜ್ಯಾಧ್ಯಕ್ಷ ಪಿ.ಕೃಷ್ಣಾ ನಾಯ್ಕ ಕುಂಚೇನಹಳ್ಳಿ ಗ್ರಾಮದಲ್ಲಿ ಹಲವು ವರ್ಷಗಳಿಂದ ಜಮಿನು ಸಾಗುವಳಿ ಮಾಡುತ್ತಾ ಬಂದಿದ್ದಾರೆ. 95. 96. 53, 50,57ರ ಅಡಿಯಲ್ಲಿ ಅರ್ಜಿಗಳನ್ನೂ ಹಾಕಿದ್ದಾರೆ. ಅಧಿಕಾರಿಗಳ ಆದೇಶದಂತೆ ಟಿಟಿಯನ್ನೂ ಕಟ್ಟಿರುತ್ತಾರೆ. ಮತ್ತು ನ್ಯಾಯಾಲಯದ ಮೆಟ್ಟಿಲನ್ನೂ ಏರಿರುತ್ತಾರೆ. ಉಪವಿಭಾಗಾಧಿಕಾರಿಗಳು 2017ಮತ್ತು 18ರಲ್ಲಿಯೇ ಸಾಗುವಳಿ ಚೀಟಿ ಕೊಡಲು ಆದೇಶ ಮಾಡಿದ್ದರು. ಆದರೆ ಕೆಲ ರಾಜಕೀಯ ಪ್ರಭಾವಿಗಳ ಒತ್ತಡದಿಂದ ತಡೆಹಿಡಿದಿದ್ದಾರೆ ಎಂದು ಆರೋಪಿಸಿದರು.
ಕೆ.ಬಿ. ಅಶೋಕ್ ನಾಯ್ಕ ಅವರು ಅವರ ಹಿಂಬಾಲಕರಿಗೆ ಮಾತ್ರ ಸಾಗುವಳಿ ಚೀಟಿ ಕೊಡಲು ಮುಂದೆ ಬಂದಿದ್ದಾರೆ. ರಾಜಕಾರಣದ ಹಿನ್ನೆಲೆಯಲ್ಲಿ ಇತರೆ ಪಕ್ಷದ ರೈತರಿಗೆ ಸಾಗುವಳಿ ಚೀಟಿ ನೀಡದಂತೆ ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಶಾಸಕರು ಎಲ್ಲರ ಪರವಾಗಿಯೂ ಕೆಲಸ ಮಾಡಬೇಕು. ತಾರತಮ್ಯ ಮಾಡಬಾರದು. ಮುಂದಿನ ದಿನಗಳಲ್ಲಿ ಎಲ್ಲ ರೈತರಿಗೂ ಕಾನೂನಾತ್ಮಕವಾಗಿಯೆ ಭೂಮಿಯ ಹಕ್ಕು ನೀಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಮಂಜ ನಾಯ್ಕ,ತಾ. ಅಧ್ಯಕ್ಷ ಹನುಮ ನಾಯ್ಕ, ನಾಗರಾಜ ನಾಯ್ಕ, ಲಂಕೇಶ್ಕುಮಾರ್, ಚೇತನ್ ಮುಂತಾದವರಿದ್ದರು.