ಶಿವಮೊಗ್ಗ: ರಾಜ್ಯದ ಜನತೆಗೆ ಆಮ್ ಆದ್ಮಿ ಪಕ್ಷವೇ ಅನಿವಾರ್ಯ ಆಯ್ಕೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.

ಅವರು ಜ್ಯುವೆಲ್ ರಾಕ್ ನ ಮಿಲನ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಕೂಡ ಭ್ರಷ್ಟಾಚಾರದಲ್ಲಿ ಮುಳುಗಿವೆ. ಜನರಿಗೆ ಭ್ರಷ್ಟಾಚಾರ ಮುಕ್ತ ಲಂಚವೇ ಇಲ್ಲದ, ಅಭಿವೃದ್ಧಿಯಾಗುವ ಹೊಸ ಪಕ್ಷದ ಬೇಕಾಗಿದೆ. ಅವರ ಆಶಯಗಳಿಗೆ ತಕ್ಕಂತೆ ಈಗಾಗಲೇ ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಕೇಜ್ರಿವಾಲ್ ನೇತೃತ್ವದ ಸರ್ಕಾರ ಮಾದರಿಯಾಗಿದ್ದು, ಇಡೀ ದೇಶದಲ್ಲಿಯೇ ಆಪ್ ವಿಜೃಂಭಿಸಲಿದೆ ಎಂದರು.

 ಆಪ್ ಹೊಸ ಪ್ರಣಾಳಿಕೆ ಬಿಡುಗಡೆ ಮಾಡುತ್ತದೆ. ಅಷ್ಟೇ ಅಲ್ಲದೇ ಅದಕ್ಕೆ ಗ್ಯಾರಂಟಿ ನೀಡುತ್ತದೆ. ಪ್ರಣಾಳಿಕೆಗೆ ತಪ್ಪಿ ನಡೆದರೆ ಮತದಾರರು ನ್ಯಾಯಾಲಯಕ್ಕೆ ಹೋಗಬಹುದಾದ ಅವಕಾಶವಿದೆ. ಹಾಗಾಗಿಯೇ ನಮ್ಮ ಪಕ್ಷ ಆಶಾಕಿರಣವಾಗಿದ್ದು, ರಾಜ್ಯದ ವಿಧಾನಸಭೆಯ ಎಲ್ಲಾ 224 ಕ್ಷೇತ್ರಗಳು ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಸ್ಪರ್ಧಿಸಲಿದೆ. ಇದಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಮನೆ ಮನೆಗೆ ತಲುಪಿ ಸಾರ್ವಜನಿಕರ ಅಭಿಪ್ರಾಯಗಳೊಂದಿಗೆ ಚರ್ಚಿಸಿ ನಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ ಎಂದರು.

ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಶೇ. 40 ರ ಕಮಿಷನ್ ಸಾಬೀತಾಗಿದೆ. ಸರ್ಕಾರಿ ಶಾಲೆಗಳು ಮುಚ್ಚತೊಡಗಿವೆ. ಶೇ. 64 ರಷ್ಟು ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲವಾಗಿದೆ. ಸರ್ಕಾರಿ ಆಸ್ಪತ್ರೆಗಳ ಗೋಳು ಹೇಳತೀರದಾಗಿದೆ. ಸಾರ್ವಜನಿಕರ ತೆರಿಗೆ ಹಣ ಲೂಟಿಯಾಗುತ್ತಿದೆ. ರಸ್ತೆಗಳಂತೂ ಅವಾಂತರಗೊಂಡಿವೆ. ಶಿವಮೊಗ್ಗದ ಸ್ಮಾರ್ಟ್ ಸಿಟಿ ಯೋಜನೆ ಇದಕ್ಕೊಂದು ಉತ್ತಮ ಉದಾಹರಣೆ ಎಂದರು.

ಆಪ್ ಪ್ರಚಾರ ಸಮಿತಿ ಉಸ್ತುವಾರಿ ಮುಖ್ಯಮಂತ್ರಿ ಚಂದ್ರು ಮಾತನಾಡಿ, ರಾಜ್ಯ ಸರ್ಕಾರ ಬೊಗಳೆ ಸರ್ಕಾರವಾಗಿದೆ. ಇದೊಂದು ಮೋಸದ ಸರ್ಕಾರ. ಇಲ್ಲಿ ಯಾವುದಕ್ಕೂ ನ್ಯಾಯ ಸಿಗುವುದಿಲ್ಲ. ಚುನಾವಣೆಗೆ ಮುಂಚೆ ನೀಡಿದ ಆಶ್ವಾಸನೆಗಳು ಈಡೇರಿಲ್ಲ. ಮುಖ್ಯಮಂತ್ರಿಯವರಿಗೆ ಸ್ವಂತ ಬುದ್ಧಿಯೇ ಇಲ್ಲ. ಮತಬ್ಯಾಂಕ್ ಗಾಗಿ ಹಲವು ಕಾಯ್ದೆಗಳನ್ನು ಜಾರಿಗೆ ತರುತ್ತಿದ್ದಾರೆ. ಬಿ.ಎಸ್. ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ ಹೇಳಿದಂತೆ ಆಡಳಿತ ನಡೆಯುತ್ತಿದೆ. ಅರಾಜಕತೆ ತಾಂಡವವಾಡುತ್ತಿದೆ ಎಂದು ಟೀಕಿಸಿದರು.

ಕೇವಲ ಬಿಜೆಪಿ ಸರ್ಕಾರ ಮಾತ್ರವಲ್ಲ, ಕಾಂಗ್ರೆಸ್ ಕೂಡ ಭ್ರಷ್ಟವಾಗಿದೆ. ವಿರೋಧ ಪಕ್ಷವಾಗಿ ಏನೂ ಕೆಲಸ ಮಾಡುತ್ತಿಲ್ಲ. ಒಳಜಗಳಗಳು ಹೆಚ್ಚಿವೆ. ಜೆಡಿಎಸ್ ಕೂಡ ಮೂಕ ಪ್ರೇಕ್ಷಕನಾಗಿದೆ. ಈ ಮೂರೂ ಪಕ್ಷಗಳು ಜನರ ಒಳಿತಿಗಾಗಿ ಏನನ್ನೂ ಮಾಡಿಲ್ಲ ಎಂದರು. 

ರಸ್ತೆಗಳು ಗಲೀಜಾಗಿವೆ. ಆಸ್ಪತ್ರೆಗಳು ಗಲೀಜಾಗಿವೆ. ಆರೋಗ್ಯ ಇಲಾಖೆ ಗಲೀಜಾಗಿವೆ. ಶಿಕ್ಷಣ ಕ್ಷೇತ್ರ ಗಲೀಜಾಗಿದೆ. ಈ ಗಲೀಜನ್ನು ಗುಡಿಸಲು ನಮ್ಮ ಕೈಯಲ್ಲಿ ಪೊರಕೆ ಇದೆ. ಎಲ್ಲಾ ಕಸ ಕಡ್ಡಿಗಳನ್ನು ಗುಡಿಸಿ ಈ ದೇಶಕ್ಕೆ ಮತ್ತು ರಾಜ್ಯಕ್ಕೆ ಪರಿಶುದ್ಧ ಸರ್ಕಾರ ನೀಡುತ್ತೇವೆ. ಮೋಸದ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ. ದೆಹಲಿ ಮಾದರಿ ಸರ್ಕಾರವನ್ನು ಕರ್ನಾಟಕ ರಾಜ್ಯಕ್ಕೂ ವಿಸ್ತರಿಸುತ್ತೇವೆ ಎಂದರು.

ಪಕ್ಷದ ಜಿಲ್ಲಾ ಉಸ್ತುವಾರಿ ದಿವಾಕರ್ ಮಾತನಾಡಿ, ಮುಂಬರುವ ಚುನಾವಣೆಗೆ ಪಕ್ಷ ಸಿದ್ಧತೆಯಲ್ಲಿ ತೊಡಗಿದ್ದು, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಭದ್ರಾವತಿಯ ವಿಐಎಸ್ಎಲ್ ಮತ್ತು ಎಂಪಿಎಂ ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸುತ್ತೇವೆ. ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತೇವೆ. ಮುಖ್ಯವಾಗಿ ಶಾಂತಿಯ ವಾತಾವರಣ ನಿರ್ಮಿಸುತ್ತೇವೆ. ನಾವು ಹಣ ಹಂಚುವುದಿಲ್ಲ. ಭ್ರಷ್ಟಾಚಾರವನ್ನೂ ಮಾಡುವುದಿಲ್ಲ. ಸ್ವಜನ ಪಕ್ಷಪಾತ ನಮಗೆ ಗೊತ್ತಿಲ್ಲ. ಸೇವೆ ನಮ್ಮ ಗುರಿಯಾಗಲಿದೆ. ಇಲ್ಲಿ ಆಕಾಂಕ್ಷಿಗಳು ಹೆಚ್ಚಿರಬಹುದು. ಆದರೆ, ಜನರ ಅಭಿಪ್ರಾಯವನ್ನು ಪಡೆದೇ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ ಎಂದರು.

ಗೋಷ್ಠಿಯಲ್ಲಿ ಪ್ರಮುಖರಾದ ಏಳುಮಲೈ ಬಾಬು, ನವಿಲೇಶ್, ಮನೋಹರ್ ಗೌಡ, ಕೆ.ಕಿರಣ್, ನೇತ್ರಾವತಿ, ದರ್ಶನ್ ಜೈನ್ ಇದ್ದರು

By admin

ನಿಮ್ಮದೊಂದು ಉತ್ತರ

error: Content is protected !!