ಶಿವಮೊಗ್ಗ: ಶಿವಮೊಗ್ಗದಲ್ಲಿ ಶೀಘ್ರ ಎಫ್.ಎಸ್.ಎಲ್. ಕೇಂದ್ರ ಸ್ಥಾಪಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ತೀರ್ಥಹಳ್ಳಿಯಲ್ಲಿ ಪೊಲೀಸ್ ವಸತಿಗೃಹಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಎಫ್.ಎಸ್.ಎಲ್. ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುವುದು. ಕೇಂದ್ರ ಸರ್ಕಾರದ ಜತೆ ಮಾತುಕತೆ ನಡೆದಿದೆ.
ರಾಜ್ಯದಲ್ಲಿ ಎಫ್ ಎಸ್ ಎಲ್ ಕೇಂದ್ರಗಳನ್ನು ಹೆಚ್ಚಿಸಲಾಗಿದೆ ಎಂದರು.
ಬಳ್ಳಾರಿ, ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಎಫ್.ಎಸ್.ಎಲ್. ಆರಂಭಿಸಲಾಗಿದೆ. 20 ಕೋಟಿ ವೆಚ್ಚದ ಶಿಕಾರಿಪುರ ಮತ್ತು ಶಿರಾಳಕೊಪ್ಪದ ಪೊಲೀಸ್ ವಸತಿ ನಿಲಯಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಪೊಲೀಸರ ಕುಟುಂಬ ವಾಸಸ್ಥಾನ ಚೆನ್ನಾಗಿರಬೇಕು. ಪೊಲೀಸರು ಕೆಲಸ ಮಾಡುವ ಠಾಣೆ ಚೆನ್ನಾಗಿರಬೇಕು. ಎಷ್ಟೇ ಸಂಬಳ ಕೊಟ್ರೂ ಪೊಲೀಸ್ ನೌಕರಿ ಬೇಡ ಅನ್ನೋರು ಇದ್ದಾರೆ. ಮೂರ್ನಾಲ್ಕು ದಿನ ಊಟ, ನಿದ್ದೆಯಿಲ್ಲದೆ ಒತ್ತಡದಲ್ಲಿ ಕೆಲಸ ಮಾಡಬೇಕಿದೆ. ಹೀಗಾಗಿ ಮನೆ, ಕಚೇರಿ ಚೆನ್ನಾಗಿದ್ದರೆ ನೆಮ್ಮದಿ ಇರುತ್ತೆ.
ಈ ನಿಟ್ಟಿನಲ್ಲಿ ಸರ್ಕಾರ ಆದ್ಯತೆ ನೀಡುತ್ತಿದೆ ಎಂದರು.
ಪೊಲೀಸರಿಗೆ ಅಗತ್ಯ ಶಸ್ತ್ರಾಸ್ತ್ರ ಒದಗಿಸಲಾಗಿದೆ. ಸೈಬರ್ ಕ್ರೈಂ ವಿಭಾಗ ಬಲಪಡಿಸಲಾಗುತ್ತಿದೆ. ಅಗತ್ಯ ಉಪಕರಣಗಳನ್ನು ಪೂರೈಸಲಾಗಿದೆ ಎಂದರು.