ಸಾಗರ,
ಮಾರ್ಚ್17 ರಂದು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಸರ್ವಸದಸ್ಯರ ಸಭೆಯಲ್ಲಿ ನಡೆದ ಗಲಾಟೆಯಲ್ಲಿ ಉಪಾಧ್ಯಕ್ಷ ಶ್ರೀಪಾದ ಹೆಗಡೆ ಮತ್ತು ಪ್ರಧಾನ ಕಾರ್ಯದರ್ಶಿ ಜಗದೀಶ್ ಗೌಡ ಅವರ ಮೇಲೆ ಹಲ್ಲೆ ನಡೆಸಿದ ವರ ವಿರುದ್ಧ ಎಫ್‌ಐಆರ್ ದಾಖಲಿಸದ ಕ್ರಮ ಖಂಡಿಸಿ ಬ್ರಾಹ್ಮಣ ವೀರಶೈವ ಒಕ್ಕೂಟದ ವತಿಯಿಂದ ಡಿವೈಎಸ್‌ಪಿ ಕಚೇರಿ ಎದುರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು, ಎಂಡಿಎಫ್‌ನಲ್ಲಿ ಬ್ರಾಹ್ಮಣ ಸಮುದಾಯದ ಮುಖಂಡ ಶ್ರೀಪಾದ ಹೆಗಡೆ ಮತ್ತು ಲಿಂಗಾಯಿತ ಸಮಾಜದ ಮುಖಂಡ ಜಗದೀಶ್ ಗೌಡ ಅವರ ಮೇಲೆ ನಡೆದ ಹಲ್ಲೆ ಅತ್ಯಂತ ಅಮಾನವೀಯವಾಗಿದೆ. ಶಾಸಕ ಹರತಾಳು ಹಾಲಪ್ಪ ಅವರೇ ಹಲ್ಲೆಗೆ ನೇರ ಕಾರಣವಾಗಿದ್ದಾರೆ. ಶಾಸಕರಾಗಿ ತಾವೊಬ್ಬರೇ ಅಲ್ಲಿನ ಸರ್ವಸದಸ್ಯರ ಸಭೆಗೆ ಹೋಗದೆ, ಗೂಂಡಾಗಳನ್ನು ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ.
ಘಟನೆ ನಡೆದು ಮೂರ‍್ನಾಲ್ಕು ತಿಂಗಳು ಕಳೆದರೂ ಈತನಕ ಪೊಲೀಸರು ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲು ಮಾಡದೆ ಇರುವುದು ನೋಡಿದರೆ ಪೊಲೀಸರು ಶಾಸಕರ ಕೈಗೊಂಬೆಯಂತೆ ವರ್ತಿಸುತ್ತಿರುವುದು ಎದ್ದು ಕಾಣುತ್ತಿದೆ. ಇವತ್ತು ಶ್ರೀಪಾದರನ್ನು ಬಂಧಿಸಿ ಎಂದು ಪ್ರತಿಭಟನೆ ನಡೆಸಲಾಗುತ್ತಿದೆ. ಹಲ್ಲೆ ಮಾಡಿದವರ ಬದಲು ಹಲ್ಲೆಗೊಳಗಾದವರನ್ನು ಬಂಧಿಸುವ ಆಗ್ರಹ ಮಾಡುತ್ತಿರುವುದು ವಿಚಿತ್ರ ಬೆಳವಣಿಗೆಯಾಗಿದೆ. ಸರ್ಕಾರ ಅವರದ್ದಿರುವಾಗ ಶ್ರೀಪಾದರಾವ್ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಅನುಮಾನವಿದ್ದರೆ, ಅವರದೇ ಸರ್ಕಾರವಿರುವಾಗ ತನಿಖೆ ನಡೆಸಬಹುದಿತ್ತು. ಅಧಿಕಾರ ಇದೆ ಎಂದು ಹಲ್ಲೆ ಮಾಡಿಸಿರುವು ದರಿಂದ ಶಾಸಕರ ಮೇಲೂ ಎಫ್‌ಐಆರ್ ದಾಖಲಾಗಬೇಕು ಎಂದು ಪ್ರತಿಪಾದಿಸಿದರು.
ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಎಂಡಿಎಫ್ ಎಜಿಎಂನ ಮುಂಚಿನ ದಿನವೇ ಹಲ್ಲೆ ನಡೆಸುವ ಏರ್ಪಾಡು ನಡೆದಿದೆ. ಇಲ್ಲದಿದ್ದರೆ ಅವತ್ತಿನ ಸಭೆಗೆ ಹಾಲಪ್ಪ ಒಬ್ಬರೇ ಬರುತ್ತಿದ್ದರೇ ವಿನಃ ತಮ್ಮ ಪಡೆಯನ್ನು ತರುತ್ತಿರಲಿಲ್ಲ. ಸಾಂಗ್ಲಿಯಾನ, ಕೆಂಪಯ್ಯ, ಅರುಣ್ ಚಕ್ರವರ್ತಿಯಂತಹ ಪೊಲೀಸರನ್ನು ಕಂಡ ಸಾಗರದಲ್ಲಿ ಹಲ್ಲೆಗೊಳಗಾದವರ ದೂರಿಗೆ ಎಫ್‌ಐಆರ್ ಮಾಡದ ಎಎಸ್‌ಪಿಯಂತವರನ್ನೂ ಕಾಣುವಂತಾಗಿದೆ ಎಂದು ವ್ಯಂಗ್ಯವಾಡಿದರು.
ಆಮ್‌ಆದ್ಮಿ ಪಕ್ಷದ ರಾಜ್ಯ ಮುಖಂಡ ಕೆ.ದಿವಾಕರ್ ಮಾತನಾಡಿದರು.
ನಿವೃತ್ತ ಪ್ರಾಚಾರ್ಯ ಅ.ಪು.ನಾರಾಯಣಪ್ಪ ಮಾತನಾಡಿ, ನಡೆಯಬಾರದ ಘಟನೆ ನಡೆದಿದ್ದು ತುಂಬಾ ಜನರಿಗೆ ನೋವಾಗಿದೆ. ಘಟನೆಗೆ ಸಂಬಂಧಪಟ್ಟಂತೆ ಪೊಲೀಸ್ ಇಲಾಖೆ ಯಾವುದೇ ಒತ್ತಡಕ್ಕೆ ಮಣಿಯದೆ ಕಾನೂನುರೀತ್ಯಾ ಕ್ರಮ ತೆಗೆದುಕೊಳ್ಳಬೇಕು. ನೊಂದವರಿಗೆ ಪೊಲೀಸ್ ಇಲಾಖೆ ಮೇಲೆ ವಿಶ್ವಾಸ ಬರುವಂತೆ ಅಧಿಕಾರಿಗಳು ವರ್ತನೆ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀಪಾದ ಹೆಗಡೆ ನಿಸ್ರಾಣಿ, ಜಗದೀಶ್ ಗೌಡ, ಅನಿತಾಕುಮಾರಿ, ಕೆ.ಎನ್.ಶ್ರೀಧರ್, ಯು.ಎಚ್.ರಾಮಪ್ಪ, ಬಿ.ಎಚ್.ರಾಘವೇಂದ್ರ, ಚಂದ್ರಮೌಳಿ ಹೊಸನಗರ, ವಿರೇಶ್ ಗೌಡ, ರವೀಶ್ ಕುಮಾರ್, ಸೋಮಶೇಖರ ಲ್ಯಾವಿಗೆರೆ, ವಿಜಯಕುಮಾರ್ ಇತರರಿದ್ದರು.