ನಾನು ಕಿವಿ. ನಾವಿಬ್ಬರಿದ್ದೇವೆ. ನಾವು ಅವಳಿಜವಳಿ! ಆದರೆ ನಮ್ಮ ದುರದೃಷ್ಟವೆಂದರೆ ಈ ತನಕ ನಾವು ಪರಸ್ಪರ ನೋಡಲಿಲ್ಲ!

ಅದೇನು ಶಾಪವೋ ಗೊತ್ತಿಲ್ಲ, ನಮ್ಮಿಬ್ಬರನ್ನೂ ಪರಸ್ಪರ ವಿರುದ್ಧ ದಿಕ್ಕಿಗೆ ಮುಖ ಮಾಡಿ ತಲೆಗೆ ಅಂಟಿಸಿದ್ದಾನೆ ಅ ಸೃಷ್ಟಿಕರ್ತ!

ನಮ್ಮ ದುಃಖ ಇಷ್ಟೇ ಆದರೆ ತೊಂದರೆ ಇರಲಿಲ್ಲ. ನಮ್ಮ ಕರ್ತವ್ಯ ಬರೇ ಕೇಳುವುದು ಮಾತ್ರ. ಹೊಗಳಿಕೆಯೋ, ತೆಗಳಿಕೆಯೋ; ಒಳ್ಳೆಯದೋ, ಕೆಟ್ಟದ್ದೋ; ಕೇಳುವುದಷ್ಟೇ ನಮ್ಮ ಕೆಲಸ. ಏನು ಕೇಳಿದರೂ ಸುಮ್ಮನಿರಬೇಕು, ಮಾತನಾಡುವ ಅಧಿಕಾರವಿಲ್ಲ. ಇಷ್ಟು ಮಾತ್ರವಲ್ಲ, ಕ್ರಮೇಣ ನಮ್ಮನ್ನು ಗೂಟವೆಂದು ಕೂಡ ತಿಳಿಯಲಾಯಿತು. ಕಣ್ಣಿನ ತಪ್ಪಿಗೆ ನಮಗೆ ಶಿಕ್ಷೆ! ಕನ್ನಡಕದ ಭಾರವನ್ನು ನಾವು ಮತ್ತು ಮೂಗು ಹೊರಬೇಕು! ಕನ್ನಡಕದ ಕಡ್ಡಿಯನ್ನು ನಮ್ಮ ಮೇಲೆ ಹೊರಿಸುತ್ತಾರೆ! ನಾವು ಏನೂ ಹೇಳುವುದಿಲ್ಲ, ಬರೀ ಕೇಳುತ್ತೇವೆ ಅಂತ ಸದರದಿಂದ ಈ ರೀತಿಯ ಹೊರೆ ಹೊರಿಸುವುದೇ?

ಯಾರೇ ತಪ್ಪು ಮಾಡಿದರೂ ಶಿಕ್ಷೆ ನಮಗೆ! ಚಿಕ್ಕ ವಯಸ್ಸಿನಲ್ಲಿ ಶರೀರದ ಯಾವುದೇ ಅಂಗ(ಮುಖ್ಯವಾಗಿ ಬಾಯಿ!) ತಪ್ಪು ಮಾಡಿದರೂ ನಮ್ಮನ್ನು ಹಿಡಿದು ತಿರುಚಿ ಬಿಡುತ್ತಿದ್ದರು. ವಿಶೇಷವಾಗಿ ಶಾಲೆಯಲ್ಲಿ ಶಿಕ್ಷಕರು. ಅವರ ಕೈ ಬರುತ್ತಿದ್ದುದೇ ನಮ್ಮ ಕಡೆಗೆ!

ಯೌವನದಲ್ಲಿ ವಿಶೇಷವಾಗಿ ಹೆಂಗಸರು ಕಿವಿಗೆ ಬಗೆಬಗೆಯ ಆಭರಣಗಳನ್ನು ಹಾಕಿಕೊಂಡು ಮೆರೆದರೆ ಹೊಗಳಿಕೆ ಮುಖಕ್ಕೆ, ನಮಗೆ ಕೇವಲ ಚುಚ್ಚಿಸಿಕೊಂಡ ನೋವು ಮಾತ್ರ!

ಮತ್ತೆ ಶೃಂಗಾರಗಳ ಬಗ್ಗೆ ನೋಡಿ! ಕಣ್ಣಿಗೆ ಕಾಡಿಗೆ, ಮುಖಕ್ಕೆ ಪೌಡರು, ಕ್ರೀಮು, ಇನ್ನೂ ಅದೇನೇನೋ, ತುಟಿಗಳಿಗೆ ಬಣ್ಣಬಣ್ಣದ ಲಿಪ್ ಸ್ಟಿಕ್! ನಮಗೆ? ಏನೂ ಇಲ್ಲ! ನಾವು ಈ ತನಕ ನಮಗಾಗಿ ಏನಾದರೂ ಕೇಳಿದ್ದಿದ್ದರೆ ಹೇಳಿ! ಮುಖದ ಎಲ್ಲಾ ಭಾಗಗಳನ್ನೂ ಕವಿಗಳು ವರ್ಣಿಸುತ್ತಾರೆ. ಕಣ್ಣಿಗೆ ಕಮಲದಳ, ಮೀನು, ಇತ್ಯಾದಿ, ಮೂಗಿಗೆ ಸಂಪಿಗೆ, ತುಟಿಗೆ ತೊಂಡೆಯ ಹಣ್ಣು, ಇತ್ಯಾದಿ ಅದೇನೇನು ಹೋಲಿಕೆಗಳು! ನನಗೆ? ಕೊನೆಯ ಪಕ್ಷ ಹಲಸಿನ ಹಣ್ಣಿನ ತೊಳೆಯ ಹೋಲಿಕೆಯಾದರೂ ಮಾಡಬಹುದಿತ್ತಲ್ಲಾ? ಅದೆಷ್ಟು ನಿರ್ಲಕ್ಷ್ಯ ನಮ್ಮ ಬಗ್ಗೆ? ಕೆಲವು ಬಾರಿ ಕೂದಲು ಕತ್ತರಿಸುವಾಗ ನಮಗೂ ಕತ್ತರಿಯ ರುಚಿ ತೋರಿಸುವುದೂ ಇದೆ!

ಹೇಳಲು ಎಷ್ಟೋ ಇದೆ. ಯಾರಲ್ಲಿ ಹೇಳಲಿ? ದುಃಖವನ್ನು ಹಂಚಿಕೊಂಡರೆ ಹಗುರವಾಗುತ್ತದಂತೆ. ಕಣ್ಣಿನ ಹತ್ತಿರ ಹೇಳಿದರೆ ಕಣ್ಣೀರು ಸುರಿಸುತ್ತದೆ ಹೊರತು ಬೇರೇನಿಲ್ಲ. ಮೂಗಿನ ಹತ್ತಿರ ಹೇಳಿದರೂ ನೀರು ಸುರಿಸುವುದು ಮಾತ್ರ. ಬಾಯಿಯ ಹತ್ತಿರ ಹೇಳಿದರೆ ಅಯ್ಯೋ ಪಾಪ ಅನ್ನುವುದು ಬಿಟ್ಟರೆ ಮತ್ತೇನೂ ಇಲ್ಲ.

ಇನ್ನೂ ಇದೆ ನನ್ನ ಸಂಕಟ! ಭಟ್ಟರ ಜನಿವಾರ(ಶೌಚ ಮಾಡುವಾಗ), ದರ್ಜಿ, ಬಡಗಿಯ ಪೆನ್ಸಿಲ್, ಗುಟ್ಕಾ ಪ್ಯಾಕೆಟ್, ನಾಣ್ಯ, ಇತ್ಯಾದಿ ಎಲ್ಲಾ ನಾವು ಹೊತ್ತುಕೊಳ್ಳಬೇಕು!

ಇತ್ತೀಚೆಗೆ ಇನ್ನೊಂದು ರಗಳೆ!

ಕೊರೋನಾದಿಂದಾಗಿ ಮಾಸ್ಕನ್ನು ಕೂಡಾ ನಮಗೆ ಸಿಕ್ಕಿಸಿಬಿಡುತ್ತಾರೆ! ಅದು ಎಳೆದು ಎಳೆದು ನೋವು ಆಗುತ್ತದೆ! ಹೇಳಲು ನಮಗೆ ನಾಲಿಗೆಯೇ ಇಲ್ಲ! ಇನ್ನೂ ಏನಾದರೂ ಇದ್ದರೆ ಹೇಳಿ, ತಂದು ತೂಗುಹಾಕಿ! ನಾವಿದ್ದೇವಲ್ಲ, ಮೂಕಪ್ರಾಣಿಗಳು!

ಸಂಗ್ರಹ :

ಶ್ರೀ ಆದಿತ್ಯಾನಂದ ಸ್ವಾಮೀಜಿ
ಚಿನ್ಮಯ ಮಿಷನ್,
ಮಂಡ್ಯಾ

By admin

ನಿಮ್ಮದೊಂದು ಉತ್ತರ

You missed

error: Content is protected !!