ಶಿವಮೊಗ್ಗ, ನ.05:
ನಮ್ಮ ನಡುವಿನ ಪಕ್ಷಿಗಳು ಹಾಗೂ ಪ್ರಾಣಿಗಳ ದಿನಚರಿ, ಬದುಕಿನ ರೀತಿ ಅವುಗಳ ಸಾಧನೆ ಈ ಎಲ್ಲಾ ವಿಷಯಗಳ ಅಧ್ಯಯನದಿಂದಲೂ ಸಮರ್ಥ ಹಾಗೂ ಸೂಕ್ತ ವಿಜ್ಞಾನಿಯಾಗಿ ಹೊರಹೊಮ್ಮಲು ಸಾಧ್ಯ ಎಂದು ಮಕ್ಕಳಿಗೆ ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ.ಪ್ರಸನ್ನನಾಥ ಸ್ವಾಮೀಜಿ ತಿಳಿಸಿದರು.
ಕಳೆದ 2 ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ನಿಂತಿದ್ದ ರಾಮಕೃಷ್ಣ ಸಂಸ್ಥೆಯ ಸಂಸ್ಥಾಪಕ ವೆಂಕಟರಮಣ ಅವರ ಕನಸು ಈ ಭಾರಿ ಮತ್ತೆ ಈಡೇರುತ್ತಿದೆ. 1500 ಮಕ್ಕಳು ಇಂದು 6ರಿಂದ 7ಸಾವಿರ ಪಠ್ಯ ವಿಷಯದ ಪ್ರದರ್ಶನವನ್ನು ಶಾಲೆಯ 43 ಕೊಠಡಿಗಳಲ್ಲಿ ಜೋಡಿಸಿದ್ದಾರೆ. ಇದಕ್ಕೆ ಶಿಕ್ಷಕರು, ಪೋಷಕರು ನೀಡಿದ ಸಹಕಾರವೇ ಕಾರಣ. ಜ್ಞಾನ ವಿಜ್ಞಾನ ಹಾಗೂ ಸೃಜನಶೀಲತೆಯ ಕಾರ್ಯಕ್ರಮ ರಾಮಕೃಷ್ಣ ವಿದ್ಯಾನಿಕೇತನದ ಅತ್ಯಂತ ವಿಶೇಷ ಕಾರ್ಯಕ್ರಮಗಳಲ್ಲಿ ಒಂದಾಗಿದೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.
-ಶೋಭಾ ವೆಂಕಟರಮಣ, ಕಾರ್ಯದರ್ಶಿಗಳು, ರಾಮಕೃಷ್ಣ ವಿದ್ಯಾನಿಕೇತನ
ಅವರು ಇಂದು ಮದ್ಯಾಹ್ನ ಶಿವಮೊಗ್ಗ ಗೋಪಾಲಗೌಡ ಬಡಾವಣೆಯ ಶ್ರೀ.ರಾಮಕೃಷ್ಣ ವಿದ್ಯಾನಿಕೇತನ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಜ್ಞಾನ-ವಿಜ್ಞಾನ ಸೃಜಶೀಲ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ವಿಜ್ಞಾನಿ ಎಂದಾಕ್ಷಣ ಕೇವಲ ಪ್ರಯೋಗಾಲಯಕ್ಕೆ ಹೋಗಿ ದೊಡ್ಡ ಸಾಧನೆ ಮಾಡುವುದಕ್ಕಲ್ಲ. ನಮ್ಮ ಬದುಕನ್ನು ಏನೂ.. ಹೇಗೆ.. ಏಕೆ ಎಂಬ ಪ್ರಶ್ನೆಗಳ ಮೂಲಕ ರೂಪಿಸಿಕೊಂಡಾಗ ವಿಜ್ಞಾನಿಗಳಾಗಬಹುದು. ಮೂಲವಿಜ್ಞಾನ ಹಾಗೂ ಅರ್ಥವ್ಯವಸ್ಥೆಯ ಬಗ್ಗೆ ಅಧ್ಯಯನ ಸಾಧ್ಯವಾದರೆ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಯ ನಡುವೆ ಸಾಮಾನ್ಯ ವಿಜ್ಞಾನವನ್ನು ಕಲಿಯುವ ನಿಟ್ಟಿನಲ್ಲಿ ಪೂರಕವಾದ ಶಿಕ್ಷಣ ವ್ಯವಸ್ಥೆ ನಮ್ಮ ನಡುವೆ ಇದೆ. ಅದನ್ನು ಶಿಕ್ಷಕರು ಮಕ್ಕಳಿಗೆ ಮನದಟ್ಟು ಮಾಡಿಕೊಡುವ ಮೂಲಕ ಅವರಲ್ಲಿ ಜ್ಞಾನ, ವಿಜ್ಞಾನ ಹಾಗೂ ಸೃಜನಶೀಲತೆಯನ್ನು ಬೆಳೆಸಬಹುದು ಎಂದ ಶ್ರೀಗಳು. ಮಕ್ಕಳಿಗೆ ವಿಜ್ಞಾನಿಗಳ ಹಾಗೂ ವಸ್ತು ವಿಷಯಗಳ ಕುರಿತು ಹಲವು ರೋಚಕ ಉದಾಹರಣೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ನಾಗರಾಜ್ ಅವರು ಮಾತನಾಡುತ್ತಾ, ನಮ್ಮ ಹಾಗೂ ವಿದೇಶದ ನಡುವೆ ಇರುವಂತಹ ವ್ಯತ್ಯಾಸ ಬದಲಾಗಬೇಕಿದೆ. ಪ್ರಾಯೋಗಿಕವಾದ ಶಿಕ್ಷಣ ಅಲ್ಲಿ ಸಿಗುವುದರಿಂದ ಅಲ್ಲಿನ ಕಲಿಕೆಯ ಗುಣಮಟ್ಟ ಹಾಗೂ ಸಾಧನೆಯ ಹಾದಿ ಸ್ಪಷ್ಟವಾಗುತ್ತದೆ. ಬೌತಿಕವಾದ ಕಲಿಕೆ ಅಷ್ಟೋಂದು ಪ್ರಭಾವ ಬೀರುವುದಿಲ್ಲ. ಸಾಧನೆಗೆ ಪರಿಶ್ರಮ ಮುಖ್ಯ. ಕೃತಕ ಕಲಿಕೆ ನೋಟ್ಸ್ ಹಾಗೂ ಮೊಬೈಲ್‌ಗೆ ಮಾತ್ರ ಸಿಮೀತವಾದರೆ ಉದ್ದಾರವಾಗುವುದಿಲ್ಲ. ಸ್ವಂತ ಆಲೋಚನಾ ಶಕ್ತಿ ಬೆಳೆಯಲು ಮೊಬೈಲ್ ಕೈ ಬಿಡಿ ಎಂದು ಮಕ್ಕಳಿಗೆ ಹೇಳಿದರು.
ಕ್ರಿಯೇಟಿವಿಟಿ ಬೆಳೆಯಲು ಸ್ವಂತಿಕೆ ಬೇಕು. ಸಾಧನೆ ಮಾಡುವ ಸಾಮರ್ಥ್ಯ ನಿಮ್ಮಲ್ಲಿದೆ. ಸಂಪೂರ್ಣ ತಲ್ಲೀನತೆಯಲ್ಲಿ ನಿಮ್ಮ ಸಾಧನೆ ಕಂಡು ಬರುತ್ತದೆ ಎಂದ ಅವರು, ಶಿವಮೊಗ್ಗ ಜಿಲ್ಲಾ ಮಟ್ಟದಲ್ಲಿ ಆರು ವಿಜ್ಞಾನ ಪ್ರದರ್ಶನದಲ್ಲಿ ಪ್ರಶಸ್ತಿ ನೀಡಿದಾಗ ಅದರಲ್ಲಿ ೩ ಪ್ರಶಸ್ತಿಯನ್ನು ಇದೇ ರಾಮಕೃಷ್ಣ ಶಾಲೆ ಪಡೆದಿದ್ದು, ಇಂತಹ ಕಾರ್ಯಕ್ರಮದ ಅಡಿಪಾಯದಿಂದ ಎಂದು ಶಾಲೆಯ ವ್ಯವಸ್ಥೆಯನ್ನು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಸದಸ್ಯ ಡಿ.ಎಂ.ದೇವರಾಜ್ ಅದ್ಯಕ್ಷತೆ ವಹಿಸಿದ್ದರು. ರಾಮಕೃಷ್ಣ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶೋಭಾ ವೆಂಕಟರಮಣ, ಮುಖ್ಯಶಿಕ್ಷಕ ತೀರ್ಥೇಶ್, ಪ್ರಾಂಶುಪಾಲ ಗಜೇಂದ್ರನಾಥ್ ಹಾಗೂ ಇತರರಿದ್ದರು.