ಭದ್ರಾವತಿ ತಾಲೂಕಿನ ಸಿಂಗನಮನೆ ಕಸಬಾ ೨ನೇ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಗ್ರಾಮಲೆಕ್ಕಿಗ ಸುನೀಲ್ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ವ್ಯಾಪ್ತಿಯ ಗ್ರಾಮಸ್ಥರು ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾಗಿರುವ ಜಾತಿ ಮತ್ತು ಅದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದರೆ ತುಂಡು ಜಮೀನಿರುವವರಿಗೆ ಜಮೀನು ಜಾಸ್ತಿ ಇದೆ. ಆದಾಯ ಎರಡು ಪಟ್ಟಾಗಿದೆ. ನೀವು ಯಾರಿಗೆ ಹುಟ್ಟಿದ್ದು, ನಿಮ್ಮ ತಂದೆ ಯಾರು…? ಹಾಗೂ ಇನ್ನು ಹಲವು ಅವ್ಯಾಚ ಶಬ್ದಗಳಿಂದ ಪ್ರಶ್ನೆ ಕೇಳಿ ವೈಯಕ್ತಿಕವಾದ ಖಾಸಗಿ ಬದುಕಿನ ರಹಸ್ಯವನ್ನು ಕೆದುಕುತ್ತಾರೆ ಎಂದು ಇಲ್ಲಿನ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಗ್ರಾಮಲೆಕ್ಕಿಗ ಸುನೀಲ್ ಅವರು ಆದಾಯ ಪ್ರಮಾಣದಲ್ಲಿ ೪೦ ಸಾವಿರ ೮೦ ಸಾವಿರ ಲಕ್ಷ ಇದ್ದವರಿಗೆ ೨.೫ ಲಕ್ಷದ ಆದಾಯ ಪ್ರಮಾಣ ಪತ್ರ ನೀಡುತ್ತಾ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ನೀಡುತ್ತಾ ಶಾಲೆಯ ಶುಲ್ಕ ಕಟ್ಟಲಾ ಗದೇ ತಂದೆ ತಾಯಿಯರಿಗೆ ರಾಕ್ಕಸನಂತೆ ಕಾಡುತ್ತಿದ್ದಾನೆ ಎಂದು ಮನವಿಯಲ್ಲಿ ಗ್ರಾಮಸ್ಥರು ದೂರಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಅಥವಾ ಇಲಾಖೆ ಗ್ರಾಮಲೆಕ್ಕಿಗ ಸುನೀಲ್ ಅವರನ್ನು ಕೂಡಲೇ ಅಮಾನತ್ತಿನಲ್ಲಿಟ್ಟು ಈತನ ವಿರುದ್ಧ ಸೂಕ್ತ ತನಿಖೆ ನಡೆಸುವುದರ ಜೊತೆಗೆ ಬೇರೆ ಸ್ಥಳಕ್ಕೆ ನಿಯೋಜನೆ ಮಾಡಲು ಗ್ರಾಮಸ್ಥರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಕೂಡಲೇ ಈತನ ವಿರುದ್ಧ ಕ್ರಮಕೈಗೊಳ್ಳಲು ಗ್ರಾಮೀಣ ಪ್ರದೇಶದಲ್ಲಿ ನೊಂದ ಗ್ರಾಮಸ್ಥರಾದ ಜವರೇಗೌಡ, ಗೋವಿಂದೇಗೌಡ, ಕೆಂಪಮ್ಮ, ರತ್ನಮ್ಮ, ರಾಜು, ರಾಮಕೃಷ್ಣ, ನಾಗರಾಜ್, ದೇವಮ್ಮ, ತಮ್ಮಯ್ಯ, ಮೋಹನ್, ವೆಂಕಟೇಶ್ ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ.