ಶಿವಮೊಗ್ಗ ಜುಲೈ 29:
ವಿಮಾ ಕಂಪೆನಿ ವಿರುದ್ದ ಅರ್ಜಿದಾರ ಚೇತನ್ ಎಸ್.ಎಂ, ಸಿಟಿ ಬಸ್ ಮಾಲೀಕು ಇವರು ತಮ್ಮ ಬಸ್ ಅಪಘಾತಕ್ಕೀಡಾದ ಸಂದರ್ಭದಲ್ಲಿ ಬಸ್‍ಗೆ ಆದ ಹಾನಿಗೆ ಸಂಬಂಧಿಸಿದಂತೆ ಎದುರುದಾರ ವಿಮಾ ಕಂಪೆನಿಯಿಂದ ಸೂಕ್ತ ಪರಿಹಾರ ಕೋರಿ ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ದಾಖಲಿಸಿದ್ದ ಪ್ರಕರಣದಲ್ಲಿ ಪೀಠವು ಎದುರುದಾರರು ಅರ್ಜಿದಾರರಿಗೆ ಬಸ್ ಸರಿಪಡಿಸಿದ ಖರ್ಚು, ಪರಿಹಾರ ಮತ್ತು ನ್ಯಾಯಾಲಯದ ಖರ್ಚುವೆಚ್ಚ ಪಾವತಿಸುವಂತೆ ಆದೇಶಿಸಿದೆ.
ಅರ್ಜಿದಾರರು ಸಿಟಿ ಬಸ್‍ನ್ನು ರಾಘವೇಂದ್ರರಾವ್ ಎಂಬುವವರಿಂದ 2018 ರಲ್ಲಿ ಖರೀದಿಸಿದ್ದು, ಖರೀದಿಯ ನಂತರ ಬಸ್‍ನ ಮಾಲೀಕತ್ವ ಮತ್ತು ವಿಮಾ ಪಾಲಿಸಿ ಅರ್ಜಿದಾರರ ಹೆಸರಿಗೆ ಬಂದಿದ್ದರೂ ರೂಟ್ ಪರ್ಮಿಟ್ ಮೂಲ ಮಾಲಕರಿಂದ ವರ್ಗಾವಣೆಗೊಂಡಿರುವುದಿಲ್ಲ. ಸದರಿ ಬಸ್ ಅಪಘಾತಕ್ಕೀಡಾದ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿರುವ ವ್ಯಕ್ತಿ ಮರಣ ಸಂಭವಿಸುತ್ತದೆ. ಆಗ ಉದ್ರೇಕಿತ ಗುಂಪು ಕಲ್ಲು ತೂರಿ ಗಾಜು, ಕಿಟಕಿ ಮತ್ತು ಬಸ್ಸಿನ ಇತರೆ ವಸ್ತುಗಳನ್ನು ಹಾನಿಗೊಳಿಸಿರುತ್ತಾರೆ. ಈ ಹಾನಿಗೆ ಸಂಬಂಧಿಸಿದ ಖರ್ಚನ್ನು ನೀಡುವಂತೆ ಓರಿಯಂಟಲ್ ಇನ್ಶೂರೆನ್ಸ್ ಕಂಪನಿಗೆ ಕೋರಿದಾಗ ಪರ್ಮಿಟ್ ವರ್ಗಾವಣೆಗೊಂಡಿಲ್ಲದ ಕಾರಣ ಕ್ಲೇಮು ನೀಡಲಾಗುವುದಿಲ್ಲವೆಂದು ನಿರಾಕರಿಸಿದ್ದು ನೊಂದ ಅರ್ಜಿದಾರರು ಸೂಕ್ತ ಪರಿಹಾರ ಕೋರಿ ಪ್ರಕರಣ ದಾಖಲಿಸಿರುತ್ತಾರೆ.
ದಾಖಲೆಗಳು, ವಾಸ್ತವಾಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಪೀಠವು ಎದುರುದಾರರು ಅರ್ಜಿದಾರರಿಗೆ ಬಸ್ಸು ರಿಪೇರಿ ಮಾಡಿಸಿದ ಖರ್ಚು ರೂ.19,500 ಗಳನ್ನು ಶೇ.8 ಬಡ್ಡಿ ದರ ಸೇರಿಸಿ ನೋಟಿಸ್ ನೀಡಿದ ದಿನಾಂಕದಿಂದ 45 ದಿನಗಳ ಒಳಗೆ ಹಿಂತಿರುಗಿಸಬೇಕೆಂದು ಹಾಗೂ ಪರಿಹಾರ ರೂ.10, 000 ಮತ್ತು ರೂ,5,000 ಕೋರ್ಟಿನ ವೆಚ್ಚವನ್ನು ನೀಡಬೇಕೆಂದು ಆದೇಶಿಸಿದೆ.