ಶಿವಮೊಗ್ಗ: ಬಿಜೆಪಿ ಕಾರ್ಯಕರ್ತರು ಅಭಿವೃದ್ಧಿ ಮತ್ತು ಸಂಘಟನೆಯನ್ನು ಜೊತೆ ಜೊತೆಗೆ ಕೊಂಡೊಯ್ಯಬೇಕು ಎಂದು ಕಾರ್ಯಕರ್ತರಿಗೆ ಸಂಸದ ಬಿ.ವೈ. ರಾಘವೇಂದ್ರ ಕರೆ ನೀಡಿದರು.
ಅವರು ಇಂದು ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷ ಕ್ಯಾನ್ಸರ್ ನಂತೆ ದೇಶದಲ್ಲಿ ಆಡಳಿತ ನಡೆಸಿದೆ. ಯಾವ ಅಭಿವೃದ್ಧಿ ಕಾರ್ಯವೂ ಅವರ ಆಡಳಿತಾವಧಿಯಲ್ಲಿ ನಡೆಯಲಿಲ್ಲ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಬಂದ ನಂತರ ಇಡೀ ದೇಶದಲ್ಲಿಯೇ ಅಭಿವೃದ್ಧಿ ಪರ್ವ ಆರಂಭವಾಗಿದೆ. ಅನೇಕ ಸವಾಲುಗಳನ್ನು ಮೋದಿ ಎದುರಿಸಿದ್ದಾರೆ. ಕಾಶ್ಮೀರದ ಸಮಸ್ಯೆ, ಮೀಸಲಾತಿ ಘೋಷಣೆ, ಮತಾಂತರ, ಹಿಜಾಬ್ ಸೇರಿದಂತೆ ಧಾರ್ಮಿಕ ಕ್ಷೇತ್ರಗಳಲ್ಲಿ ಭಾರಿ ಬದಲಾವಣೆಯ ಮೂಲಕ ಅಭಿವೃದ್ಧಿಯ ಜೊತೆಗೆ ಹಿಂದುತ್ವ ಎತ್ತಿಹಿಡಿದ ಹೆಮ್ಮೆ ಬಿಜೆಪಿಗೆ ಇದೆ ಎಂದರು.
ಕಾರ್ಯಕರ್ತರೇ ನಿಜವಾದ ಸಂಘಟನಾಕಾರರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜವಾಬ್ದಾರಿಯುತ ಕೆಲಸಗಳನ್ನು ಮತದಾರರಿಗೆ ತಲುಪಿಸುವುದು ಕೂಡ ಅವರ ಹೊಣೆಯಾಗಿದೆ. ಇನ್ನೇನು ಚುನಾವಣೆ ಹತ್ತಿರವಾಗುತ್ತಿದೆ. ಪ್ರಶ್ನೆ ಪತ್ರಿಕೆ ಕೈಯಲ್ಲಿದೆ. ನಿಧಾನವಾಗಿ ಓದಿ ಉತ್ತರ ಬರೆಯಿರಿ. ಇದಕ್ಕಾಗಿ ಮಾನಸಿಕವಾಗಿ ಸಿದ್ಧರಾಗಿ. ರಾಜ್ಯ ಮತ್ತು ರಾಷ್ಟ್ರವನ್ನು ಕಟ್ಟುವಲ್ಲಿ ಕಾರ್ಯಕರ್ತರ ಪಾತ್ರವೂ ದೊಡ್ಡದಿದೆ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಐತಿಹಾಸಿಕ ಬದಲಾವಣೆಗಳಾಗಿವೆ. ಸ್ವಾತಂತ್ರ್ಯದ ಹಿಂದೆಂದೂ ಕಾಣದ ಅಭಿವೃದ್ಧಿ ಕೆಲಸಗಳು ಇಲ್ಲಿ ನಡೆದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಕಾರದಲ್ಲಿ ಅನೇಕ ಯೋಜನೆ ಜಾರಿಯಾಗಿವೆ. ಕೃಷಿ, ಬ್ಯಾಂಕ್, ಶೈಕ್ಷಣಿಕ, ರೈಲ್ವೇ, ಆರ್ಥಿಕ ಕ್ಷೇತ್ರಗಳಲ್ಲಿ ಜಿಲ್ಲೆ ಕೂಡ ಮುಂಚೂಣಿಯಲ್ಲಿದೆ. ರೈಲ್ವೇ ಕ್ಷೇತ್ರದಲ್ಲೂ ಸಾಕಷ್ಟು ಕೆಲಸಗಳಾಗಿವೆ. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಅಭಿನಂದನೆ ಎಂದರು.
ಕಾಂಗ್ರೆಸ್ ಪಕ್ಷ ಇಂದು ದೇಶದಲ್ಲಿ ಹೇಳ ಹೆಸರಿಲ್ಲದಂತಾಗಿದೆ. ಆದರೆ ಕರ್ನಾಟಕದಲ್ಲಿ ಪಕ್ಷದ ಕೆಲವು ನಾಯಕರಿಂದ ಪಕ್ಷ ಉಸಿರಾಡುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ಉಸಿರಾಟ ಸಂಪೂರ್ಣ ನಿಲ್ಲಲಿದೆ ಎಂದು ಭವಿಷ್ಯ ನುಡಿದರು.
ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ, ಎಸ್. ರುದ್ರೇಗೌಡ, ಡಿ.ಎಸ್. ಅರುಣ್, ಭಾರತಿಶೆಟ್ಟಿ, ಶಾಂತಾರಾಂ ಸಿದ್ಧಿ, ಪ್ರಮುಖರಾದ ಆರ್.ಕೆ. ಸಿದ್ಧರಾಮಣ್ಣ, ಎಂ.ಬಿ. ಭಾನುಪ್ರಕಾಶ್, ಮೋನಪ್ಪ ಭಂಡಾರಿ, ಸುನಿತಾ ಅಣ್ಣಪ್ಪ ಉಪಸ್ಥಿತರಿದ್ದರು.