ಶಿವಮೊಗ್ಗ,ಮೇ.03:
ಶಿವಮೊಗ್ಗಕ್ಕೆ ಕ್ಯಾನ್ಸರ್ ಆಸ್ಪತ್ರೆ ಮಂಜೂರಾಗಿದ್ದು, ಸದ್ಯದಲ್ಲೇ ಶಿಲಾನ್ಯಾಸ ಆಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಹೇಳಿದರು.
ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮುಂಭಾಗದ ಆವರಣದಲ್ಲಿ ಇಂದು ಏರ್ಪಡಿಸಲಾಗಿದ್ದ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್ ಸಮಯದಲ್ಲಿ ಎಲ್ಲ ಮೆಡಿಕಲ್ ಕಾಲೇಜುಗಳಲ್ಲಿ ನರ್ಸಿಂಗ್ ಕಾಲೇಜು ತೆರೆಯಬೇಕೆಂಬ ನೂತನ ನೀತಿ ರೂಪಿಸಲಾದನ್ವಯ ಶಿವಮೊಗ್ಗದಲ್ಲಿ ಇಂದು ಕಾಲೇಜು ಉದ್ಘಾಟನೆಗೊಂಡು 100 ನರ್ಸಿಂಗ್ ವಿದ್ಯಾರ್ಥಿಗಳ ದಾಖಲಾತಿಗೆ ಕೇಂದ್ರದಿಂದ ಅನುಮೋದನೆ ದೊರೆತಿದೆ.


ಅನೇಕ ಸಮಸ್ಯೆಗಳಿಗೆ ಉಪಯುಕ್ತವಾದ 128 ಸ್ಲೈಸ್ ಸಿಟಿ ಯಂತ್ರ ಉದ್ಘಾಟನೆಗೊಂಡಿದೆ. ಕೋವಿಡ್ 2 ನೇ ಅಲೆಯಲ್ಲಿ ಆಮ್ಲಜನಕ ಕೊರತೆ ಅತೀವವಾಗಿ ಕಾಡಿದ್ದು, ಅಂತಹ ಸಂದರ್ಭದಲ್ಲಿ ನಿಕಟಪೂರ್ವ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಎಲ್ಲ ಮೆಡಿಕಲ್ ಕಾಲೇಜುಗಳಲ್ಲಿ ಆಮ್ಲಜನಕ ಸ್ಟೋರೇಜ್ ಟ್ಯಾಂಕ್ಸ್‍ನ್ನು ದ್ವಿಗುಣಗೊಳಿಸಲಾಗಿದ್ದು, ರಾಜ್ಯದಲ್ಲಿ 30 ಸಾವಿರಕ್ಕೂ ಹೆಚ್ಚು ಹಾಸಿಗೆಗಳಿಗೆ ಆಕ್ಸಿಜನ್ ಅಳವಡಿಕೆ ಆಗಿರುವುದು ಒಂದು ದಾಖಲೆ ಆಗಿದೆ. ಲಿಕ್ವಿಡ್ ಆಕ್ಸಿಜನ್ ಫಿಲ್ಲಿಂಗ್ ಸ್ಟೇಷನ್ ಶಿವಮೊಗ್ಗದ ವಿಶೇಷ. ಶಿವಮೊಗ್ಗದ ಸಂಸ್ಥೆಗೆ 130 ಐಸಿಯು ಬೆಡ್, 108 ಹೆಚ್‍ಡಿಡಿ ಮತ್ತು 120 ವೆಂಟಿಲೇಟರ್ ನೀಡಲಾಗಿದೆ. ಎನ್‍ಐಸಿಯು ಘಟಕ, ಸ್ಕಿಲ್ ಲ್ಯಾಲ್ ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳ ಅಭಿವೃದ್ದಿಯಾಗುತ್ತಿದ್ದು ಈ ಎಲ್ಲ ಕಾರ್ಯಕ್ರಮಗಳ ಹಿಂದೆ ಬದ್ದತೆಯುಳ್ಳ ನಾಯಕರಿದ್ದಾರೆಂದರು.
50 ಕೋಟಿ ಜನರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಮೂಲಕ ಉಚಿತವಾಗಿ ಆರೋಗ್ಯ ವಿಮೆ ನೀಡಿದ ಏಕೈಕ ದೇಶ ನಮ್ಮದು. ಪ್ರಾಥಮಿಕ ಮತ್ತು ದ್ವಿತೀಯ ಹಂತದ ಚಿಕಿತ್ಸೆಗಳು ಇತರೆ ಆಸ್ಪತ್ರೆಗಳಲ್ಲಿ ದೊರೆತರೆ ತೃತೀಯ ಹಂತದ ಚಿಕಿತ್ಸೆ ವೈದ್ಯಕೀಯ ಕಾಲೇಜುಗಳಿರುವೆಡೆ ಲಭಿಸುತ್ತದೆ. ಗುಣಮಟ್ಟದ ಸೇವೆ ನೀಡದಿದ್ದಲ್ಲಿ ಜನರು ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ. ಹಾಗಾಗದಂತೆ ನೋಡಿಕೊಳ್ಳಬೇಕು ಎಂದರು.

ಸರ್ಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜಿನ ಆಸ್ಪತ್ರೆಗಳು ಸಂಜೀವಿನಿ ಆಗಿ ಸೇವೆ ಸಲ್ಲಿಸಬೇಕು. ಉತ್ಕøಷ್ಟ ಚಿಕಿತ್ಸೆ ಸರ್ಕಾರದ ಕಾಯಕಲ್ಪವಾಗಿದ್ದು, ಜನರು ಉಪಕಾರ ಸ್ಮರಣೆ ಮಾಡುವ ರೀತಿಯಲ್ಲಿ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳು ಕೆಲಸ ಮಾಡಬೇಕು.                          -ಡಾ.ಕೆ.ಸುಧಾಕರ್,  ವೈದ್ಯಕೀಯ ಶಿಕ್ಷಣ ಸಚಿವ

ಗೃಹ ಸಚಿವರಾದ ಆರಗ ಜ್ಞಾನೇಂದ್ರ ಮಾತನಾಡಿ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಬಡವರ ಆರೋಗ್ಯ ರಕ್ಷಣೆಯ ಕನಸು ನನಸಾಗಬೇಕು. ಮೆಡಿಕಲ್ ಕಾಲೇಜು ಮತ್ತಷ್ಟು ಬೆಳೆಯಬೇಕು. ಪ್ರಸ್ತುತ ನೀಡಿರುವ ಸೌಲಭ್ಯಗಳ ಉಪಯೋಗದ ಆತ್ಮಾವಲೋಕನ ಮಾಡಿಕೊಳ್ಳಬೇಕು. 133 ವೈದ್ಯಾಧಿಕಾರಿಗಳಿರುವ ಕಾಲೇಜಿನಲ್ಲಿ ಯಾರೂ ಚಿಕಿತ್ಸೆಯಿಂದ ಹೊರಗುಳಿಯಂತೆ, ಜನರಿಗೆ ಹೆಚ್ಚು ಓಡಾಡಿಸದೆ ಸೇವೆ ನೀಡಬೇಕು. ಹೆಚ್ಚಿನ ಚಿಕಿತ್ಸೆಗೆ ಜನರು ಮಣಿಪಾಲಕ್ಕೆ ತೆರಳುತ್ತಿರುವುದು ಇಲ್ಲಿ ಹೆಚ್ಚಿನ ಸೌಲಭ್ಯವಿಲ್ಲವೆಂಬುದನ್ನು ತೋರುತ್ತದೆ. ಆದ್ದರಿಂದ ವೈದ್ಯಾಧಿಕಾರಿಗಳಿಂದ ಹಿಡಿದು ಸಿಬ್ಬಂದಿವರೆಗೆ ಕರ್ತವ್ಯ ಪರತೆಯಿಂದ ಕೆಲಸ ಮಾಡಿದರೆ ನಿಮ್ಮ ಗೌರವ ಸಹ ಹೆಚ್ಚುತ್ತದೆ.


ಸಂಸದರಾದ ಬಿ.ವೈ.ರಾಘವೇಂದ್ರ ಮಾತನಾಡಿ, ಮೆಗ್ಗಾನ್ ಆಸ್ಪತ್ರೆಯಲ್ಲಿ ನರ್ಸಿಂಗ್ ಕಾಲೇಜು ಉದ್ಘಾಟನೆ ಯೊಂದಿಗೆ ರೂ.38.676 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ರೂ.29.62 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮ ಇಂದು ನೆರವೇರಿದೆ. ಕ್ಯಾನ್ಸರ್ ಆಸ್ಪತ್ರೆ ಮಂಜೂರಾಗಿದ್ದು, ಮೆಗ್ಗಾನ್ ಆವರಣದಲ್ಲಿ ಮುಂಭಾಗದಲ್ಲಿ ನಿರ್ಮಿಸುವುದಕ್ಕೆ ಯೋಜನೆ ತಯಾರಿಸಲಾಗುತ್ತಿದೆ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮೇಲ್ಮಹಡಿಯಲ್ಲಿ ಸಹ ್ಲ ಕಾರ್ಯ ನಿರ್ವಹಿಸಿದಲ್ಲಿ ಸರ್ಕಾರಕ್ಕೆ ಹಣ ಸಹ ಉಳಿತಾಯವಾಗುತ್ತದೆ. ಕಿದ್ವಾಯಿಯಿಂದಲೇ ಕ್ಯಾನ್ಸರ್ ತಜ್ಞವೈದ್ಯರಿಂದ ಚಿಕಿತ್ಸೆ ವ್ಯವಸ್ಥೆ ಮಾಡಿದಲ್ಲಿ ಕ್ಯಾನ್ಸರ್ ಆಸ್ಪತ್ರೆ ಶೀಘ್ರವಾಗಿ ಉದ್ಘಾಟಿಸಲು ಅನುಕೂಲವಾಗುತ್ತದೆ. ಆಯುರ್ವೇದಿಕ್ ಆಸ್ಪತ್ರೆಯನ್ನೂ ಬೇಗ ಶುರು ಮಾಡಲು ಆರೋಗ್ಯ ಸಚಿವರ ಸಹಕಾರ ಬೇಕು. ನಗರಾಭಿವೃದ್ದಿ ಸಚಿವರು ಸಹ ಆಸ್ಪತ್ರೆ ಆವರಣದಲ್ಲಿ ಮೂಲಭೂತ ಸೌಕರ್ಯಕ್ಕಗಿ ರೂ.10 ಕೋಟಿ ನೀಡಿದ್ದು ಎಲ್ಲರೂ ಜಿಲ್ಲೆಯ ಅಭಿವೃದ್ದಿಗೆ ಸಹಕರಿಸುತ್ತಿದ್ದಾರೆಂದರು.
ಶಾಸಕರು ಹಾಗೂ ನಿಕಟಪೂರ್ವ ಮುಖ್ಯ ಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಶಿವಮೊಗ್ಗ ನಮ್ಮ ನಿರೀಕ್ಷೆ ಮೀರಿ ಒಳ್ಳೆಯ ರೀತಿಯಲ್ಲಿ ಬೆಳೆಯುತ್ತಿದೆ. ಇನ್ನು ಆರೇಳು ತಿಂಗಳಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಮುಗಿಯಲಿದ್ದು, ನಮ್ಮ ಪ್ರಧಾನಿ ಮೋದಿಯವರನ್ನು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವಿಮಾನದಲ್ಲೇ ಕರೆತಂದು ಉದ್ಘಾಟನೆ ಮಾಡಿಸುವ ಅಪೇಕ್ಷೆ ಇದೆ.
ನಾನು ಉಪಮುಖ್ಯಮಂತ್ರಿ ಯಾಗಿದ್ದ ವೇಳೆಯಲ್ಲಿ ಮಂಜೂರಾದ ಶಿವಮೊಗ್ಗ ಮೆಡಿಕಲ್ ಕಾಲೇಜು ಇಂದು ರಾಜ್ಯದಲ್ಲೇ ಟಾಪ್ ಕಾಲೇಜಾಗಿದೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಉತ್ತಮ ಸೇವೆ ನೀಡಿದೆ. ಹಿಂದೆ ಹೆಚ್ಚಿನ ಚಿಕಿತ್ಸೆಗಾಗಿ ಜನರು ಮಣಿಪಾಲಕ್ಕೆ ಹೆಚ್ಚು ಹೋಗುತ್ತಿದ್ದರು. ಆದರೆ ಈಗ ಅದು ಶೇ.90 ಕಡಿಮೆ ಆಗಿದೆ. ಆ ರೀತಿಯ ವ್ಯವಸ್ಥೆಗಳು, ಸೌಲಭ್ಯ ಶಿವಮೊಗ್ಗದಲ್ಲೇ ದೊರಕುತ್ತಿದೆ. ಯಾವುದೇ ರೋಗಿಗೆ ಅಗತ್ಯವಾದ ಎಲ್ಲ ರೀತಿಯ ಚಿಕಿತ್ಸೆ ನೀಡುವ ಪ್ರಾಮಣಿಕ ಪ್ರಯತ್ನವನ್ನು ವೈದ್ಯರು ಸೇರಿದಂತೆ ಎಲ್ಲ ಸಿಬ್ಬಂದಿ ಮಾಡಬೇಕೆಂದು ಮನವಿ ಮಾಡಿದರು.
ನಗರಾಭಿವೃದ್ದಿ ಸಚಿವರಾದ ಬೈರತಿ ಬಸವರಾಜ ಮಾತನಾಡಿ, ನಮ್ಮ ಸರ್ಕಾರ ಅಭಿವೃದ್ದಿ ಮತ್ತು ಜನಪರ ಕೆಲಸಗಳನ್ನು ಮಾಡುತ್ತಿದ್ದು ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಕಾಲೇಜಿಗೆ ಅಗತ್ಯವಾದ ಯುಜಿಡಿ ಸೇರಿದಂತೆ ಇತರೆ ಕೆಲಸಗಳನ್ನು ತ್ವರಿತಗತಿಯಲ್ಲಿ ಮಾಡಲಾಗುವುದು ಎಂಬ ಭರವಸೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲಿಕೆ ಮಹಾಪೌರರಾದ ಸುನೀತ ಅಣ್ಣಪ್ಪ, ಜ್ಯೋತಿ ಪ್ರಕಾಶ್ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಜಿ.ಪಂ ಸಿಇಓ ಎಂ.ಎಲ್.ವೈಶಾಲಿ, ಸಿಮ್ಸ್ ನಿರ್ದೇಶಕ ಡಾ.ಸಿದ್ದಪ್ಪ, ಡಾ.ಶ್ರೀಧರ್, ಡಾ.ರಾಜೇಶ್ ಸುರಗಿಹಳ್ಳಿ, ಡಾ.ಸಿದ್ದನಗೌಡ ಪಾಟಿಲ್, ಸಿಮ್ಸ್ ಆಡಳಿತ ಮಂಡಳಿ ಸದಸ್ಯರಾದ ಡಾ.ವಾಣಿ ಕೋರಿ, ಡಾ.ಗೌತಮ್, ದಿವಾಕರ್ ಶೆಟ್ಟಿ, ಇತರರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!