ಶಿವಮೊಗ್ಗ, ನ.25:
ಇಲ್ಲಿನ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಜನರ ಕಷ್ಟ ಅರ್ಥವಾಗುವುದು ಯಾವಾಗ? ಬರೋಬ್ಬರಿ ನಾಲ್ಕು ತಿಂಗಳಿನಿಂದ ಯಾವಾಗ ಬೇಕೋ ಅವಾಗ ಮಾತ್ರ ಎಂಬಂತೆ ಕೇವಲ 500 ರಿಂದ 600 ಮೀಟರ್ ರಸ್ತೆಯ ಎರಡು ಇಕ್ಕೆಲಗಳಲ್ಲಿ ರಸ್ತೆ ಆಗಲಿಕರಣ ಹಾಗೂ ಇಂಟರ್ಲಾಕ್ ಟೈಲ್ಸ್ ಅಳವಡಿಕೆ ಕಾರ್ಯ ಅತ್ಯಂತ ಕಳಪೆ ಗುಣಮಟ್ಟದಲ್ಲಿ ನಡೆಯುತ್ತಿದೆ. ಆದರೂ, ಗೊತ್ತಿದ್ದು ಗೊತ್ತಿಲ್ಲದಂತೆ ಇಲಾಖೆ ಸುಮ್ಮನಿರುವುದಾದರೂ ಯಾಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
ಶಿವಮೊಗ್ಗ ಶುಭ ಮಂಗಳ ಎದುರಿನ ಆಟೋ ಕಾಂಪ್ಲೆಕ್ಸ್ ನಿಂದ ಸಾಯಿಬಾಬಾ ದೇವಸ್ಥಾನದವರೆಗಿನ 60 ಅಡಿ ರಸ್ತೆಯ ಇಂಟರ್ಲಾಕ್ ಅಳವಡಿಕೆ ಕಾಮಗಾರಿಯನ್ನು ಇಲಾಖೆಯ ಎಷ್ಟು ಅಧಿಕಾರಿಗಳು ಅಂದರೆ ಇಂಜಿನಿಯರ್ ಗಳು ಸರಿಯಾಗಿ ಗಮನಿಸಿದ್ದಾರೆಯೇ ಎಂಬ ಪ್ರಶ್ನೆ ಜನರದ್ದು.
ಇಲ್ಲಿ ರಸ್ತೆಯ ಮಧ್ಯ ಇಂಟರ್ಲಾಕ್ ಅಳವಡಿಕೆ ಅತ್ಯಂತ ಹೆಚ್ಚು ಅಂತರ ಹೊಂದಿದ್ದು ಇಂಟರ್ಲಾಕ್ ಟೈಲ್ಸ್ ಸರಿಯಾಗಿ ಜೋಡಣೆಯಾಗಿಲ್ಲ. ಅಂತೆಯೇ ಮನೆಯ ಮುಂಭಾಗದ ಫುಟ್ಬಾತ್ ನಿಂದ ಇರುವ ಇಂಟರ್ಲಾಕ್ ಟೈಲ್ಸ್ ಸಹ ಅಂತರವನ್ನು ಹೊಂದಿದ್ದು ಇಲ್ಲಿಯೂ ಸಹ ಗುಣಮಟ್ಟವಿಲ್ಲದ ಕಾಮಗಾರಿಯಿಂದ ಟೈಲ್ಸ್ ಗಳು ಆಳಕ್ಕೆ ಇಳಿಯುತ್ತಿವೆ.
ದುರಂತವೆಂದರೆ ಇಲ್ಲಿ ಬಳಸುತ್ತಿರುವ ವೆಟ್ ಮಿಕ್ಸ್ ಅತ್ಯಂತ ಕಳಪೆಯಾಗಿದೆ ಎಂದು ನುರಿತ ಇಂಜಿನಿಯರ್ಗಳು ಹೇಳುತ್ತಿದ್ದಾರೆ. ಆದರೆ ಇದೇ ಇಲಾಖೆಯ ಸಹಾಯಕ ಕಾರ್ಯ ಪಾಲಕ ಅಭಿಯಂತರ ಕಿರಣ್ ಹಾಗೂ ಸಹಾಯಕ ಅಭಿಯಂತರ ಕೃಷ್ಣಾರೆಡ್ಡಿ ಅವರಿಗೆ ಈ ಕಾಮಗಾರಿ ಅತ್ಯಂತ ಸೊಗಸಾಗಿದೆಯಂತೆ. ಅದನ್ನು ಅದ್ಯಾವ ಭಗವಂತ ಒಪ್ಪಿದನೋ ನಾ ಕಾಣೆ ಎಂದು ಜನ ಆಕ್ಷೇಪಿಸುತ್ತಿದ್ದಾರೆ. ಸುಮಾರು 3 ಕೋಟಿ ಮೊತ್ತದ ಈ ಕಾಮಗಾರಿಯ ಸಮಗ್ರ ಮಾಹಿತಿಯನ್ನು ಹೇಳುತ್ತಾ ಹೋದರೆ ಅದೊಂದು ದೊಡ್ಡ ಪ್ರಬಂಧವಾದೀತು.
ವೆಟ್ ಮಿಕ್ಸ್ ಹಾಕಿದ ನಂತರ ಅದನ್ನು ಸಮತಟ್ಟು ಮಾಡುವ ಹಾಗೂ ಬುಲ್ಡೋಜರ್ ಬಳಸುವ ಕಾಮಗಾರಿಯನ್ನು ಮೊದಲು ಮಾಡುತ್ತಿದ್ದಿಲ್ಲ. ಜನ ಆಕ್ಷೇಪ ವ್ಯಕ್ತಪಡಿಸಿದ ನಂತರ ಸುಮ್ಮನೆ ನಾಟಕ ಎಂಬಂತೆ ಟೈಲ್ಸ್ ಅಳವಡಿಸುತ್ತಿದ್ದಾರೆ. ಅದು ಇಷ್ಟ ಬಂದ ದಿನದಲ್ಲಿ ಮಾತ್ರ ಎಂಬಂತಾಗಿದೆ.
ಈ ಹಣ ಸಾರ್ವಜನಿಕರದು ಎಂಬುದು ಗುತ್ತಿಗೆದಾರರಿಗೆ ಗೊತ್ತಿರಲಿಕ್ಕಿಲ್ಲ. ಅವರ ಕಥೆ ಹಾಗಿರಲಿ ಲೋಕೋಪಯೋಗಿ ಇಲಾಖೆ ಅಭಿಯಂತರರು ಇತ್ತ ಗಮನಿಸುವ ವ್ಯವಧಾನವಾದರೂ ಇಟ್ಟುಕೊಳ್ಳಬೇಕಲ್ಲವೇ? ನೋಡೋಣ ಮುಂದೇನ್ ಮಾಡ್ತಾರೆ.?!