ಶಿವಮೊಗ್ಗ: ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಯನ್ನು ತಡೆಯಲು ತಹಶೀಲ್ದಾರರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಸೂಚನೆ ನೀಡಿದರು.
ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.
ಮರಳುಗಾರಿಕೆ ಅವಧಿ ಆರಂಭವಾಗುವುದಕ್ಕೂ ಪೂರ್ವದಲ್ಲೇ, ಅಕ್ರಮ ಮರಳುಗಾರಿಕೆ ನಡೆಯುವುದನ್ನು ತಡೆಗಟ್ಟಲು ತಪಾಸಣಾ ತಂಡಗಳನ್ನು ರಚಿಸಬೇಕು. ಅಕ್ರಮ ಮರಳುಗಾರಿಕೆಯನ್ನು ಪತ್ತೆ ಹಚ್ಚಿ ಅತಿ ಹೆಚ್ಚಿನ ದಂಡವನ್ನು ವಿಧಿಸಿ ಕಾನೂನು ಕ್ರಮ ಜರುಗಿಸಬೇಕು. ಪ್ರತಿ ತಾಲೂಕಿನಲ್ಲಿ ಈ ಹಿಂದೆ ರಚಿಸಲಾಗಿರುವ ತನಿಖಾ ಠಾಣೆಗಳು ಮತ್ತು ಚಾಲಿತ ದಳಗಳನ್ನು ಪುನಶ್ಚೇತನಗೊಳಿಸಬೇಕು.
ಅಕ್ರಮ ಮರಳನ್ನು ದಾಸ್ತಾನು ಮಾಡಲು ಅರಣ್ಯ ಪ್ರದೇಶ ಬಳಕೆ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಅಂತಹ ಪ್ರಕರಣಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಅರಣ್ಯ ಕಾಯ್ದೆ ಅಡಿ ಮೊಕದ್ದಮೆ ದಾಖಲಿಸಬೇಕು ಎಂದು ಹೇಳಿದರು.
ಹೊಸನಗರ ತಾಲೂಕಿನ ಈಚಲಕೊಪ್ಪ, ಬಾವಿಕೊಪ್ಪ, ಮುಳುಗಡ್ಡೆ ಇತ್ಯಾದಿ ಮತ್ತು ಸಾಗರ ತಾಲೂಕಿನ ಕಾರ್ಗಲ್ ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ಮೋಟಾರ್ ಬೋಟ್ ಬಳಸಿ ಅಕ್ರಮ ಮರಳುಗಾರಿಕೆ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಇದನ್ನು ತಡೆಗಟ್ಟಲು ಪೊಲೀಸರನ್ನು ಒಳಗೊಂಡ ವಿಶೇಷ ಸ್ಕ್ಯಾಡ್ ರಚಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.
ಹೊಸ ಮರಳು ನೀತಿಯ ಪ್ರಕಾರ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್‌ಗಳಿಗೆ ೫೪ ಮರಳು ಬ್ಲಾಕ್‌ಗಳನ್ನು ಮಂಜೂರು ಮಾಡಲಾಗಿದ್ದು, ಈ ಪೈಕಿ ೨೪ ಮರಳು ಬ್ಲಾಕ್‌ಗಳನ್ನು ನವೀಕರಣ ಮಾಡಬೇಕಾಗಿದೆ. ಗ್ರಾಮ ಪಂಚಾಯತ್‌ಗಳು ಮರಳುಗಾರಿಕೆಗೆ ಕಟ್ಟಿರುವ ರಾಜಧನವನ್ನು ಪರಿಶೀಲನೆ ನಡೆಸಬೇಕು. ರಾಜಧನ ಪಾವತಿಸುವ ಕುರಿತಾಗಿ ಎಲ್ಲಾ ಪಿಡಿಒಗಳ ಸಭೆಯನ್ನು ಕರೆದು ಸೂಕ್ತ ನಿರ್ದೇಶನ ನೀಡುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಸರ್ಕಾರಿ ಕಾಮಗಾರಿಗಳನ್ನು ನಿರ್ವಹಿಸಲು ೫ಮರಳು ಬ್ಲಾಕ್‌ಗಳನ್ನು ಮಂಜೂರು ಮಾಡಲಾಗಿದೆ. ಈ ಬ್ಲಾಕ್‌ಗಳನ್ನು ಪಡೆದುಕೊಂಡಿರುವ ಇಲಾಖೆಗಳು, ಯಾವ ಸರ್ಕಾರಿ ಕಾಮಗಾರಿಗೆ ಎಷ್ಟು ಮರಳು ಪಡೆದುಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ಒದಗಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಎಎಸ್ಪಿ ಡಾ.ವಿಕ್ರಮ್ ಅಮಟೆ, ಡಿಎಫ್‌ಒ ಶಿವಶಂಕರ್, ಹಿರಿಯ ಭೂ ವಿಜ್ಞಾನಿ ವಿಂಧ್ಯಾ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.