ಇದು ರಕ್ಷಣಾ ಕಾರ್ಯಾಚರಣೆಯ ಅಣಕು ಪ್ರದರ್ಶನ

ಶಿವಮೊಗ್ಗ, ಜೂ.30: ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಐಒಸಿಎಲ್ ಇಂಡೇನ್ ಬಾಟ್ಲಿಂಗ್ ಸ್ಥಾವರದಲ್ಲಿ ಬೆಂಕಿ ಅನಾಹುತ ಸಂಭವಿಸಿದಾಗ ಕೈಗೊಳ್ಳುವ ರಕ್ಷಣಾ ಕಾರ್ಯಾಚರಣೆಯ ಅಣಕು ಪ್ರದರ್ಶನ ಶುಕ್ರವಾರ ನಡೆಸಲಾಯಿತು.

ಬಾಟ್ಲಿಂಗ್ ಘಟಕದ ಮೂರನೇ ಸಾಲಿನಲ್ಲಿ ನಿಲ್ಲಿಸಲಾಗಿದ್ದ ಬೃಹತ್ ಟ್ಯಾಂಕರ್‍ನಲ್ಲಿ ಲೀಕೇಜ್ ಕಂಡು ಬಂದು ಬೆಂಕಿ ಹತ್ತಿಕೊಂಡ ತಕ್ಷಣ ನಿರಂತರವಾಗಿ ಅಪಾಯದ ಸೈರನ್ ಮೊಳಗಲು ಆರಂಭಿಸಿತು. ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಾವರದ ರಕ್ಷಣಾ ತಂಡ ಬೃಹತ್ ಪೈಪ್‍ಗಳ ಮೂಲಕ ನಿರಂತರವಾಗಿ ನೀರು, ಕೆಮಿಕಲ್ ದ್ರಾವಣವನ್ನು ಹಾಯಿಸುವ ಮೂಲಕ ನಿಮಿಷಗಳ ಒಳಗಾಗಿ ಬೆಂಕಿಯನ್ನು ನಿಯಂತ್ರಿಸಿದರು. ಗಾಯಗೊಂಡಿದ್ದ ವ್ಯಕ್ತಿಗಳನ್ನು ತಕ್ಷಣ ಸ್ಥಳದಿಂದ ಭದ್ರಾವತಿ ಆಸ್ಪತ್ರೆಗೆ ತಕ್ಷಣ ಅಂಬ್ಯುಲೆನ್ಸ್ ಮೂಲಕ ಕೊಂಡೊಯ್ಯಲಾಯಿತು.

ಆ ಬಳಿಕ ಸ್ಥಾವರದ ಗೇಟಿನ ಹೊರಭಾಗದಲ್ಲಿ ನಿಲ್ಲಿಸಲಾಗಿದ್ದ ಗ್ಯಾಸ್ ಸಿಲಿಂಡರ್ ಹೊತ್ತ ಲಾರಿಯಲ್ಲಿ ಬೆಂಕಿ ಅನಾಹುತ ಕಂಡು ಬಂದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ವಾಹನ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಯಿತು.

ಇಂತಹ ಸೂಕ್ಷ್ಮ ಸ್ಥಾವರಗಳಲ್ಲಿ ಅವಘಡಗಳು ಸಂಭವಿಸಿದಾಗ ಕೈಗೊಳ್ಳಬೇಕಾದ ರಕ್ಷಣಾ ಕಾರ್ಯಾಚರಣೆಗಳ ಸನ್ನದ್ಧತೆಯನ್ನು ಪರಿಶೀಲಿಸಲು ಈ ಅಣಕು ಪ್ರದರ್ಶನವನ್ನು ಆಯೋಜಿಸಲಾಗಿದೆ. ಅವಘಡದ ಮಾಹಿತಿ ದೊರೆತ ತಕ್ಷಣ ಜಿಲ್ಲಾಡಳಿತದ ಅಧಿಕಾರಿಗಳು, ರಕ್ಷಣಾ ತಂಡ ತಕ್ಷಣ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದೆ. ಇಂತಹ ಅವಘಡಗಳು ಸಂಭವಿಸಿದಾಗ ಎಷ್ಟು ಸಮಯದ ಒಳಗಾಗಿ ಪ್ರಾಯೋಗಿಕವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಲು ಸಾಧ್ಯವಿದೆ ಎಂಬುವುದನ್ನು ಪರಿಶೀಲಿಸಲಾಗಿದೆ. ಇಂತಹ ಅವಘಡಗಳ ಸಂದರ್ಭದಲ್ಲಿ ಜಿಲ್ಲಾಡಳಿತ, ಪೊಲೀಸ್, ಅಗ್ನಿಶಾಮಕ ದಳ ಸೇರಿದಂತೆ ಎಲ್ಲಾ ಇಲಾಖೆಗಳ ಸಮನ್ವಯತೆ ಕುರಿತು ಪ್ರಾಯೋಗಿಕ ಪರಿಶೀಲನೆ ನಡೆಸಲಾಗಿದೆ ಎಂದು ಅಣಕು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಶಿವಮೊಗ್ಗ ಉಪ ವಿಭಾಗಾಧಿಕಾರಿ ಎಸ್.ಬಿ.ದೊಡ್ಡಗೌಡರ್ ಅವರು ಈ ಸಂದರ್ಭದಲ್ಲಿ ತಿಳಿಸಿದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಈ ಅಣಕು ಕಾರ್ಯಾಚರಣೆಯನ್ನು ಆಯೋಜಿಸಲಾಗಿತ್ತು. ಸ್ಥಾವರದಲ್ಲಿ ಲಭ್ಯವಿರುವ ಎಲ್ಲಾ ರೀತಿಯ ಅತ್ಯಾಧುನಿಕ ಅಗ್ನಿಶಾಮಕ ಉಪಕರಣಗಳ ಪ್ರಾತ್ಯಕ್ಷಿಕೆಯನ್ನು ಈ ಸಂದರ್ಭದಲ್ಲಿ ನಡೆಸಲಾಯಿತು.

ಇಂಡೇನ್ ಬಾಟ್ಲಿಂಗ್ ಸ್ಥಾವರವನ್ನು 2004ರಲ್ಲಿ ಆರಂಭಿಸಲಾಗಿದ್ದು, ಇಲ್ಲಿ 5ಕೆಜಿ, 10ಕೆಜಿ, 47.5 ಕೆಜಿ ಮತ್ತು 425ಕೆಜಿ ಎಲ್‍ಪಿಜಿ ಸಿಲಿಂಡರ್‍ಗಳನ್ನು ಬಾಟ್ಲಿಂಗ್ ಮಾಡಲಾಗುತ್ತಿದೆ.

ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಬಸವ ಪ್ರಭು ಶರ್ಮ, ಫ್ಯಾಕ್ಟರೀಸ್ ಸಹಾಯಕ ನಿರ್ದೇಶಕ ರವಿ ಬಾಬು, ಭದ್ರಾವತಿ ತಹಶೀಲ್ದಾರ್ ಪ್ರದೀಪ್ ಆರ್., ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ಗೋಪಿನಾಥ್, ಐಒಸಿಎಲ್ ಚೀಫ್ ಪ್ಲಾಂಟ್ ಮ್ಯಾನೇಜರ್ ಜೆ. ವಿಜಯಸೂರ್ಯ ಮತ್ತಿತರ ಅಧಿಕಾರಿಗಳು ಅಣಕು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!