ಶಿವಮೊಗ್ಗ,ಜು.12;
ದಾವಣಗೆರೆಯಲ್ಲಿ ಆಗಸ್ಟ್ 3 ರಂದು ನಡೆಯಲಿರುವ ಸಿದ್ಧರಾಮೋತ್ಸವದ ಬಳಿಕ ಬಿಜೆಪಿ ಸರ್ಕಾರ ಪತನದತ್ತ ಸಾಗುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಭವಿಷ್ಯ ನುಡಿದರು.
ಅವರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷದ ವತಿಯಿಂದ ಆ. 3 ರಂದು ಸಿದ್ಧರಾಮೋತ್ಸವ ನಡೆಯಲಿದೆ. ಸಿದ್ಧರಾಮೋತ್ಸವದ ಜೊತೆಗೆ ಪಕ್ಷದ ಸಂಘಟನೆಗೂ ಒತ್ತು ನೀಡಲಾಗುತ್ತದೆ. ಕಾಂಗ್ರೆಸ್ ಪಕ್ಷದಿಂದಲೇ ಈ ಕಾರ್ಯಕ್ರಮ ಆಯೋಜಿಸಿದ್ದು, ಬೇರೆ ಯಾವ ಪಕ್ಷದವರಿಗೂ ಕರೆ ನೀಡಿಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ರಾಜ್ಯದ ನಾಯಕರಾದ ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಆರ್.ವಿ. ದೇಶಪಾಂಡೆ ಸೇರಿದಂತೆ ಎಲ್ಲಾ ಮುಖಂಡರು, ಕಾಂಗ್ರೆಸ್ ಶಾಸಕರು, ಮಾಜಿ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸಿದ್ಧರಾಮೋತ್ಸವ ಅಮೃತ ಮಹೋತ್ಸವದ ಸವಿನೆನಪಿನಲ್ಲಿ ನಡೆಯುವ ಕಾರ್ಯಕ್ರಮವಾಗಿದೆ.
ಇದಕ್ಕಾಗಿ ರಾಜ್ಯಮಟ್ಟದಲ್ಲಿ ಅಮೃತ ಮಹೋತ್ಸವ ಸಮಿತಿ ರಚಿಸಲಾಗಿದೆ. ಈ ಸಮಿತಿ ರಾಜ್ಯಾಧ್ಯಕ್ಷರಾಗಿ ಕೆ.ಎನ್. ರಾಜಣ್ಣ, ಗೌರವಾಧ್ಯಕ್ಷರಾಗಿ ಆರ್.ವಿ. ದೇಶಪಾಂಡೆ ಅವರನ್ನು ಆಯ್ಕೆ ಮಾಡಲಾಗಿದೆ. ಜಿಲ್ಲೆಯಲ್ಲಿ ತಮ್ಮನ್ನು ಸಂಚಾಲಕರನ್ನಾಗಿ ನೇಮಿಸಲಾಗಿದೆ. ಕಾರ್ಯಕ್ರಮದ ಯಶಸ್ಸಿಗೆ ಈಗಾಗಲೇ ಹಲವು ಸಭೆಗಳನ್ನು ನಡೆಸಲಾಗಿದೆ. ಜಿಲ್ಲೆಯಿಂದ ಸುಮಾರು 30 ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಈ ಕಾರ್ಯಕ್ರಮದಿಂದ ಬಿಜೆಪಿಯವರು ತಲ್ಲಣಗೊಂಡಿದ್ದಾರೆ. ಕೆ.ಎಸ್. ಈಶ್ವರಪ್ಪ ಸೇರಿದಂತೆ ಬಿಜೆಪಿಯ ಕೆಲ ನಾಯಕರು ಕಾರ್ಯಕ್ರಮದ ನಂತರ ಕಾಂಗ್ರೆಸ್ ಪಕ್ಷ ಇಬ್ಭಾಗವಾಗುತ್ತದೆ ಎಂದು ಬೊಗಳೆ ಬಿಡುತ್ತಿದ್ದಾರೆ. ಇದು ಇಬ್ಭಾಗವಾಗುವ ಕಾರ್ಯಕ್ರಮವಲ್ಲ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ವಿಜೃಂಭಿಸುವ ಕಾರ್ಯಕ್ರಮವಾಗುತ್ತದೆ. ಅದೇ ಕಾಲಕ್ಕೆ ಬಿಜೆಪಿಯ ಪತನಕ್ಕೆ ನಾಂದಿಯೂ ಆಗುತ್ತದೆ ಎಂದ ಅವರು, ರಾಜ್ಯದ ವಿವಿಧ ಕಡೆಗಳಿಂದ ಸುಮಾರು 5 ಲಕ್ಷಕ್ಕೂ ಹೆಚ್ಚು ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಹರಿಹಾಯ್ದ ಅವರು, ಎರಡೂ ಸರ್ಕಾರಗಳು ಆಡಳಿತ ನೀಡಲು ವಿಫಲವಾಗಿವೆ. ಆಡಳಿತ ಮತ್ತು ಆರ್ಥಿಕ ವ್ಯವಸ್ಥೆ ಕುಸಿದಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬೇಡದ ವಿಷಯಗಳೇ ತುಂಬಿಕೊಂಡಿವೆ. ಜಿಲ್ಲೆಯಲ್ಲಂತೂ ಆಡಳಿತ ಹೈರಾಣಗೊಂಡಿದೆ. ಇಂದಿರಾ ಕ್ಯಾಂಟೀನ್ ವ್ಯವಸ್ಥೆ ಹದಗೆಟ್ಟಿದೆ. ಅಲ್ಲಿಯೂ ಶೇ. 40 ರ ಲಂಚದ ಹಾವಳಿ ಹೆಚ್ಚಿದೆ. ಬಿಜೆಪಿ ಸರ್ಕಾರವನ್ನು ಉರುಳಿಸುವುದೇ ಕಾಂಗ್ರೆಸ್ ಪಕ್ಷದ ಮುಂದಿನ ಗುರಿಯಾಗಿದೆ ಎಂದರು.
ಕಾಂಗ್ರೆಸ್ ಬಡವರ ಪಕ್ಷವಾಗಿದೆ. ಸಿದ್ಧರಾಮಯ್ಯ ಅವರು ಬಡವರಿಗಾಗಿಯೇ ಹಲವು ಯೋಜನೆಗಳನ್ನು ತಂದಿದ್ದಾರೆ. ಐದು ವರ್ಷ ತುಂಬು ಆಡಳಿತವನ್ನು ನಡೆಸಿದವರು ಅವರು. ಕಾರ್ಯಕ್ರಮದಲ್ಲಿ ಅವರ ವಿಷಯಗಳನ್ನೊಳಗೊಂಡ ಕಿರುಹೊತ್ತಿಗೆಯನ್ನು ರಾಜ್ಯಸಭೆ ವಿಪಕ್ಷನಾಯಕ ಮಲ್ಲಿಕಾರ್ಜುನ ಖರ್ಗೆ ಬಿಡುಗಡೆ ಮಾಡಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಚಂದ್ರಭೂಪಾಲ್, ಯಮುನಾ ರಂಗೇಗೌಡ, ರೇಖಾ ರಂಗನಾಥ್, ಮೆಹಖ್ ಷರೀಫ್, ಮಂಜುಳಾ ಶಿವಣ್ಣ, ಶಂಕರಘಟ್ಟ ರಮೇಶ್, ಎಸ್.ಪಿ. ಶೇಷಾದ್ರಿ, ಯೋಗೀಶ್, ಚಂದನ್, ರಂಗೇಗೌಡ, ಚಂದ್ರಶೇಖರ್ ಮೊದಲಾದವರಿದ್ದರು.