ಶಿವಮೊಗ್ಗ: ಸ್ವಾತಂತ್ರ್ಯ ಲಭಿಸಿದ ಕೂಡಲೇ ರಾಷ್ಟ್ರೀಯ ಕಾಂಗ್ರೆಸ್ ವಿಸರ್ಜನೆ ಮಾಡುವಂತೆ ಮಹಾತ್ಮ ಗಾಂಧೀಜಿ ಅವರೇ ಸೂಚಿಸಿದ್ದರು. ಅಂದು ವಿಸರ್ಜನೆ ಆಗಿರಲಿಲ್ಲ. ಈಗ ಜನರೇ ರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡುತ್ತಿದ್ದಾರೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದ್ದಾರೆ.
ನಗರದ ಶುಭಮಂಗಳ ಸಮುದಾಯ ಭವನದಲ್ಲಿ ಇಂದು ಆಯೋಜಿಸಲಾಗಿದ್ದ ಹಿಂದುಳಿದ ವರ್ಗಗಳ ಜಾಗೃತಿ ಸಂಯೋಜಕ ಸಮಾವೇಶದ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ಸೋನಿಯಾ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಭಸ್ಮ ಆಗುತ್ತಿದೆ. ದೇಶ ಕಾಪಾಡಲು ಬಲಿದಾನ ಮಾಡಿ ಹೋರಾಡಿದ ಕಾಂಗ್ರೆಸ್ ಪಕ್ಷ ಈಗ ಉಳಿದಿಲ್ಲ. ಈಗ ತಿಹಾರ್ ಜೈಲಿಗೆ ಹೋಗಿ ಬಂದಿರುವ ಡಿ.ಕೆ. ಶಿವಕುಮಾರ್, ಪರಪ್ಪನ ಅಗ್ರಹಾರಕ್ಕೆ ಹೋಗಿ ಬಂದಿರುವ ನಲಪಾಡ್ ಅಂತಹವರ ಕೈಯಲ್ಲಿ ಕಾಂಗ್ರೆಸ್ ಪಕ್ಷ ಸಿಕ್ಕು ನರಳುತ್ತಿದೆ ಎಂದರು.
ಪಿಎಫ್ಐ, ಎಸ್.ಡಿ.ಪಿ.ಐ.ನಂತಹ ರಾಷ್ಟ್ರದ್ರೋಹಿ ಸಂಘಟನೆಗಳಿಗೆ ಬೆಂಬಲ ನೀಡುತ್ತಿರುವ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬಾರದು. ಒಳ್ಳೆಯ ಮಾತುಗಳಲ್ಲಿ ಕೇಂದ್ರ ಸರ್ಕಾರ ಇವರುಗಳಿಗೆಲ್ಲಾ ಹೇಳಿತ್ತು. ರಾಷ್ಟ್ರದ್ರೋಹಿ ಕೆಲಸ, ಗೋ ಕಳ್ಳತನ, ಗೋ ಕಳವು ತಡೆಯಲು ಹೋದವರ ಮೇಲೆ ಹಲ್ಲೆ, ಭಯೋತ್ಪದನಾ ಕೃತ್ಯ ಮಾಡಬೇಡಿ ಎಂದು ಕೇಂದ್ರ ಸರ್ಕಾರ ತಿಳಿವಳಿಕೆ ಹೇಳಿತ್ತು. ಎಲ್ಲಿ ರಾಷ್ಟ್ರದ್ರೋಹಿ ಚಟುವಟಿಕೆ ಮಾಡುವವರ ಬಗ್ಗೆ ಮಾತನಾಡಿದರೆ ವೋಟ್ ಬ್ಯಾಂಕ್ ಹೋಗುತ್ತೆ ಎಂಬ ಚಿಂತೆ ಕಾಂಗ್ರೆಸ್ ಪಕ್ಷಕ್ಕೆ ಕಾಡುತ್ತಿದೆ. ಕೇವಲ ಚುನಾವಣೆ, ವೋಟಿಗಾಗಿ ರಾಜಕಾರಣ ಮಾಡುವುದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಕುಮಾರ್ ಬಂಗಾರಪ್ಪ ಮಾತನಾಡಿ, ಬಂಗಾರಪ್ಪನವರ ಹೆಸರಿನಲ್ಲಿ ಒಳ್ಳೆಯ ಕೆಲಸ ಮಾಡಬೇಕು. ಅವರ ಹೆಸರನ್ನು ಯಾರೂ ದುರುಪಯೋಗ ಮಾಡಿಕೊಳ್ಳಬಾರದು. ದೇಶ ಮತ್ತು ರಾಜ್ಯಕ್ಕೆ ಬಂಗಾರಪ್ಪ ಅವರು ಸಾಕಷ್ಟು ಕಾರ್ಯಕ್ರಮ ಕೊಟ್ಟಿದ್ದಾರೆ. ಅದನ್ನು ಮುಂದುವರೆಸಬೇಕು ಎಂದರು.
ಹಿAದುಳಿದ ವರ್ಗಗಳ ಮೋರ್ಚಾ ಅಡಿಯಲ್ಲಿ ಯಾರೂ ಜಾತಿ ಹೋರಾಟ ಮಾಡಲು ಹೋಗಬಾರದು. ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಕಾರಕ್ಕೆ ಬರಲು ಒಬಿಸಿ ಸಂಘಟನೆ ಅತ್ಯಂತ ಮುಖ್ಯ. ಜಾತಿ ಹೋರಾಟ ಮಾಡಿದರೆ ಹಿಂದುಳಿದ ವರ್ಗದವರು ಒಡೆದು ಹಾಳಾಗುತ್ತೇವೆ. ಎಲ್ಲರೂ ಸೇರಿ ವರ್ಗದ ಪರವಾಗಿ ಹೋರಾಟ ಮಾಡಬೇಕು. ಕರ್ನಾಟಕದಲ್ಲಿ ಕೆಲವರು ಮಾಡುತ್ತಿರುವ ಅಹಿಂದ ರಾಜಕಾರಣ ನಮಗೆ ಸವಾಲಿನದ್ದಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ, ಹಿಂದುಳಿದ ವರ್ಗಗಳ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ ಮಾತನಾಡಿದರು.
ಮೋರ್ಚಾ ಜಿಲ್ಲಾಧ್ಯಕ್ಷ ಸಿ.ಹೆಚ್.ಮಾಲತೇಶ್, ರಾಜ್ಯ ಉಪಾಧ್ಯಕ್ಷ ಅಶೋಕಮೂರ್ತಿ, ಪ್ರಮುಖರಾದ ಶಿವರಾಜ್, ಧರ್ಮಪ್ರಸಾದ್, ಸುಬ್ರಹ್ಮಣ್ಯ, ದೇವರಾಜ್, ಸಂಜು ಇನ್ನಿತರರು ಹಾಜರಿದ್ದರು