ಶಿವಮೊಗ್ಗ: ಕರಾಟೆ ಒಳ್ಳೆಯ ಆರೋಗ್ಯ, ಒಳ್ಳೆಯ ಬದುಕು ಮತ್ತು ಜೀವನಕ್ಕೆ ದಾರಿದೀಪವಾಗುವಂತ ಕ್ರೀಡೆ ಎಂದು ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ ಹೇಳಿದರು.

ಅವರು ಇಂದು ನಗರದ ಅಗಮುಡಿ ಕನ್ವೆನ್ಷನ್ ಹಾಲ್ ನಲ್ಲಿ ಮಹಾನಗರ ಪಾಲಿಕೆಯಿಂದ ಹಮ್ಮಿಕೊಂಡಿದ್ದ ಮಕ್ಕಳ ದಸರಾ ಅಂಗವಾಗಿ ನಡೆದ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿ -2022 ಉದ್ಘಾಟಿಸಿ ಮಾತನಾಡಿದರು.

ಕರಾಟೆಯಿಂದ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬಹುದು. ಹಿಂದೆ ರಾಜ ಮಹಾರಾಜರ ಕಾಲದಿಂದಲೂ ಅಂಗರಕ್ಷಕ ಪಡೆಗಳಿಗೆ ಕರಾಟೆಯಂತಹ ತರಬೇತಿ ನೀಡಲಾಗುತ್ತಿತ್ತು. ದೈಹಿಕ, ಮಾನಸಿಕ ಸದೃಢತೆಗೆ ಈ ಕ್ರೀಡೆ ಅತ್ಯುತ್ತಮವಾಗಿದ್ದು, ಹಂತ ಹಂತವಾಗಿ ಬೆಳೆಯುತ್ತಾ ಬಂದಿದೆ ಎಂದರು.

ಸ್ಪರ್ಧಾ ಕಣದಲ್ಲಿ ಆರೋಗ್ಯಕರ ಪೈಪೋಟಿ ನಡೆಯಲಿ. ಇಲ್ಲಿ ಗೆದ್ದವರು ರಾಷ್ಟ್ರಮಟ್ಟದಲ್ಲಿ ಹೆಸರುಗಳಿಸಲಿ. ಸೋಲು ಗೆಲವನ್ನು ಸಮಾನವಾಗಿ ಸ್ವೀಕರಿಸಿ. ಕರಾಟೆ ಎಂದಾಕ್ಷಣ ಶಿವಮೊಗ್ಗ ವಿನೋದ್ ಜ್ಞಾಪಕಕ್ಕೆ ಬರುತ್ತಾರೆ. ಸುಮಾರು 8 ಜಿಲ್ಲೆಗಳಿಂದ ಈ ಪಂದ್ಯಾವಳಿಗೆ ಕ್ರೀಡಾಪಟುಗಳು ಆಗಮಿಸಿದ್ದು, ಈ ರೀತಿಯ ಕರಾಟೆ ಪಂದ್ಯಾವಳಿಗಳನ್ನು ವಿನೋದ್ ಅವರು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ಮಹಾನಗರ ಪಾಲಿಕೆ ಮಕ್ಕಳ ದಸರಾ ಸಂದರ್ಭದಲ್ಲಿ ಇಂತಹ ಕ್ರೀಡೆಗಳಿಗೆ ಉತ್ತೇಜನ ನೀಡುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದರು.

ಈ ಸಂದರ್ಭದಲ್ಲಿ ಮಕ್ಕಳ ದಸರಾ ಸಮಿತಿ ಅಧ್ಯಕ್ಷೆ ಲತಾ ಗಣೇಶ್, ಮೇಯರ್ ಸುನಿತಾ ಅಣ್ಣಪ್ಪ, ಸುವರ್ಣಾ ಶಂಕರ್, ಸುರೇಖಾ ಮುರಳೀಧರ್, ಯು.ಹೆಚ್. ವಿಶ್ವನಾಥ್, ಕಲ್ಪನಾ ರಾಮು, ಜ್ಞಾನೇಶ್ವರ್, ಪ್ರಭು, ವಿನೋದ್, ಅಲ್ತಾಫ್ ಪಾಷಾ, ಸೈಯದ್ ರಿಝಾ, ದಿವಾಕರ್, ಕೃಷ್ಣಮೂರ್ತಿ, ಲೋಕೇಶ್, ರತ್ನಾಕರ್ ಮೊದಲಾದವರಿದ್ದರು.