ಶಿವಮೊಗ್ಗ : ಜಿಲ್ಲೆಯಾದ್ಯಂತ ಇಂದು ರೈತರು ಭೂ ತಾಯಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಭೂಮಿ ಹುಣ್ಣಿಮೆ ಹಬ್ಬವನ್ನು ಸಢಗರ ಸಂಭ್ರಮದಿಂದ ಆಚರಿಸಲಾಯಿತು.
ದಸರಾ ಸಡಗರ ಮುಗಿಯುತ್ತಿದ್ದಂತೆ ಬರುವ ಹುಣ್ಣಿಮೆಯೇ ಭೂಮಿ ಹುಣ್ಣಿಮೆ. ಮಾವಿನೆಲೆ, ಎಳೆ ಬಾಳೆ ಕಂಬದ ಕಮಾನು ಮಂಟಪ ಸಿದ್ಧಪಡಿಸಿ. ಸಗಣಿಯಿಂದ ಸಾರಿಸಿದ ಗದ್ದೆಯಂಚಿನ ಓರಣ ನೆಲ, ಜೇಡಿ, ಕೆಮ್ಮಣ್ಣು ಲೇಪಿತ ಬಿದಿರಿನ ಭೂ ಮಣ್ಣಿ ಕುಕ್ಕೆ, ಅದರ ಸುತ್ತ ಹಸೆ ಚಿತ್ತಾರದ ಮೋಹಕ ಎಳೆಗಳ ಸೊಬಗು ಕಂಡು ಬಂದಿತ್ತು..
ತುಳಸಿ, ಪತ್ರೆ, ಹಿಂಗಾರ ತೆನೆ, ಚೆಂಡು ಹೂಗಳ ನೈಸರ್ಗಿಕ ಅಲಂಕಾರ. ಗಿಡಗಂಟಿಗಳ ಆಯ್ದ ಸಾವಿರದ ಸೊಪ್ಪು ಪದಾರ್ಥ, ಅಮಟೆಕಾಯಿಗೆ ಬೆಲ್ಲ ಬೆರೆಸಿ ಬೇಯಿಸಿ ಮಾಡಿದ ಲೇಹ್ಯ, ಬಗೆ ಬಗೆಯ ತಿಂಡಿ ತಿನಿಸುಗಳಿಂದ ತುಂಬಿದ ಎಡೆಯಿಂದ ಭೂ ತಾಯಿಗೆ ಸೀಮಂತದ ಅಡುಗೆ ಮಾಡಿ ನೈವೇದ್ಯ ಮಾಡಿದರು.
ಅನ್ನ ಬೆಳೆವ ರೈತ ಭೂಮಿ ತಾಯಿಗೆ ಉಣ ಬಡಿಸುವ ಸೀಮಂತದೂಟ. ಫಸಲಿಗೆ ಮುತ್ತೈದೆಯರು ತಮ್ಮ ಕುತ್ತಿಗೆಯಲ್ಲಿದ್ದ ತಾಳಿಯನ್ನು ಸಹ ಅಲಂಕರಿಸಿ, ನಂತರ ತಾವು ಧರಿಸಿ ಸಂಭ್ರಮಿಸುವ ಅಪರೂಪದ ಘಳಿಗೆ ಇದು. ರಾತ್ರಿಯೆಲ್ಲ ನಿದ್ದೆ ಬಿಟ್ಟು ತಯಾರಿಸಿದ ಕೊಟ್ಟೆ ಕಡುಬನ್ನು ಗದ್ದೆಯಲ್ಲಿ ಹೂತಿಡಲಾಗುತ್ತದೆ. ಕಟಾವಿನ ಸಂದರ್ಭದಲ್ಲಿ ಅದನ್ನು ಕಿತ್ತು ತಂದು ಅದರಿಂದ ತಯಾರಿಸಿದ ರೊಟ್ಟಿಯನ್ನು ಪರಸ್ಪರ ಹಂಚಿಕೊಂಡು ತಿನ್ನುವುದು ಕಂಡುಬಂದಿತ್ತು.