ಸ್ಮಾರ್ಟ್ ಸಿಟಿ ಯೋಜನೆಯಡಿ ನೆಹರೂ ಸ್ಟೇಡಿಯಂ ಆವರಣದಲ್ಲಿ ನಡೆಯು ತ್ತಿರುವ ಕಾಮಗಾರಿ ಕಳಪೆ, ಅವೈಜ್ಞಾನಿಕ ಮತ್ತು ಕಾನೂನುಬಾಹಿರವಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ವತಿಯಿಂದ ಇಂದು ನೆಹರೂ ಕ್ರೀಡಾಂಗಣ ಎದುರು ಪ್ರತಿಭಟನೆ ನಡೆಸಿದರು.
ಕ್ರೀಡಾಂಗಣದ ಮುಂಭಾಗದಲ್ಲಿನ ಡ್ರೈನ್‌ಗೆ ನೀರು ಹರಿಯಲು ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಈ ಹಿಂದೆ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಲಾಗಿರುವ ಮತ್ತು ಜನರ ಆರೋಗ್ಯದ ದೃಷ್ಠಿಯಿಂದ ವಾಕಿಂಗ್ ಮಾಡುವ ವಾಕಿಂಗ್ ಪಾತ್ ಮೇಲೆ ಹರಿದು ಪಾತ್ ಹಾಳಾಗುತ್ತಿದೆ. ಅಲ್ಲದೇ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಿದ ಅಂತರರಾಷ್ಟ್ರೀಯ ಮಟ್ಟದ ವಾಲಿಬಾಲ್ ಕೋರ್ಟ್ ಅತ್ಯಂತ ಅವೈಜ್ಞಾನಿಕ ಮತ್ತು ಕಳಪೆ ಯಿಂದ ಕೂಡಿದೆ ಎಂದು ಆರೋಪಿಸಿದರು.
ಸಣ್ಣ ಮಳೆ ಬಂದರೂ ಕ್ರೀಡಾಂಗಣ ಕೊಚ್ಚೆಯಾಗುತ್ತಿದೆ. ಇಲ್ಲಿ ನಿರ್ಮಿಸಿರುವ ಡ್ರೈನ್ ಕವರ್ ಸ್ಲ್ಯಾಬ್ ಗಳ ಅವೈಜ್ಞಾನಿಕವಾಗಿ ಜೋಡಣೆ ಮಾಡಲಾಗಿದೆ. ನಗರದಾದ್ಯಂತ ಗ್ರಿಟ್ ಚೇಂಬರ್ ನಿರ್ಮಿಸಿರುವ ಸ್ಮಾರ್ಟ್ ಸಿಟಿಯವರು ಅಂತರರಾಷ್ಟ್ರೀಯ ವಾಲಿಬಾಲ್ ಸ್ಟೇಡಿಯಂನಲ್ಲಿ ನೀರು ಹರಿದುಹೋಗಲು ಮಾಡಿರುವ ವ್ಯವಸ್ಥೆ ಕಳಪೆಯಾಗಿದೆ ಎಂದು ದೂರಿದರು.
ವಾಕಿಂಗ್ ಪಾತ್ ನ ಸುತ್ತಮುತ್ತ ಲಿನಲ್ಲಿ ಅಳವಡಿಸಿರುವ ಲೈಟಿಂಗ್ ವ್ಯವಸ್ಥೆ ಪದೇ ಪದೇ ಹಾಳಾಗುತ್ತಿದ್ದು, ಇಲ್ಲಿ ಅಳವಡಿಸಿರುವ ಲೈಟಿಂಗ್ ಪರಿಕರಗಳು, ವೈರ್ ಗಳು ಕಳಪೆಯಿಂದ ಕೂಡಿವೆ. ಅಲ್ಲದೇ, ಸ್ಟೇಡಿಯಂ ಸುತ್ತ ೨೫ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಲಾನ್ (ಹುಲ್ಲು ಹಾಸು) ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಸಂಪೂರ್ಣ ನಾಶವಾಗಿದೆ. ಸ್ಟೇಡಿಯಂ ಮುಂಭಾಗ ಕೇವಲ ೨೦ ವರ್ಷಗಳಷ್ಟು ಹಳೆಯದಾಗಿದ್ದ ಕಟ್ಟಡ ನಾಶ ಮಾಡಿ ಹೊಸದಾಗಿ ಕಟ್ಟಡ ಕಟ್ಟಲಾಗುತ್ತಿದೆ. ನಿರ್ಮಾಣಕ್ಕೆ ಪೂರ್ವಭಾವಿಯಾಗಿ ರಾಜ್ಯ ಕ್ರೀಡಾ ಇಲಾಖೆಯ ಆಯುಕ್ತರ ಒಪ್ಪಿಗೆ ಪಡೆದಿಲ್ಲ ಎಂದು ದೂರಿದರು.
ಕಾಮಗಾರಿಯ ಸ್ಥಳ ಪರಿಶೀಲನೆ ಮಾಡಬೇಕು ಮತ್ತು ಸೂಕ್ತ ಇಲಾಖೆಯಿಂದ ಗುಣಮಟ್ಟದ ತನಿಖೆ ನಡೆಸಬೇಕು. ಕಳಪೆ ಕಾಮಗಾರಿಗೆ ಕಾರಣರಾದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಕಾಮಗಾರಿಯ ಗುಣಮಟ್ಟದ ತನಿಖೆ ಬೇಡ. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಈ ಸಂದರ್ಭದಲ್ಲಿ ಕೆ.ವಿ. ವಂಸತಕು ಮಾರ್, ಸತೀಶ್ ಕುಮಾರ್ ಶೆಟ್ಟಿ, ಎಸ್.ಬಿ. ಅಶೋಕ್ ಕುಮಾರ್ ಇತರರಿದ್ದರು.