ಬಾಗಲಕೋಟೆ,
ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯನವರು ತಮ್ಮ ಕ್ಷೇತ್ರ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರಕ್ಕೆ ಇಂದು ಭೇಟಿ ನೀಡಿ ಕೆರೂರು ಪಟ್ಟಣ ಹಿಂಸಾಚಾರದಲ್ಲಿ ಗಾಯಗೊಂಡು ಸಂತ್ರಸ್ತರಾದವರ ಕುಟುಂಬಸ್ಥರಿಗೆ ಪರಿಹಾರ ನೀಡಲು ಹೋದ ವೇಳೆ ಮುಸ್ಲಿಂ ಜನಾಂಗದ ಮಹಿಳೆ ತರಾಟೆ ತೆಗೆದುಕೊಂಡ ಕೊಟ್ಟ ೨ ಲಕ್ಷ ರೂಪಾಯಿ ಹಣವನ್ನು ಕಾರಿನತ್ತ ಎಸೆದ ಪ್ರಸಂಗ ನಡೆದಿದೆ.
ಮೊನ್ನೆ ಜುಲೈ ೬ರಂದು ಹಿಂದೂ-ಮುಸ್ಲಿಮ್ ಕೋಮಿನ ಯುವಕರ ಮಧ್ಯೆ ಕ್ಷುಲ್ಲಕ ವಿಷಯಕ್ಕೆ ಯುವತಿಯರನ್ನು ಚುಡಾಯಿಸಿದ ಕಾರಣಕ್ಕೆ ಗಲಾಟೆ ಆರಂಭವಾಗಿ ಅದು ಘರ್ಷಣೆ ಹಿಂಸಾಚಾರಕ್ಕೆ ತಿರುಗಿ ಕೆರೂರು ಪಟ್ಟಣದಲ್ಲಿ ಸೆಕ್ಷನ್ ೧೪೪ ಜಾರಿ ಮಾಡಿ ನಿಷೇಧಾಜ್ಞೆ ಹೇರಲಾಗಿತ್ತು.
ಘಟನೆಯಲ್ಲಿ ನಾಲ್ವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಘಟನೆ ನಂತರ ದುಷ್ಕರ್ಮಿಗಳು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚಿದ್ದರಿಂದ ಹಲವು ವಾಹನಗಳು ಜಖಂಗೊಂಡಿದ್ದವು.
ಇಂದು ಕ್ಷೇತ್ರದ ಶಾಸಕರಾಗಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಗಾಯಗೊಂಡಿದ್ದ ಸಂತ್ರಸ್ತರ ಕುಟುಂಬಸ್ಥರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿ ಹಣ ನೀಡಲು ಹೋಗಿದ್ದರು. ಹಲ್ಲೆಯಲ್ಲಿ ಗಾಯ ಗೊಂಡಿದ್ದ ಹನೀಫ್, ರಫೀಕ್ ಸೇರಿದಂತೆ ನಾಲ್ವರಿಗೆ ಸಾಂತ್ವನ ಹೇಳಿ ತಲಾ ೫೦ ಲಕ್ಷ ರೂಪಾಯಿಗಳಂತೆ ೨ ಲಕ್ಷ ರೂಪಾಯಿ ನೀಡಿದ್ದರು. ಆಗ ರಫೀಕ್ ಸೋದರಿ ರಜ್ಮಾ, ನಮಗೆ ದುಡ್ಡು ಬೇಡ, ನಾವು ಕಷ್ಟಪಟ್ಟು ಕೆಲಸ ಮಾಡಿ ಜೀವನ ನಡೆಸುತ್ತೇವೆ,. ನಮಗೆ ಶಾಂತಿ ಬೇಕು, ನಮ್ಮನ್ನು ನಮ್ಮ ಪಾಡಿಗೆ ಶಾಂತಿಯಿಂದ ಬದುಕಲು ಬಿಡಿ ಎಂದು ಹಣವನ್ನು ಕಾರಿನತ್ತ ಬಿಸಾಕಿದರು.