ಕಾಲೇಜು ದಿನಗಳು ಸುವರ್ಣಯುಗ ಇದ್ದಹಾಗೆ, ವಿದ್ಯಾರ್ಥಿಗಳು ಅದನ್ನು ಯಾವ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳುತ್ತಾರೊ ಅದೇ ರೀತಿಯಲ್ಲಿ ಅವರ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದ್ದಾರೆ.

ಅವರು ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ, ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡಿ ಶಿವಮೊಗ್ಗ ಇದರ ವಿವಿಧ ಘಟಕಗಳ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಇವತ್ತು ಎನ್ಇಎಸ್ನಂತಹ ವಿದ್ಯಾ ಸಂಸ್ಥೆಗಳು ಮಕ್ಕಳಿಗೆ ಶಿಕ್ಷಣದ ಜೊತೆಗೆ ನಮ್ಮ ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಕೂಡ ಕಲಿಸುತ್ತಿದೆ. ಉತ್ತಮ ಶಿಕ್ಷಣಕ್ಕೆ ಪೂರಕ ವಾತಾವರಣ ಕಲ್ಪಿಸಿದೆ. ನಮ್ಮ ವೇದ,ಪುರಾಣ, ಸಂಸ್ಕಾರ, ಸಂಸ್ಕೃತಿ, ಆಚಾರ ವಿಚಾರಗಳ ಪ್ರಶ್ನೆ ಬಂದಾಗ ಯಾವುದೇ ಕೀಳರಿಮೆ ಬೇಡ ನಮ್ಮ ಸಂಸ್ಕೃತಿ ವಿಶ್ವದಲ್ಲೇ ಅತ್ಯುತ್ತಮವಾಗಿದೆ ಎಂದರು.
ನವೆಂಬರ್ ತಿಂಗಳು ಬಂದಾಗ ಮಾತ್ರ ಕನ್ನಡದ ಬಗ್ಗೆ ಗೌರವ ಮತ್ತು ಪ್ರೀತಿ ಬೇಡ. ಅದು ನಿರಂತರವಾಗಿರಬೇಕು. ಕನ್ನಡಿಗರು ಎಷ್ಟು ಧಾರಾಳಿಗಳು ಎಂದರೆ ಬೆಂಗಳೂರಿನಲ್ಲಿ ಕನ್ನಡಕ್ಕಿಂತ ಅನ್ಯ ಭಾಷಿಗರನ್ನೇ ನಾವು ಪ್ರೀತಿಸಿ ಬೆಳೆಸಿದ್ದೇವೆ. ಕನ್ನಡ ರಾಜ್ಯೋತ್ಸವ ಆಚರಣೆ ಕೇವಲ ಭಾಷೆಯ ಬೆಳವಣಿಗೆಗಾಗಿ ಅಲ್ಲ. ಕನ್ನಡ ಭಾಷೆಯ ಭಾವನಾತ್ಮಕ ಸಂಬಂಧ ಬೆಳೆಸುವಲ್ಲಿ ಅನೇಕ ಹಿರಿಯರು ತಮ್ಮ ಸಾಹಿತ್ಯಗಳ ಮೂಲಕ ಕಷ್ಟಪಟ್ಟಿದ್ದಾರೆ. ನಮ್ಮ ದೇಶ, ಭಾಷೆ, ಸಂಸ್ಕೃತಿಗೆ ಪ್ರತಿಯೊಬ್ಬರು ಹೆಚ್ಚಿನ ಮಹತ್ವ ಕೊಡಬೇಕು. ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಿ ನಂತರ ಬೇರೆ ಭಾಷೆಗೆ ಗೌರವ ಕೊಡಬೇಕು ಎಂದರು.

ಇತ್ತೀಚೆಗೆ ಜನರ ಮನಸ್ಥಿತಿ ಬದಲಾಗುತ್ತಿದೆ. ಗೋಕಾಕ್ ವರದಿ ಅನುಷ್ಟಾನದಲ್ಲಿ ನೇತೃತ್ವ ವಹಿಸಿದ ಕನ್ನಡದ ಮೇರು ನಟ ಡಾ.ರಾಜ್ಕುಮಾರ್ ಅವರನ್ನು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು. ಜನರನ್ನು ತಲುಪುವ ಪ್ರಮುಖ ಮಾಧ್ಯಮವಾದ ಕನ್ನಡ ಚಿತ್ರಗಳ ಮೂಲಕ ಅತ್ಯುತ್ತಮ, ಸಾಮಾಜಿಕ ಸಂದೇಶವನ್ನು ಅವರು ನೀಡಿದರು. ಕನ್ನಡತನವನ್ನು ಗಟ್ಟಿಗೊಳಿಸಿದವರು ಅವರ ಮಗ ಪುನೀತ್ ಕೂಡ ಅದೇ ಹಾದಿಯಲ್ಲಿ ಸಾಗಿ ಕನ್ನಡರತ್ನ ಪ್ರಶಸ್ತಿಗೆ ಭಾಜನರಾದರು.

ಇವತ್ತಿನ ಧಾರವಾಹಿಗಳು ನಮ್ಮ ಸಂಸ್ಕೃತಿಗೆ ಮತ್ತು ಭಾರತೀಯ ಅಭಿರುಚಿಗೆ ವಿರುದ್ಧವಾಗಿ ಕಾಲ್ಪನಿಕ ದೃಷ್ಟಿಯನ್ನಿಟ್ಟುಕೊಂಡು ಪ್ರಸಾರವಾಗುತ್ತಿದೆ. ಅದು ಎಲ್ಲವು ನಿಜವಲ್ಲ. ಹೆಣ್ಣಿಗೆ ಅತ್ಯಂತ ಗೌರವ ನೀಡಿದ ಸಂಸ್ಕೃತಿ ನಮ್ಮದು. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಒಂದಿಷ್ಟು ಒಳ್ಳೆಯ ಅಭ್ಯಾಸವನ್ನು ರೂಢಿಸಿಕೊಂಡು ಎಲ್ಲಾ ವಿಚಾರಗಳಲ್ಲು ಜ್ಞಾನವನ್ನು ಸಂಪಾದಿಸಿ ದೇಶದ ಸತ್ಪ್ರಜೆಗಳಾಗಿ ಮುನ್ನಡೆಯಬೇಕು. ಯುವ ಪೀಳಿಗೆಗೆ ಅವಕಾಶ ತುಂಬಾಯಿದೆ. ಸಂಸ್ಕಾರವಂತ ಸಂಸ್ಕೃತಿಯುಕ್ತ ಪ್ರಜೆಗಳಾಗಿ ದೇಶಕ್ಕೆ ಮತ್ತು ಕನ್ನಡನಾಡಿಗೆ ಗೌರವ ತರೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಬಿ.ಎಸ್.ಶಿವಪ್ರಸಾದ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎನ್ಇಎಸ್ ಅಧ್ಯಕ್ಷರಾದ ಡಿ.ಎಸ್.ನಾರಾಯಣ್ರಾವ್, ಎಸ್.ಟಿ.ವಾಸುದೇವ್, ಕಿಶೋರ್ ಶಿರ್ನಾಳಿ, ಡಾ.ಶ್ರೀನಿವಾಸ್ ಮೊದಲಾದವರಿದ್ದರು