ಶಿವಮೊಗ್ಗ, ಜು.೨೮:
ನಗರದ ಸ್ಮಾರ್ಟ್ಸಿಟಿ ಕಾಮಗಾರಿಗಳ ಲೋಪಗಳ ಬಗ್ಗೆ ತಲೆ ಇಲ್ಲದೇ ಕೆಲಸ ಮಾಡುವ ವಿಧಾನಗಳ ಬಗ್ಗೆ ಶಿವಮೊಗ್ಗ ನಗರದ ಜನರೇ ಕ್ಯಾಕರಿಸಿ ಉಗಿಯುತ್ತಿದ್ದರು ಸಹ ತನ್ನಷ್ಟಕ್ಕೆ ತಾನೇ ಹಳೆ ಕಲ್ಲು ತೆಗೆದು ಅವುಗಳನ್ನು ಹೊಸದಾಗಿ ತೋರಿಸುತ್ತಾ, ಕೋಟಿಗಟ್ಟಲೇ ಹಣ ಲೆಕ್ಕಚುಕ್ತಾ ಮಾಡುತ್ತಿರುವ ಸ್ಮಾರ್ಟ್ಸಿಟಿ ಇಂಜಿನಿಯರ್ಗಳ ತಲೆ ಇಲ್ಲದ ಕಾಮಗಾರಿಗಳಿಗೆ ನಿನ್ನೆ ರಾತ್ರಿ ಸುರಿದ ಮಳೆ ಶಿವಮೊಗ್ಗ ನೆಹರೂ ರಸ್ತೆಯಲ್ಲೇ ತೋರಿಸಿದೆ.
ಜನನೀಬಿಡ ಹಾಗೂ ಮುಖ್ಯ ಕೇಂದ್ರವಾಗಿರುವ ನಗರದ ನೆಹರೂ ರಸ್ತೆಯ ಟೈಲ್ಸ್ಗಳನ್ನು ಬದಲಾಯಿಸಿ ಡ್ರೈನೇಜ್ ಕಾಮಗಾರಿಯನ್ನು ಮುಗಿಸಿದ್ದೇವೆ ಎಂದು ಪಕ್ಕಾಫೋಸ್ ನೀಡಿ ಲೆಕ್ಕಚುಕ್ತಾ ಮಾಡಿರುವ ಸ್ಮಾರ್ಟ್ಸಿಟಿ ಇಂಜಿನಿಯರ್ ಮಹಾಶಯರು ಬಿದ್ದ ಮಳೆಯ ನೀರನ್ನು ಸಮರ್ಪಕವಾಗಿ ಕಾಲುವೆಗೆ ಹೋಗದಂತೆ ನೋಡಿಕೊಂಡಿರುವುದು ಅವರ ತಲೆಯಲ್ಲಿರುವ ಇಂಜಿನಿಯರ್ ಕಲಿಕೆಯನ್ನೇ ಪ್ರಶ್ನಿಸುತ್ತಿದೆ.
ನಿನ್ನೆ ರಾತ್ರಿ ಸುರಿದ ಧಾರಕಾರ ಮಳೆಗೆ ರಾಜಕಾಲುವೆ ಬಲಭಾಗದ ಬ್ಯಾಗಿನ ಅಂಗಡಿ, ಮೊಬೈಲ್ ಮಳಿಗೆ, ಬಟ್ಟೆ ಅಂಗಡಿಗಳು ಸಂಪೂರ್ಣ ಮುಳುಗಿವೆ. ಹೊಟ್ಟೆಪಾಡಿಗಾಗಿ ನಿತ್ಯದ ಬದುಕು ಕಟ್ಟಿಕೊಳ್ಳಲು ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ತಂದಿಟ್ಟುಕೊಂಡಿದ್ದ ಈ ಬಡವ್ಯಾಪಾರಿಗಳ ಪರಿಸ್ಥಿತಿ ನೋಡಿದರೆ ನಿಜಕ್ಕೂ ಅಯ್ಯೋ ಪಾಪ ಎನಿಸುತ್ತಿದೆ.
ಇಂತಹ ಸಂದರ್ಭದಲ್ಲಿ ಜನರ, ವ್ಯಾಪಾರಸ್ಥರ ಫೋನ್ ಕರೆಗಳನ್ನು ಸ್ವಿಕರಿಸದ ಮಟ್ಟಿಗೆ ಸ್ಮಾರ್ಟ್ಸಿಟಿ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು, ಕೊನೆ ಪಕ್ಷ ಮತ್ತೆ ಓಟು ಕೇಳಬೇಕು ಎಂಬ ಯೋಚನೆ ಇರುವ ಸದಸ್ಯರಾದರೂ ಕನಿಷ್ಠ ಇಲ್ಲಿಗೆ ಆಗಮಿಸುವ ಸೌಜನ್ಯ ತೋರಿಸದಿರುವುದು ಇಡೀ ಆಡಳಿತ ವ್ಯವಸ್ಥೆ ಅಧಿಕಾರಿಗಳು, ಇಂಜಿನಿಯರ್ಗಳ ಕಪಿಮುಷ್ಟಿಯಲ್ಲಿ ನಿಂತಿರುವುದನ್ನು ಕಾಣಬಹುದು.
ಒಂದು ರಸ್ತೆ, ಅಲ್ಲಿಗೆ ಬೀಳುವ ನೀರು, ಅಲ್ಲಿಗೆ ಹರಿಯುವ ನೀರು ಚರಂಡಿಗೆ ಸೇರುವ ಅಳತೆ ಹಾಗೂ ಭದ್ರತೆಯ ಬಗ್ಗೆ ಕಿಂಚಿತ್ತೂ ಚಿಂತಿಸಿರುವ ಸಾಧ್ಯತೆಗಳಿಲ್ಲ. ಈ ಇಂಜಿನಿಯರ್ಗಳಿಗೆ ಅದ್ಯಾವ ಕಾಲೇಜಿನಲ್ಲಿ ಸರ್ಟಿಫಿಕೇಟ್ ಕೊಟ್ಟರೋ ಭಗವಂತನೇ ಬಲ್ಲ. ಇಂದು ಬೆಳಗ್ಗೆ ಸಹ ಅಲ್ಲಿನ ವ್ಯಾಪಾರಸ್ಥರು, ನಗರ ಪಾಲಿಕೆ ಆಯುಕ್ತರು, ಸದಸ್ಯರು, ಸ್ಮಾರ್ಟ್ಸಿಟಿ ಎಂಡಿ ಹಾಗೂ ಇಂಜಿನಿಯರ್ಗಳಿಗೆ ಕರೆ ಮಾಡಿದರೆ ಬಹಳಷ್ಟು ಜನ ಇವತ್ತು ಅಮವಾಸ್ಯೆ ದೇವಸ್ಥಾನಕ್ಕೆ ಹೋಗಬೇಕು ಎಂದಿದ್ದಾರೆ. ಇಲ್ಲಿ ಬಡವ್ಯಾಪಾರಿಗಳಿಗೆ ಬದುಕಿಲ್ಲವೇ..? ಪೂಜೆ ಪುನಸ್ಕಾರಗಳಿಲ್ಲವೇ.? ಬಡವರ ಬದುಕಿಗೆ ಕೊಳ್ಳಿಹಚ್ಚಿ ದೇವಸ್ಥಾನಕ್ಕೆ ಹೋಗಿ ಬಂದರೆ ಅದ್ಯಾವ ಪುಣ್ಯ ಬರುತ್ತದೆಯೋ ಭಗವಂತನಿಗೆ ಗೊತ್ತು.


