ನಗರದ ಗೋಪಿಶೆಟ್ಟಿಕೊಪ್ಪ ಗ್ರಾಮದ ಒಟ್ಟು 19 ಎಕರೆ 23 ಗುಂಟೆ ಜಮೀನಿನಲ್ಲಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ, ಬೆಂಗಳೂರು ಇವರ ಆದೇಶ ಹಾಗೂ ಶಿವಮೊಗ್ಗ ನಗರ ಆಶ್ರಯ ಸಮಿತಿ ತೀರ್ಮಾನದಂತೆ ಜಿ+ 2 ಮಾದರಿಯ ಮನೆಗಳನ್ನು ಶಿವಮೊಗ್ಗ ನಗರದ ನಿವೇಶನರಹಿತರಿಗೆ ಹಂಚುವ ಸಲುವಾಗಿ ಹೊಸದಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

Shivamoggacitycorp.org ಜಾಲತಾಣದAshraya Yojana Application ಮೆನುವಿನಲ್ಲಿ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದ್ದು ಆಗಸ್ಟ್ 25 ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ. ಸೆಪ್ಟೆಂಬರ್ 30 ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಸಲು ಕಡೆಯ ದಿನಾಂಕ. ಹಾಗೂ ಅಕ್ಟೋಬರ್ 07 ಬ್ಯಾಂಕ್ ಮೂಲಕ ನಿಗದಿತ ಶುಲ್ಕವನ್ನು ಪಾವತಿಸಲು ಕಡೆಯ ದಿನವಾಗಿದೆ.

18 ವರ್ಷ ಮೇಲ್ಪಟ್ಟ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.(ಪುರುಷ ಅಭ್ಯರ್ಥಿಯಾಗಿದ್ದ ಮಾಜಿ ಸೈನಿಕ, ವಿಕಲಚೇತನ, ವಿಧುರ ಹಾಗೂ ಹಿರಿಯ ನಾಗರೀಕ ಅಭ್ಯರ್ಥಿಯಾಗಿರಬೇಕು)
ಅರ್ಜಿದಾರರು ಶಿವಮೊಗ್ಗ ನಗರ ಪ್ರದೇಶದಲ್ಲಿ ವಾಸವಾಗಿರಬೇಕು. ಬಿಪಿಎಲ್/ಅಂತ್ಯೋದಯ ಪಡಿತರ ಚೀಟಿ ಹೊಂದಿರಬೇಕು. ಅರ್ಜಿದಾರ ಮತ್ತು ಅವರ ಕುಟುಂಬದವರು ಸ್ವಂತ ನಿವೇಶನ/ಮನೆಯನ್ನು ಹೊಂದಿರಬಾರದು. ಅರ್ಜಿಯನ್ನು ಮಹಿಳಾ ಫಲಾನುಭವಿ ಹೆಸರಿನಲ್ಲಿಯೇ ಸಲ್ಲಿಸುವುದು. ಯಾವುದೇ ಇತರೆ ಯೋಜನೆಯಡಿ ಸೌಲಭ್ಯ ಪಡೆದಿರಬಾರದು. ಅರ್ಜಿದಾರರ ಹೆಸರಿನಲ್ಲಿ ಇರುವ ಇತ್ತೀಚಿನ ವಾರ್ಷಿಕ ಆದಾಯ ಪ್ರಮಾಣ ಪತ್ರ (ರೂ.86,700/- ಗಳಿಗಿಂತ ಕಡಿಮೆ ಆದಾಯ ಹೊಂದಿರಬೇಕು). ತೃತೀಯ ಲಿಂಗಿಗಳೂ ಸಹ ಅರ್ಜಿಯನ್ನು ಸಲ್ಲಿಸಬಹುದು.

ಸಾಮಾನ್ಯ ಪ್ರವರ್ಗ-1, 2(ಎ), 2(ಬಿ, 3(ಎ), 3(ಬಿ) ಗೆ ಸೇರಿದ ಅರ್ಜಿದಾರರಿಗೆ ರೂ.200 ಅರ್ಜಿ ಶುಲ್ಕ, ರೂ.8000/- ಇಎಂಡಿ ವಂತಿಕೆ ಒಟ್ಟು ರೂ.8200/-. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ಅರ್ಜಿದಾರರಿಗೆ ರೂ.100 ಅರ್ಜಿ ಶುಲ್ಕ, ರೂ.5000/- ಇಎಂಡಿ ವಂತಿಕೆ ಒಟ್ಟು ರೂ.5100/-. ನಿಗದಿತ ಶುಲ್ಕವನ್ನು ಶಿವಮೊಗ್ಗ ನಗರದ ಕೆನರಾ ಬ್ಯಾಂಕ್ನ ಎಲ್ಲಾ ಶಾಖೆಗಳಲ್ಲಿ/ಬ್ಯಾಂಕ್ ಆಫ್ ಬರೋಡಾದ ಎಸ್.ಆರ್.ಶಾಖೆಗಳಲ್ಲಿ/ಇಂಡಿಯನ್ ಬ್ಯಾಂಕ್ನ ಮಹಾನಗರಪಾಲಿಕೆ ಶಾಖೆ ಹಾಗೂ ಶಿವಮೊಗ್ಗ ಒನ್ ಕೇಂದ್ರಗಳಲ್ಲಿ ನಗದು ಅಥವಾ ಡೆಬಿಟ್ ಕಾರ್ಡ್ ಮೂಲಕ ಪಾವತಿಸತಕ್ಕದ್ದು.

ಪ.ಜಾತಿ ಶೇ.30, ಪ.ಪಂ ಶೇ.10, ಅಲ್ಪಸಂಖ್ಯಾತರು ಶೇ.10 ಮತ್ತು ಸಾಮಾನ್ಯ ಶೇ.50. ಮೀಸಲಾತಿ ಇದ್ದು ಅರ್ಜಿಯೊಂದಿಗೆ ಅರ್ಜಿದಾರರ ಇತ್ತೀಚಿನ 1 ಪಾಸ್ಪೋರ್ಟ್ ಸೈಜಿನ ಕಲರ್ ಭಾವಚಿತ್ರ, ಆಧಾರ್ಕಾರ್ಡ್, ಬಿಪಿಎಲ್ ಪಡಿತರ ಚೀಟಿ, ಪ.ಜಾ/ಪ.ಪಂ/ವಿಕಲಚೇತನ/ಹಿರಿಯ ನಾಗರೀಕರು/ಮಾಜಿ ಸೈನಿಕ/ಸೈನಿಕರ ವಿಧವೆಯರು/ವಿಧುರರು/ಸ್ವಾತಂತ್ರ್ಯ ಯೋಧರು ಸಕ್ಷಮ ಪ್ರಾಧಿಕಾರದಿಂದ ಪಡೆದಂತಹ ಪ್ರಮಾಣ ಪತ್ರವನ್ನು ಹೊಂದಿರಬೇಕು. ಚಾಲ್ತಿಯಲ್ಲಿರುವ ಬ್ಯಾಂಕ್ ಪಾಸ್ ಪುಸ್ತಕ ಮತ್ತು ವಾರ್ಷಿಕ ಆದಾಯ ಪ್ರಮಾಣ ಪತ್ರ ದಾಖಲೆಗಳನ್ನು ಆನ್ಲೈನ್ನಲ್ಲಿ ಸಲ್ಲಿಸಬೇಕೆಂದು ಮಹಾನಗರಪಾಲಿಕೆ ಪ್ರಕಟಣೆ ತಿಳಿಸಿದೆ.