ಶಿವಮೊಗ್ಗ,
ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಆಚರಿಸಲಾಗುತ್ತಿರುವ ಶಿವಮೊಗ್ಗ ದಸರಾ-22 ರ ಅಂಗವಾಗಿ ಕಲಾ ದಸರಾವನ್ನು ಸೆ.೨೮ರಿಂದ ೩೦ರವರೆಗೆ ೩ದಿನಗಳ ಕಾಲ ವಿಶೇಷವಾಗಿ ಆಚರಿಸಲಾಗುವುದು ಎಂದು ಕಲಾ ದಸರಾ ಸಮಿತಿ ಅಧ್ಯಕ್ಷ ನಾಗರಾಜ್ ಕಂಕಾರಿ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೆ.೨೮ರಂದು ಕುವೆಂಪು ರಂಗಮಂದಿರದಲ್ಲಿ ಬೆಳಿಗ್ಗೆ ೧೦ಗಂಟೆಗೆ ಛಾಯಾಚಿತ್ರ ಪ್ರದರ್ಶನವನ್ನು ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಹಾಗೂ ಚಿತ್ರ ಕಲಾ ಪ್ರದರ್ಶನ, ಚಿತ್ರ ಸಂತೆಯನ್ನು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ಉದ್ಘಾಟಿಸಲಿದ್ದಾರೆ. ಈ ಪ್ರದರ್ಶನದಲ್ಲಿ ಜಿಲ್ಲೆಯ ಖ್ಯಾತ ಛಾಯಚಿತ್ರಗಾರರು ಹಾಗೂ ವಿದ್ಯಾರ್ಥಿಗಳು ಸ್ಥಳದಲ್ಲೇ ಚಿತ್ರಕಲೆಯನ್ನು ಪ್ರದರ್ಶಿಸಲಿದ್ದಾರೆ ಎಂದರು.


ಇದೇ ಸ್ಥಳದಲ್ಲಿ ಸಂಜೆ ೪ರಿಂದ ೫.೩೦ರವರೆಗೆ ಕವಿ ವಾಚನ ನಡೆಯಲಿದ್ದು, ಜಿಲ್ಲೆಯ ಸುಮಾರು ೫೦ ಕವಿಗಳು ಭಾಗವಹಿಸಲಿದ್ದಾರೆ. ನಂತರ ನಡೆಯುವ ದಸರಾ ಮತ್ತು ಸಂಸ್ಕೃತಿ, ಸರ್ವೋದಯ ಮತ್ತು ವಿಶ್ವ ಮಾನವ ವಿಷಯ ಕುರಿತು ನಡೆಯುವ ವಿಚಾರ ಸಂಕಿರಣವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಬಂಜೆಗೆರೆ ಜಯಪ್ರಕಾಶ್, ಕರ್ನಾಟಕ ಸಂಘದ ಮಾಜಿ ಅಧ್ಯಕ್ಷೆ ವಿಜಯಾ ಶ್ರೀಧರ್, ಕುವೆಂಪು ವಿವಿಯ ಪ್ರೊ.ಪ್ರಶಾಂತ್ ನಾಯ್ಕ್ ಭಾಗವಹಿಸಲಿದ್ದಾರೆ. ಸಂಜೆ ೭ರಿಂದ ಹರಟೆ ಕಾರ್ಯಕ್ರಮ ನಡೆಯಲಿದ್ದು, ಎಂ.ಎಸ್.ನರಸಿಂಹ ಮೂರ್ತಿ, ವೈ.ವಿ.ಗುಂಡುರಾವ್, ಇಂದೂಮತಿ ಸಾಲಿಮಟ್, ಉಮೇಶ್‌ಗೌಡ, ಮಿಮಿಕ್ರಿ ಗೋಪಿ ಭಾಗವಹಿಸಲಿದ್ದಾರೆ ಎಂದರು.


ಸೆ.೨೯ ಮತ್ತು ೩೦ರಂದು ಫ್ರೀಡಂಪಾರ್ಕ್‌ನ ಮುಖ್ಯ ವೇದಿಕೆಯಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು, ೨೯ರ ಸಂಜೆ ೪ಗಂಟೆಗೆ ವಿನೋಬನಗರದ ಕರಿಯಣ್ಣ ಬಿಲ್ಡಿಂಗ್‌ನಿಂದ ಫ್ರೀಡಂಪಾರ್ಕ್‌ವರೆಗೆ ಕಲಾ ದಸರಾ ಜಾಥಾ ನಡೆಯಲಿದೆ. ಸಂಜೆ ೬ರಿಂದ ನಗರದ ವಿವಿಧ ಕಲಾವಿದರಿಂದ ಜಾನಪದ ನೃತ್ಯ ಗೀತೆಗಳ ಸಂಗಮ ನಡೆಯಲಿದ್ದು, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹಾಗೂ ಸೂಡಾ ಅಧ್ಯಕ್ಷ ಎನ್.ಜಿ.ನಾಗರಾಜ್ ಉದ್ಘಾಟಿಸಲಿದ್ದು, ಮೇಯರ್ ಸುನೀತಾ ಅಣ್ಣಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.


ಸೆ.೩೦ರಂದು ಸಂಜೆ ೫ರಿಂದ ಜಾನಪದ ನೃತ್ಯಗಳೊಂದಿಗೆ ವಾದ್ಯಗಳ ಕಲರವ ಹಾಗೂ ಸಮೂಹ ಜಾನಪದ ನೃತ್ಯದ ರಾಜ್ಯಮಟ್ಟದ ಜಾನಪದ ಸ್ಪರ್ಧೆ ನಡೆಯಲಿದ್ದು, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಉದ್ಘಾಟಿಸಲಿದ್ದು, ಮೇಯರ್ ಸುನೀತಾ ಅಣ್ಣಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದ ಅವರು, ಎಲ್ಲಾ ಕಾರ್ಯಕ್ರಮಗಳಲ್ಲಿ ಕಲಾ ದಸರಾ ಸಮಿತಿಯ ಸದಸ್ಯರು ಉಪಸ್ಥಿತರಿರಲಿದ್ದಾರೆ ಎಂದರು.
ಕಲಾ ದಸರಾ ಅಂಗವಾಗಿ ಕಿರು ಚಲನಚಿತ್ರ ಸ್ಪರ್ಧೆ ಇದ್ದು, ೩ ನಿಮಿಷದ ಚಿತ್ರವನ್ನು ಸ್ಪರ್ಧಿಗಳು ನಿರ್ಮಿಸಿ ಸೆ.೨೭ರ ಸಂಜೆ ೫ಗಂಟೆ ಒಳಗಾಗಿ ನೀಡಬೇಕಾಗಿದೆ. ಹೆಚ್ಚಿನ ಮಾಹಿತಿಗಾಗಿ 9844090378, 99453811 19, 9481564343 ಅಥವಾ ೯೪೮೦೭೫೮೯೦೯ರಲ್ಲಿ ಪಡೆಯಬಹುದು ಎಂದರು.


ಪತ್ರಿಕಾಗೋಷ್ಠಿಯಲ್ಲಿ ಕಲಾ ದಸರಾ ಸಮಿತಿಯ ಪಾಲಿಕೆ ಸದಸ್ಯರಾದ ಎಸ್.ಶಿವಕುಮಾರ್, ಕಲ್ಪನಾ ರಮೇಶ್, ಸದಸ್ಯರಾದ ಶಶಿಧರ್ ಇತರರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!