ಶಿವಮೊಗ್ಗ,ಮೇ.05:
ಶೌಚಾಲಯ ಹರಾಜು, ಕುಡಿಯುವ ನೀರಿನ ವ್ಯವಸ್ಥೆ ಬಳಕೆ, ತೆಂಗಿನ ಮರ ಹರಾಜು, , ಸುತ್ತ ಸ್ವಚ್ಚತೆ ಹಾಗೂ ಭದ್ರತೆ
ಇಲ್ನಿನ ಜನಬಿಡದ ಸ್ಥಳದಲ್ಲಿದ್ದ ಹಿಂದಿನ ಕಾರಾಗೃಹ (ಜೈಲ್)ದ ಅವರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಒತ್ತಾಸೆ ಹಾಗೂ ಹಿತಕಾಂಕ್ಷೆಯ ಮೇರೆಗೆ ಸುಂದರವಾದ ಸಾರ್ವಜನಿಕ ಸಭೆ ಸಮಾರಂಭಗಳನ್ನು ನಡೆಸುವ ಹಾಗೂ ಜನರ ವ್ಯಾಯಾಮಾ ವಾಕಿಂಗ್, ವಿಶ್ರಾಂತಿ ಹಾಗೂ ರಂಜನೆ ನೀಡುವಂತಹ ಬೆಂಗಳೂರಿನ ಫ್ರೀಡಂ ಪಾರ್ಕ್ ಮಾದರಿಯ ಸುಂದರ ಸ್ಥಳ ನಿರ್ಮಾಣವಾಗಿದ್ದು ಸರಿಯಷ್ಟೆ.
ಇಲ್ಲಿ ಪಾದಾಚಾರಿಗಳ ವಾಕಿಂಗ್ಗೆ ಅನುಕೂಲವಾದಂತಹ ಎಲ್ಲಾ ವ್ಯವಸ್ಥೆಗಳು ಶೌಚಾಲಯ, ಕುಡಿಯುವ ನೀರು, ಆಸನಗಳ ಸಮಗ್ರತೆ ಕಂಡು ಬಂದಿತ್ತು ಆದರೆ ವ್ಯವಸ್ಥಿತವಾದ ನಿರ್ವಹಣೆಯಿಲ್ಲದೇ ಈ ಅಜಾದ್ ಚಂದ್ರಶೇಖರ್ ಫ್ರೀಡಂ ಪಾರ್ಕ್ ಅತ್ಯಂತ ಕಳಪೆಯ ಸ್ಥಳವಾಗಿ ಬದಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ದೂರುಗಳು ಹಾಗೂ ಅದರಲ್ಲೂ ಕೈಗಾರಿಕಾ ನಿಗಮದ ಉಪಾಧ್ಯಕ್ಷ, ಜಿಲ್ಲಾ ಬಿಜೆಪಿ ಮುಖಂಡ ಎಸ್.ದತ್ತಾತ್ರಿ ಅವರ ಮನವಿಯ ಮೇರೆಗೆ ಇಂದು ಬೆಳಗ್ಗೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಮಹಾನಗರ ಪಾಲಿಕೆ,. ಸ್ಮಾರ್ಟ್ಸಿಟಿ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಖುದ್ದು ಭೇಟಿ ನೀಡಿ ಸಮಗ್ರವಾಗಿ ಪರಿಶೀಲಿಸುವ ಮೂಲಕ ನಾನಾ ಮಹತ್ತರ ಸೂಚನೆಗಳನ್ನು ನೀಡಿದ್ದು ವಿಶೇಷ.
ಸುಂದರವಾದ ಕಟ್ಟಡದಲ್ಲಿ ನಿರ್ಮಾಣವಾಗಿರುವ ಶೌಚಾಲಯ ಇಂದು ಗಲೀಜಿನ ಕೊಂಪೆಯಾಗಿರುವುದನ್ನು ಗಮನಿಸಿ ಈ ಕಾರ್ಯವನ್ನು ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ಮಹಾನಗರ ಪಾಲಿಕೆಗೆ ವರ್ಗಾಯಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಅದೇ ಬಗೆಯಲ್ಲಿ ಕುಡಿಯುವ ನೀರಿನ ಬೆಲೆ ಬಾಳುವ ಯಂತ್ರಗಳು ಹಾಳಾಗುತ್ತಿರುವುದನ್ನು ಗಮನಿಸಿ ಇದನ್ನು ನೋಡಿಕೊಳ್ಳುವುದರ ಜೊತೆಗೆ ಶೌಚಾಲಯವನ್ನು ಶುಲ್ಕ ಸಹಿತ ವ್ಯವಸ್ಥೆ ಮಾಡಲು ಟೆಂಡರ್ ಕರೆಯುವಂತೆ ಸೂಚಿಸಿದರು. ಇದಕ್ಕೆ ಸ್ಮಾರ್ಟ್ಸಿಟಿ ಇಂಜಿನಿಯರ್ ಕೃಷ್ಣಪ್ಪ ಹಾಗೂ ಪಾಲಿಕೆಯ ಆಯುಕ್ತ ಮಾಯಣ್ಣಗೌಡ ಅವರು ಸಹ ಸಹಮತಿಸಿದರು.
ಸ್ಮಾರ್ಟ್ಸಿಟಿಯ ಕಾಮಗಾರಿಯ ನಡುವೆ ಸಿಗುವ ಡಬ್ರೀಜನೆಲ್ಲಾ ಈ ಪಾರ್ಕ್ನೊಳಗೆ ಹಾಕಿರುವುದನ್ನು ಜಿಲ್ಲಾಧಿಕಾರಿಗಳು ಆಕ್ಷೇಪಿಸಿದರು. ಇಲ್ಲಿ ನಿತ್ಯ ವಾಕಿಂಗ್ ಮಾಡುವ ಪಾದಾಚಾರಿಗಳ ಆಕ್ಷೇಪಗಳಿಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಇಡೀ ಈ ಹಳೆ ಜೈಲ್ ಆವರಣದಲ್ಲಿ ಸುತ್ತಲೂ ಆರು ಅಡಿ ಅಗಲದ ಮತ್ತೊಂದು ಮಣ್ಣಿನ ವಾಕಿಂಗ್ ಪಾತ್ ನಿರ್ಮಿಸಲು ಸೂಚಿಸಿದರು. ಇದರಲ್ಲಿ ಡಬ್ರೀಜ್ನ ವಸ್ತುಗಳನ್ನು ಬಳಸಿಕೊಳ್ಳಲು ತಿಳಿಸಿದರು.
ತೆಂಗಿನ ಮರಗಳನ್ನು ರಕ್ಷಿಸುವ ಜೊತೆಗೆ ಇಲ್ಲಿ ಎಲ್ಲಾ ಬಗೆಯ ಆರ್ಯುವೇದ ಕಾಡುಜಾತಿಯ ಮರಗಳನ್ನು ಸಾಕುವ ಜೊತಗೆ ಅವುಗಳ ಹೆಸರನ್ನು ಮಕ್ಕಳಿಗೆ ಪರಿಚಯಿಸುವಂತಹ ಸಸ್ಯ ಸಂಕುಲವನ್ನು ನಿರ್ಮಿಸುವಂತೆ ಸಲಹೆ ನೀಡಿದರು. ಇದಕ್ಕೆ ಅಗತ್ಯವಾದ ಹಣದ ವ್ಯವಸ್ಥೆಯನ್ನು ಪಾಲಿಕೆ ಹಾಗೂ ಜಿಲ್ಲಾಡಳಿತ ನೋಡಿಕೊಳ್ಳುತ್ತದೆ ಎಂದರು.
ಎಣ್ಣೆ ಹೊಡೆಯುವವರಿಗೆ ಗ್ಯಾರಂಟಿ ಗ್ರಹಚಾರ..!
ಇಲ್ಲಿನ ಸಭೆ ಸಮಾರಂಭಗಳನ್ನು ನಡೆಸುವ ಸ್ಥಳಗಳಲ್ಲಿ ನಿತ್ಯರಾತ್ರಿ ಮದ್ಯಸೇವಿಸುವ ನಿದರ್ಶನಗಳನ್ನು ಹಾಗೂ ಬಾಟಲಿಗಳ ಸತ್ಯದರ್ಶನ ಕಂಡ ಜಿಲ್ಲಾಧಿಕಾರಿಗಳು ಇಲ್ಲಿ ಇಂತಹ ಚಟುವಟಿಕೆಗಳು ನಡೆಯುವುದನ್ನು ಸಂಪೂರ್ಣವಾಗಿ ನಿಯಂತ್ರಿಸಲು ಅಬಕಾರಿ ಹಾಗೂ ತುರ್ತು ರಕ್ಷಣಾ ಇಲಾಖೆಯ ವ್ಯವಸ್ಥೆಗಳಿಗೆ ಸೂಚಿಸುವುದಾಗಿ ತಿಳಿಸಿದ್ದಾರೆ.
ಫ್ರೀಡಂ ಪಾರ್ಕ್ನ ಮುಂದಿನ ಕಾಂಪೌಂಡ್ ಸಂಪೂರ್ಣಗೊಳಿಸುವ ಜೊತೆಗೆ ಅಗತ್ಯವಿರುವೆಡೆ ಗೇಟನ್ನು ಹಾಕುವಂತೆ ಇಡೀ ವ್ಯವಸ್ಥೆಯನ್ನು ನೋಡಿಕೊಳ್ಳುವಂತಹ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸಾರ್ವಜನಿಕರ ಒತ್ತಾಸೆಗೆ ಪೂರಕವಾಗಿ ಸೂಚಿಸಿದರು.
ಇಲ್ಲಿರುವ ತೆಂಗಿನ ಮರ, ಹುಣಸೆ ಮರ ಸೇರಿದಂತೆ ಉತ್ಪನ ಕೊಡುವ ಮರಗಳನ್ನು ಕೂಡಲೇ ಹರಾಜು ಕರೆದು ನೀಡುವಂತೆ ಸೂಚಿಸಿದ ಅವರು ವಾರದೊಳಗೆ ಈ ಎಲ್ಲಾ ಕಾರ್ಯಕ್ರಮಗಳನ್ನು ಮುಗಿಸಲು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್.ದತ್ತಾತ್ರಿ ಹಾಗೂ ಬಿಜೆಪಿಯ ಹಲವು ಪ್ರಮುಖರು ವಿಶೇಷವಾಗಿ ನಿತ್ಯ ವಾಕಿಂಗ್ ಮಾಡುವ, ಸ್ವಚ್ಛತೆ ಮಾಡುವ ಹಿರಿಯ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.