ಹೊಸನಗರ,ಸೆ.20: ಕಳೆದ ತಿಂಗಳು ದಾಖಲಾಗಿದ್ದ ನಾಡಬಂದೂಕಿನ ಸಾವು ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು, ಇಬ್ಬರನ್ನು ನಿನ್ನೆ ಪೊಲೀಸರು ಬಂಧಿಸಿದ್ದಾರೆ.

ಇಡೀ ವಿಷಯ ಏನೆಂದು ತಿಳಿಯಲು ಕೆಳಗಿನ ಮಾಹಿತಿ ನೋಡಿ


ದಿನಾಂಕಃ 26-08-2022 ರಂದು ರಾತ್ರಿ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ನೇಗಿಲೋಣಿ ರಾವೆ ಗ್ರಾಮ ಹೊಸನಗರದ ವಾಸಿ ಅಂಬರೀಶ, 30 ವರ್ಷ ಈತನು ಯಾವುದೇ ಪರವಾನಿಗೆ ಇಲ್ಲದ ನಾಡ ಬಂದೂಕನ್ನು ತೆಗೆದುಕೊಂಡು ಆತನ ಸ್ನೇಹಿತ ಕೀರ್ತಿ ಎಂಬುವವರೊಂದಿಗೆ ತೋಟಕ್ಕೆ ಹೋಗಿ ಕಾಡುಕೋಣಗಳನ್ನು ಓಡಿಸಿದ್ದು, ಕೀರ್ತಿಯು ವಾಪಸ್ಸು ಮನೆಗೆ ಹೋದ ನಂತರದಲ್ಲಿ ಅಂಬರೀಶನು ಆತನ ಬಂದೂಕಿನಲ್ಲಿ ಮದ್ದು ಗುಂಡುಗಳನ್ನು ತುಂಬಿಕೊಂಡು ತನ್ನ ಮನೆಗೆ ವಾಪಸ್ಸು ಬರುತ್ತಿರುವಾಗ ಗಾಳಿ ಗುಡ್ಡದ ಕಲ್ಲು ಬಂಡೆ ಮೇಲೆ ಬಿದ್ದು , ಬಂದೂಕಿನ ಕುದುರೆಗೆ ಆತನು ಧರಿಸಿದ್ದ ರಬ್ಬರ್ ಬೂಟ್ ತಾಗಿ ಬಂದೂಕಿನಲ್ಲಿ ತುಂಬಿರುವ ಮದ್ದು ಗುಂಡು ಸಿಡಿದು ಎದೆಯ ಕೆಳಭಾಗಕ್ಕೆ ತಗಲಿ ಮೃತಪಟ್ಟಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ: 0073/2022 ಕಲಂ : 304 (ಎ) ಐಪಿಸಿ, 3, 25, 27 (2) ಆಯುಧ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ಕೊಳ್ಳಲಾಗಿರುತ್ತದೆ.


ಪಿಎಸ್‌ಐ ನಗರ ಪೊಲೀಸ್‌ ಠಾಣೆ ಹಾಗೂ ಸಿಬ್ಬಂಧಿಗಳ ತಂಡವು ಸದರಿ ಪ್ರಕರಣದ ತನಿಖೆ ಕೈಗೊಂಡು, ಮೃತ ಅಂಬರೀಶನ ಮರಣೋತ್ತರ ಶವ ಪರೀಕ್ಷಾ ವರದಿಯನ್ನು ಪರಿಶೀಲಿಸಲಾಗಿ, ಮೃತದೇಹದಲ್ಲಿ ದೊರೆತ ಗುಂಡುಗಳು ಮತ್ತು ಆತನ ಬಳಿ ಇದ್ದ ನಾಡ ಬಂದೂಕಿನಿಂದ ಸಿಡಿದ ಗುಂಡುಗಳಾಗಿರದೇ ಇದ್ದ ಬಗ್ಗೆ ಅನುಮಾನ ಬಂದಿದ್ದರಿಂದ, ಮೃತನೊಂದಿಗೆ ಕಾಡಿಗೆ ಹೋಗಿದ್ದ ಕೀರ್ತಿ ಬಿನ್ ಚಂದ್ರಶೇಖರ್ ಈತನನ್ನು ವಿಚಾರಣೆ ಮಾಡಿದಾಗ, ದಿನಾಂಕ: 26.08.2022 ರಂದು ಆತನು ಸ್ನೇಹಿತರಾದ ಅಂಬರೀಶ ಮತ್ತು ನಾಗರಾಜ ರವರೊಂದಿಗೆ ಕಾಡಿಗೆ ಶಿಕಾರಿ ಮಾಡುವ ಉದ್ದೇಶದಿಂದ ಹೋಗಿದ್ದು, ಕಾಡು ಬೆಕ್ಕನ್ನು ಬೇಟೆ ಮಾಡಿ, ನಾಗರಾಜನು ಸದರಿ ಶಿಕಾರಿಯನ್ನು ಪಿಕಪ್‌ನಲ್ಲಿ ಹಾಕಿದನು. ನಂತರ ನಾನು ಮತ್ತು ಅಂಬರೀಶ ಇಬ್ಬರೂ ಪುನಃ ಶಿಕಾರಿ ಮಾಡಲು ಗಾಳಿಗುಡ್ಡದ ಕಾಡಿಗೆ ಹೋದ ಸಮಯದಲ್ಲಿ ಅಂಬರೀಶನು ನಾಗರಾಜನು ತಂದುಕೊಟ್ಟಿದ್ದ ದಯಾನಂದ ಎಂಬುವವರ ಲೈಸೆನ್ಸ್ ಇರುವ ಎಸ್.ಬಿ.ಬಿ.ಎಲ್ ಬಂದೂಕನ್ನು ನಿರ್ಲಕ್ಷತನದಿಂದ ಹಿಡಿದುಕೊಂಡು ಕಾಡಿನ ಕಲ್ಲು ಬಂಡೆಗಳ ಮೇಲೆ ಕುಳಿತು ಕೊಳ್ಳಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ಬಂದೂಕು ಫೈರ್ ಆಗಿ ಅಂಬರೀಶನು ಮೃತಪಟ್ಟಿರುತ್ತಾನೆ.

ನಂತರ ತಾನು ಮತ್ತು ನಾಗರಾಜ ಸೇರಿ ಕೃತ್ಯ ವನ್ನು ಮರೆಮಾಚುವ ಉದ್ದೇಶದಿಂದ ಫೈರ್ ಆದ ಎಸ್.ಬಿ.ಬಿ.ಎಲ್ ಬಂದೂಕನ್ನು ಬದಲಾಯಿಸಿ ಅಂಬರೀಶನ ಪರವಾನಿಗೆ ಇಲ್ಲದ ನಾಡಬಂದೂಕನ್ನು ಮೃತ ದೇಹದ ಬಳಿ ಇಟ್ಟು, ಬೇಟೆ ಮಾಡಿದ ಕಾಡು ಬೆಕ್ಕನ್ನು ಹಾಗೂ ಫೈರ್ ಆದ ಖಾಲಿ ತೋಟವನ್ನು ನಾಶಪಡಿಸಿ, ಸಾಕ್ಷ್ಯ ನಾಶ ಮಾಡಿರುವುದಾಗಿ ಹೇಳಿಕೆಯನ್ನು ನೀಡಿರುತ್ತಾನೆ.
ಆರೋಪಿತರಾದ ಕೀರ್ತಿ ಮತ್ತು ನಾಗರಾಜ್‌ ರವರುಗಳು ದಯಾನಂದ ಎಂಬುವವನಿಂದ ಲೈಸೆನ್ಸ್ ಹೊಂದಿದ ಎಸ್.ಬಿ.ಬಿ.ಎಲ್ ಬಂದೂಕನ್ನು ಹಾಗೂ ಗೋಪಾಲ, ಕೊಂಡ್ಲೂರು, ತೀರ್ಥಹಳ್ಳಿ ಮತ್ತು ಮಹೇಶ, ಕೊಂಡ್ಲೂರು, ತೀರ್ಥಹಳ್ಳಿ ರವರಿಂದ ಜೀವಂತ ಎಸ್.ಬಿ.ಬಿ.ಎಲ್ ತೋಟಗಳನ್ನು ತೆಗೆದುಕೊಂಡು ಶಿಕಾರಿ ಮಾಡಿರುವುದು ತನಿಖೆಯಿಂದ ತಿಳಿದುಬಂದಿರುತ್ತದೆ. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಾಂಕ: 17.09.2022 ರಂದು ಆರೋಪಿತರಾದ ಕೀರ್ತಿ, 30 ವರ್ಷ, ನೇಗಿಲೋಣಿ ರಾವೆ ಗ್ರಾಮ ಹೊಸನಗರ ಮತ್ತು ನಾಗರಾಜ, 39 ವರ್ಷ, ರಾವೆ ಗ್ರಾಮ ಹೊಸನಗರ ರವರುಗಳನ್ನು ದಸ್ತಗಿರಿ ಮಾಡಲಾಗಿರುತ್ತದೆ.

By admin

ನಿಮ್ಮದೊಂದು ಉತ್ತರ

error: Content is protected !!