ತೀರ್ಥಹಳ್ಳಿ,
ದೇಶದ ಪ್ರಮುಖ ಹುದ್ದೆಗಳಾದ ರಾಷ್ಟ್ರಪತಿ, ಹಣಕಾಸು ಸಚಿವ ಸ್ಥಾನ ಗಳನ್ನು ಸ್ತ್ರೀಯರು ನಿಭಾಯಿಸುತ್ತಾರೆ. ಗುಡ್ಡಗಾಡಿನ ಕಟ್ಟಕಡೆಯ ಜನಾಂಗದ ಮಹಿಳೆ ದೇಶದ ಪ್ರಥಮ ಪ್ರಜೆ. ಎಲ್ಲಿ ಸ್ತ್ರೀಯ ಗೌರವ, ಸ್ಥಾನಮಾನ ಹೆಚ್ಚಾಗುತ್ತದೆಯೋ ಅಲ್ಲಿ ಲಕ್ಷ್ಮೀ ಸ್ವರೂಪದ ದೇವತೆಗಳು ನೆಲೆ ನಿಲ್ಲುತ್ತಾರೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಪಟ್ಟಣದಲ್ಲಿ ಬಿಜೆಪಿ ತಾಲ್ಲೂಕು ಮಹಿಳಾ ಮೋರ್ಚಾ ಹಮ್ಮಿಕೊಂಡಿದ್ದ ವರಮಹಾಲಕ್ಷ್ಮೀ ವ್ರತಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

’ಪುರುಷರಿಗೆ ಸಮಾನವಾಗಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಡುಗೆ ಮನೆಗೆ ಮಾತ್ರ ಸೀಮಿತ ಎಂಬ ಭಾವನೆ ಕಳೆದು ಹೋಗಿದೆ. ಪ್ರಧಾನಿ ನರೇಂದ್ರ ಮೋದಿ ಭದ್ರತೆಯ ಕಮಾಂಡೊ, ಐಪಿಎಸ್, ಐಎಎಸ್, ಡಿವೈಎಸ್ಪಿ ಮುಂತಾದ ಪ್ರಮುಖ ಹುದ್ದೆಗಳನ್ನು ನಿಭಾಯಿಸುವ ಮಟ್ಟಿಗೆ ಮಹಿಳೆ ಬೆಳೆದುನಿಂತಿದ್ದಾಳೆ’ ಎಂದು ಹರ್ಷ ವ್ಯಕ್ತಪಡಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಸುವರ್ಣ, ಜಿಲ್ಲಾಧ್ಯಕ್ಷೆ ವಿದ್ಯಾ ಲಕ್ಷ್ಮೀಪತಿ ಮತ್ತಿತರರಿದ್ದರು.