ಬೆಂಗಳೂರು,ಆ.26:
ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದಂತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಕರ್ನಾಟಕ ಭೂ ಕಬಳಿಕೆ ಕಾಯ್ದೆಯ ತಿದ್ದುಪಡಿಗೆ, ಸಚಿವ ಸಂಪುಟ ಒಪ್ಪಿಗೆ ಸೂಚಿಸಲಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಗ್ರಾಮೀಣ ಪ್ರದೇಶದ ರೈತರ ಹಾಗೂ ಇತರರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸುವುದರಿಂದ ರಕ್ಷಣೆ ದೊರೆಯಲಿದೆ. ಈ ಮೂಲಕ ರಾಜ್ಯದ ರೈತರಿಗೆ ಸಿಹಿ ಸುದ್ದಿ ಹೊರಬಿದ್ದಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ, ಕರ್ನಾಟಕ ಭೂ ಕಬಳಿಕೆ (ನಿಷೇಧ) ಕಾಯಿದೆ 2011ರ ಕಲಮು 2(ಡಿ) ಗೆ ತಿದ್ದುಪಡಿ ತರಲು ನಿರ್ಧಾರ ಮಾಡಿದ್ದು, ಬಹುದಿನಗಳ ಜನತೆಯ ಬೇಡಿಕೆಗೆ, ಸ್ಪಂದಿಸಿದಂತಾಗಿದೆ ಎಂದು ತಿಳಿಸಿದ್ದಾರೆ.
ಸೆ.12ರಿಂದ ಅಧಿವೇಶನ
ಸೆಪ್ಟಂಬರ್ 12 ರಿಂದ ಅಧಿವೇಶನ ಪ್ರಾರಂಭವಾಗಲಿದೆ. 10 ದಿನಗಳ ಕಾಲ ಬೆಂಗಳೂರಿನಲ್ಲಿಯೇ ಅಧಿವೇಶನ ನಡೆಯಲಿದೆ.
ಪ್ರಸ್ತಾವಿತ ಕರಡು ತಿದ್ದುಪಡಿಯು, ಯಾವುದೇ ರೀತಿಯಲ್ಲಿಯೂ ವಿಧೇಯಕದ ಮೂಲ ಕರಡಿಗೆ ವಿರುದ್ದವಾಗಿರದೆ, ಗ್ರಾಮೀಣ ಪ್ರದೇಶದ, ರೈತರ ಹಾಗೂ ಇತರರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸುವುದರಿಂದ ರಕ್ಷಣೆ ದೊರೆಯುತ್ತದೆ. ಸಣ್ಣ ಹಾಗೂ ಅತಿ ಸಣ್ಣ ರೈತರು ಹಾಗೂ ಜನಸಾಮಾನ್ಯರು, ಬಗರ್ ಹುಕುಂ ಸಾಗುವಳಿ ಸಂಬಂಧ, ಬೆಂಗಳೂರಿನಲ್ಲಿ ಸ್ಥಾಪಿತವಾದ ವಿಶೇಷ ನ್ಯಾಯಾಲಯಕ್ಕೆ ಅಲೆಯುವುದನ್ನು ತಪ್ಪಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.
ಈ ಕುರಿತು, ಸೂಕ್ತ ನಿರ್ಧಾರಕ್ಕೆ ಬಂದು, ವಿಧೇಯಕಕ್ಕೆ ತಿದ್ದುಪಡಿ ತರಲು ನಿರ್ಧರಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್ ಅಶೋಕ್ ಅವರನ್ನು, ಹಾರ್ಧಿಕವಾಗಿ ಅಭಿನಂದಿಸುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
