ದೇಶದಲ್ಲಿ ಯಾವುದೇ ಚುನಾವಣೆ ನಡೆದರು ಬಿಜೆಪಿಯೇ ಗೆಲ್ಲುವುದು ನಿಶ್ಚಿತ. ಚುನಾವಣೆ ಮೊದಲೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಅನೇಕ ಸಮೀಕ್ಷೆಗಳು ಹೇಳಿದೆ. ಈ ಬಗ್ಗೆ ಯಾವುದೇ ಸಂಶಯ ಬೇಡ. ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಜಯಭೇರಿ ಭಾರಿಸುವುದಲ್ಲದೆ. ಮುಂಬರುವ ಕರ್ನಾಟಕದ ಚುನಾವಣೆಯಲ್ಲು ಮೊಟ್ಟ ಮೊದಲ ಬಾರಿಗೆ ಸಂಪೂರ್ಣ ಬಹುಮತದಿಂದ ಅಧಿಕಾರ ಹಿಡಿಯಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಎಲ್ಲಿದೆ? ಕಾಂಗ್ರೆಸ್‌ನ ಇಬ್ಬರು ನಾಯಕರು ಫೈಲ್‌ವಾನರಂತೆ ಬಡಿದಾಡುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ಇನ್ನು ಕ್ಷೇತ್ರ ಯಾವುದೆಂದು ಗೊತ್ತಿಲ್ಲ. ೨೨೪ ಕ್ಷೇತ್ರವು ನನ್ನದೇ ಎಂದು ಹೇಳುತ್ತಾರೆ. ಹಾಗಾದರೆ ಬಾದಾಮಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾಕೆ ನಿಲ್ಲುತ್ತಿಲ್ಲ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ವಿಪಕ್ಷ ನಾಯಕನ ಸ್ಥಾನವನ್ನು ಕಳೆದುಕೊಳ್ಳಲಿದೆ ಎಂದರು.
ಬಿಜೆಪಿ ಸಂಘಟನಾತ್ಮಕವಾಗಿ ಮನೆ ಮನೆಗೆ ಭೇಡಿ ನೀಡಿದೆ. ನಮ್ಮೆಲ್ಲ ಪೇಜ್ ಪ್ರಮುಖರು ಮತದಾರರನ್ನು ಭೇಟಿಯಾಗಿದ್ದಾರೆ. ಸಂಪೂರ್ಣ ಬಹುಮತ ಬರುವುದು ನಿಶ್ಚಿತ ಎಂದರು
.
ಜನಾರ್ದನರೆಡ್ಡಿ ರಾಜಕೀಯ ಪ್ರವೇಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ಎಲ್ಲರು ಸ್ವತಂತ್ರರು ಅವರು ಹೊಸ ಪಕ್ಷ ಕಟ್ಟುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ಗಂಗಾವತಿಯಲ್ಲಿ ಬಿಜೆಪಿಯಿಂದಲೇ ಸ್ಪರ್ಧಿಸುವುದರ ಬಗ್ಗೆ ಮಾತುಕತೆ ನಡೆದಿದೆ ಎಂದು ಮಾಧ್ಯಮಗಳು ಹೇಳುತ್ತಿವೆ. ಅದರ ಬಗ್ಗೆಯೂ ನನಗೆ ಗೊತ್ತಿಲ್ಲ ಎಂದರು.
ಸಂಪುಟ ವಿಸ್ತರಣೆ ಬಗ್ಗೆ ಕೂಡ ನನಗೆ ಏನು ತಿಳಿಯದು. ಕೇಂದ್ರದ ನಾಯಕರ ನಿರ್ಧಾರಕ್ಕೆ ಬಿಟ್ಟ ವಿಚಾರ. ಚುನಾವಣೆಗೆ ಇನ್ನು ಕೇವಲ ೪ ತಿಂಗಳು ಇರುವಾಗ ಕೇಂದ್ರದ ನಾಯಕರು ರಾಜ್ಯದಲ್ಲಿ ಬಿಜೆಪಿ ಪೂರ್ಣ ಬಹುಮತಕ್ಕೆ ಬರಲು ಎಲ್ಲಾ ತಂತ್ರಗಾರಿಕೆಯನ್ನು ಮಾಡುತ್ತಾರೆ ಎಂದರು.
ಮಹಾರಾಷ್ಟ್ರದ ಗಡಿ ವಿವಾದಕ್ಕೆ ಸಂಬಂಧಿಸಿದಂತೆ, ಪ್ರತಿಕ್ರಿಯಿಸಿದ ಅವರು ಅಲ್ಲಿನ ಕೆಲವು ನಾಯಕರಿಗೆ ಮಾಡಲು ಉದ್ಯೋಗ ಇಲ್ಲ. ಅವರಿಗೆ ರಾಜ್ಯದ ಒಂದು ಹನಿ ನೀರು ಮತ್ತು ಭೂಮಿ ಯಾವುದು ಸಿಗಲ್ಲ. ಕರ್ನಾಟಕ ಮತ್ತು ಮಹಾರಾಷ್ಟ್ರದ ಜನ ಅಣ್ಣತಮ್ಮಂದಿರಂತೆ ಇದ್ದಾರೆ. ಕೆಲವು ರಾಜಕಾರಣಿಗಳು ಗೊಂದಲ ಮೂಡಿಸುತ್ತಿದ್ದು, ಎರಡು ಕಡೆಯ ಜನ ಅವರಿಗೆ ಛೀಮಾರಿ ಹಾಕುತ್ತಿದ್ದಾರೆ. ಕರ್ನಾಟಕಕ್ಕೆ ಸೇರಲು ಅಪೇಕ್ಷೆ ಪಟ್ಟ ಗಡಿಭಾಗದ ಜನರಿಗೆ ಮಹಾರಾಷ್ಟ್ರ ಸರ್ಕಾರ ನೋಟೀಸ್ ನೀಡುವುದನ್ನು ಬಿಟ್ಟು ಕೂಡಲೆ ಮೂಲಭೂತ ಸೌಲಭ್ಯ ಒದಗಿಸಲಿ ನಮ್ಮ ಕರ್ನಾಟಕಕ್ಕೆ ಸೇರ ಬನ್ನಿ ಎಂದು ನಾನು ಹೇಳಿ ಮತ್ತೊಂದು ವಿವಾದ ಸೃಷ್ಟಿ ಮಾಡಲ್ಲ ಮೊದಲು ಮಹಾರಾಷ್ಟ್ರದ ಗಡಿಭಾಗದ ಜನರಿಗೆ ಅಗತ್ಯ ಬೇಡಿಕೆಗಳನ್ನು ಸರ್ಕಾರ ಪೂರೈಸಲಿ ಎಂದರು.