ಶಿವಮೊಗ್ಗ,
ಸ್ವಾತಂತ್ರ್ಯದ ನಂತರ ಭಾರತವನ್ನು ಆರ್ಥಿಕ ಅಭಿವೃದ್ಧಿಗೆ ಕೊಂಡೊಯ್ದ ಕೀರ್ತಿ ಮಾಜಿ ಪ್ರಧಾನಿ ನೆಹರೂ ಅವರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ತಿಳಿಸಿದರು.
ಅವರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಭಾರತದ ಪ್ರಥಮ ಪ್ರಧಾನಿ ನೆಹರೂ ಅವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ನೆಹರೂ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡುತ್ತಿದ್ದರು.
ನೆಹರೂ ಅವರು ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನಿಯಾಗಿದ್ದರು. ಕೈಗಾರಿಕೆಗೆ ಹೆಚ್ಚು ಒತ್ತು ನೀಡಿದ್ದರು. ತುಳಿತಕ್ಕೊಳಗಾದವರಿಗೆ ರಕ್ಷಣೆ ನೀಡಿದ ಮೊದಲ ಪ್ರಧಾನಿಯವರು. ಹಸಿರು ಕ್ರಾಂತಿಯ ಮೂಲಕ ಆರ್ಥಿಕ ಸುಭದ್ರತೆಯನ್ನ ತಂದುಕೊಟ್ಟವರು. ಇವರ ಆಡಳಿತ ಮಾದರಿಯಾದುದು ಎಂದರು.
ಆದರೆ, ಇಂದು ಬಿಜೆಪಿ ಸರ್ಕಾರ ದಲಿತರನ್ನು ಶೋಷಿತರನ್ನು ಕಡೆಗಾಣಿಸುತ್ತಿದೆ. ನೆಹರೂ ರವರು ಸ್ಥಾಪಿಸಿದ ಕೈಗಾರಿಕೆಗಳು ಇಂದು ಮುಚ್ಚಿಹೋಗುತ್ತಿವೆ. ಬಂಡವಾಳಶಾಹಿಗಳಿಗೆ ಮಣೆ ಹಾಕಲಾಗುತ್ತಿದೆ. ಈಗ ಆಡಳಿತ ನಡೆಸುತ್ತಿರುವ ಪಕ್ಷದ ಮೂಲ ವ್ಯಕ್ತಿಗಳು ಬ್ರಿಟಿಷರ ಚಮಚಾಗಳಾಗಿದ್ದರು. ಇಂದು ನಕಲಿ ರಾಷ್ಟ್ರಭಕ್ತರಾಗಿದ್ದಾರೆ. ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ನೆಹರು ಅಂತಹವರ ಆಡಳಿ ತವನ್ನೇ ಟೀಕಿಸುತ್ತಿದ್ದಾರೆ. ಆದರೆ ಅವರು ನೆನಪಿಟ್ಟುಕೊಳ್ಳಬೇಕು. ಸ್ವಾತಂತ್ರ್ಯ ಬಂದಾಗ ದೇಶ ಅತ್ಯಂತ ಸಮಸ್ಯೆಗಳನ್ನು ಎದುರಿಸುತ್ತಿತ್ತು. ಬಡತನವಿತ್ತು. ತಮ್ಮ ೧೭ ವರ್ಷಗಳ ಆಡಳಿತಾವಧಿಯಲ್ಲಿ ನೆಹರೂ ಅವರು ಭಾರತವನ್ನು ಬಲಾಢ್ಯ ರಾಷ್ಟ್ರವನ್ನಾಗಿ ಮಾಡಿದ್ದಾರೆ. ಅವರ ಆದರ್ಶಗಳನ್ನು ಪಾಲಿಸಬೇಕು ಎಂದರು.
ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ವೈ.ಹೆಚ್. ನಾಗರಾಜ್ ಮಾತನಾಡಿ, ರಾಷ್ಟ್ರ ಮುಂದು ವರೆಯಬೇಕಾದರೆ ಕೈಗಾರಿಕೆಗಳಿಗೆ ಹೆಚ್ಚಿನ ಒತ್ತು ನೀಡಬೇಕೆಂದು ನೆಹರೂ ಅವರ ಪ್ರತಿಪಾದನೆಯಾಗಿತ್ತು. ಹಾಗಾಗಿಯೇ ಬಹುದೊಡ್ಡ ನೀರಾವರಿ ಯೋಜನೆಗಳನ್ನ ರೂಪಿಸಿದರು. ಆ ಮೂಲಕ ಹಸಿರು ಕ್ರಾಂತಿಗೆ ಒತ್ತು ನೀಡಿದರು. ಕೈಗಾರಿಕೆಗಳ ಮೂಲಕ ಉದ್ಯೋಗ ಸೃಷ್ಟಿ ಮಾಡಿದರು. ಬಡತನ ನಿರ್ಮೂಲನೆ ಹಾಗೂ ನಿರುದ್ಯೋಗ ಸಮಸ್ಯೆಗೆ ಒತ್ತು ಕೊಟ್ಟರು. ಜಾತ್ಯತೀತ ಭಾವನೆಯನ್ನು ಎತ್ತಿ ಹಿಡಿದರು. ಕಾಂಗ್ರೆಸ್ ಎಂದರೆ ಬಡವರ ಪಕ್ಷ ಎಂದು ನಿರೂಪಿಸಿದರು ಎಂದರು.
ಕಾರ್ಯಕ್ರಮದಲ್ಲಿ ಮುಖಂಡರುಗಳಾದ ರಾಮೇಗೌಡ, ಮಹಮ್ಮದ್ ರಸೂಲ್, ಭಾಷಾ, ಎನ್.ಡಿ. ಪ್ರವೀಣ್, ಸ್ಟೆಲ್ಲಾ ಮಾರ್ಟಿನ್, ಸುವರ್ಣ ನಾಗರಾಜ್, ಕವಿತಾ, ಚಂದ್ರಿಕಾ, ನಾಗರತ್ನಮ್ಮ, ಚಂದ್ರಶೇಖರ್, ಮಜ್ಜು ಸೇರಿದಂತೆ ಹಲವರಿದ್ದರು.