ಶಿವಮೊಗ್ಗ:
ಸೊರಬದ ದಂತ ವೈದ್ಯ ಡಾ.ಎಚ್.ಇ.ಜ್ಞಾನೇಶ್ ಅವರ .ಜ್ಞಾನೇಶ್ ಶಾಸಕ ಕುಮಾರ್ ಬಂಗಾರಪ್ಪ ದೌರ್ಜನ್ಯ ಎಸಗಿರುವುದಕ್ಕೆ ಕೆಪಿಸಿಸಿ ವೈದ್ಯರ ಘಟಕದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಡಾ.ಪ್ರದೀಪ್ ಡಿಮೆಲ್ಲೊ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಸೊರಬ ತಾಲ್ಲೂಕಿನ ಶಿರಾಳಕೊಪ್ಪ ರಸ್ತೆಯ ಕ್ಲೀನಿಕ್ ನಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಕುಮಾರ್ ಬಂಗಾರಪ್ಪ ಅವರು ಡಾ.ಎಚ್.ಇ.ಜ್ಞಾನೇಶ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮಾತಿನ ಮಧ್ಯೆ ವೈದ್ಯರಿಗೆ ‘ನೀನೇನು ಪುಗ್ಸಟ್ಟೆ ಕೆಲಸ ಮಾಡುತ್ತೀಯ, ದುಡ್ಡು ತೆಗೆದುಕೊಳ್ಳುವುದಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ. ಹಾಗಾದರೇ ಶಾಸಕರೇನು ಪುಗ್ಸಟ್ಟೆ ಕೆಲಸ ಮಾಡುತ್ತಿದ್ದಾರಾ, ಸರ್ಕಾರದಿಂದ ವೇತನ ಪಡೆಯುತ್ತಿಲ್ಲವೇ ಎಂದು ಪ್ರದೀಪ್ ಪ್ರಶ್ನಿಸಿದ್ದಾರೆ.
ಡಾ.ಎಚ್.ಇ.ಜ್ಞಾನೇಶ್ ಒಬ್ಬ ದಂತ ವೈದ್ಯರು ಮಾತ್ರವಲ್ಲದೇ ಪ್ರಗತಿಪರ ಕೃಷಿಕರೂ ಆಗಿದ್ದಾರೆ., ಹಲವು ಸಮಾಜಮುಖಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಇಂತಹ ವ್ಯಕ್ತಿಯ ಮೇಲೆ ಕ್ಲುಲ್ಲಕ ಕಾರಣವನ್ನಿಟ್ಟುಕೊಂಡು ಶಾಸಕರು ದರ್ಪ ತೋರಿಸಿರುವುದು ಸರಿಯಲ್ಲ ಎಂದಿದ್ದಾರೆ.
ವೈದ್ಯರ ಮೇಲೆ ಇಷ್ಟೊಂದು ದರ್ಪ ತೋರಿಸುವ ಶಾಸಕರು ಸಾಮಾನ್ಯ ಜನರನ್ನು ಬಿಡುತ್ತಾರೆಯೇ?. ಇಂತಹ ಧೋರಣೆ ಶಾಸಕರು ಕೈ ಬಿಡಬೇಕು. ಇಲ್ಲವಾದಲ್ಲಿ ಶಾಸಕರ ವಿರುದ್ಧ ರಾಜ್ಯದಾದ್ಯಂತ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಶಾಸಕರ ಈ ವರ್ತನೆಯಿಂದ ಕೇವಲ ಜ್ಞಾನೇಶ್ ಅವರಿಗೆ ಮಾತ್ರವೇ ನೋವಾಗದೇ ರಾಜ್ಯದ ವೈದ್ಯ ಸಮೂಹಕ್ಕೆ ನೋವುಂಟಾಗಿದೆ. ಹಾಗಾಗಿ ಶಾಸಕರು ಕೂಡಲೇ ವೈದ್ಯರ ಕ್ಷಮೆಯಾಚಿಸಬೇಕು. ಮುಖ್ಯಮಂತ್ರಿಗಳು ಇಂತಹ ದರ್ಪದ ಶಾಸಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.