ಕಂಟ್ರಿ ಕ್ಲಬ್ ಶಿವಮೊಗ್ಗದ ಅತ್ಯಂತ ಪ್ರತಿಷ್ಠಿತ ಕ್ಲಬ್‌ಗಳಲ್ಲೊಂದು. ಈ ಕ್ಲಬ್‌ಗೆ ಸತತ ೧೪ ವರ್ಷಗಳಿಂದ ಅಧ್ಯಕ್ಷರಾಗಿರುವ ಶಾಸಕ ಡಿ.ಎಸ್.ಅರುಣ್ ಇದನ್ನೊಂದು ಕೌಟುಂಬಿಕ ವಾತಾವರಣದ ಕ್ಲಬ್ಬನ್ನಾಗಿ ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಈ ಕ್ಲಬ್ ಸುಮಾರು ೬ ಕೋಟಿ ರೂ. ವೆಚ್ಚದಲ್ಲಿ ನೂತನ ಕ್ರೀಡಾ ಸಂಕೀರ್ಣ ಹೊಂದಿದ್ದು, ಕ್ಲಬ್‌ನ ಸದಸ್ಯರು ಹಾಗೂ ನಿಗಧಿತ ಶುಲ್ಕ ಪಾವತಿಸಿ ಸದಸ್ಯೇತರರು ಸಹ ಇದನ್ನು ಬಳಸಿಕೊಳ್ಳಬಹುದಾಗಿದೆ. ಈ ನೂತನ ಕ್ರೀಡಾ ಸಂಕೀರ್ಣದ ಉದ್ಘಾಟನೆ ಮೇ ೧ರಂದು ನಡೆಯಲಿದ್ದು, ತನ್ನಿಮಿತ್ತ ಈ ಲೇಖನ…

ಪಬ್- ಕ್ಲಬ್, ಮಾಲ್- ರೆಸಾರ್ಟ್‌ಗಳ ಬಗ್ಗೆ ಜನಸಾಮಾನ್ಯರಲ್ಲಿ ಇರುವ ಭಾವನೆಯೇ ಬೇರೆ. ಇಲ್ಲೆಲ್ಲಾ ಕೇವಲ ಶ್ರೀಮಂತರು ಮಾತ್ರ ಹೋಗಲು ಸಾಧ್ಯ, ಹಣವಂತರು ಟೈಂ ಪಾಸ್‌ಗಾಗಿ, ಪ್ರತಿಷ್ಠೆಗಾಗಿ, ತೋರ್ಪಡಿಕೆಗಾಗಿ ಇಲ್ಲಿಗೆ ಹೋಗುತ್ತಾರೆ, ಕುಡಿತ-ಕುಣಿತ, ಮೋಜು- ಮಸ್ತಿ ಇಲ್ಲಿ ಸಾಮಾನ್ಯವಾಗಿರುತ್ತದೆ ಎಂಬ ಭಾವನೆ ಬಲವಾಗಿ ಬೇರೂರಿದೆ. ಇದು ವಾಸ್ತವವೂ ಹೌದು.

ಇದರಿಂದಾಗಿ ಕ್ಲಬ್‌ಗಳಿಗೆ ಕುಟುಂಬ ಸಮೇತರಾಗಿ ತೆರಳಿ ಕೌಟುಂಬಿಕ ವಾತಾವಾರಣದಲ್ಲಿ (ಫ್ಯಾಮಿಲಿ ಅಟ್ಮಾಸ್ಪಿಯರ್) ಮನೋರಂಜನಾತ್ಮಕವಾಗಿ ಕಾಲ ಕಳೆಯುವಂತಹ ದೃಶ್ಯಗಳು ಕಾಣುವುದು ಕಷ್ಟ ಸಾಧ್ಯ. ಆದರೆ ಇಂತಹ ವಾತಾವರಣವನ್ನು ನಿರ್ಮಿಸುವ ಮೂಲಕ ಕ್ಲಬ್ ಕಲ್ಚರ್‌ಗೆ ಶಿವಮೊಗ್ಗದ ಕಂಟ್ರಿ ಕ್ಲಬ್ ಹೊಸ ಭಾಷ್ಯ ಬರೆದಿದೆ.

ಪ್ರೇರಕ ಶಕ್ತಿ ಅಧ್ಯಕ್ಷ ಡಿ.ಎಸ್.ಅರುಣ್: ಕ್ರಿಯಾತ್ಮಕ, ಸೃಜನಶೀಲತೆಯ ಮನಸ್ಸು ಒಗ್ಗೂಡಿ ಟೀಂ ವರ್ಕ್ ಮಾಡಿದಲ್ಲಿ ಕ್ಲಬ್‌ಗಳ ಬಗ್ಗೆ ಜನಸಾಮಾನ್ಯರಲ್ಲಿ ಇರುವ ಭಾವನೆಯನ್ನು ಬದಲಾಯಿಸಲು ಸಾಧ್ಯ ಎಂಬುದಕ್ಕೆ ಕಂಟ್ರಿ ಕ್ಲಬ್ ಸಾಕ್ಷಿಯಾಗಿದೆ. ಇದಕ್ಕೆ ಕ್ಲಬ್‌ನ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರ ಸಮಾನ ಮನಸ್ಕತೆ, ಸಹಕಾರ, ಬೆಂಬಲ ಕಾರಣವಾದರೂ ಕೂಡ ಇದರ ಹಿಂದಿನ ಪ್ರೇರಕ ಶಕ್ತಿ ವಿಧಾನ ಪರಿಷತ್‌ನ ಶಾಸಕ ಹಾಗೂ ಕ್ಲಬ್‌ನ ಅಧ್ಯಕ್ಷರಾಗಿರುವ ಡಿ.ಎಸ್.ಅರುಣ್.

ಸಾಂಸ್ಕೃತಿಕ ರಾಯಭಾರಿ: ಕಲೆ, ಸಾಹಿತ್ಯ, ಸಂಸ್ಕೃತಿ, ಧಾರ್ಮಿಕತೆ, ಸಿನಿಮಾ, ನಾಟಕ, ಕ್ರೀಡೆ… ಹೀಗೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಅರುಣ್ ಶಾಸಕರಾಗಿ ಆಯ್ಕೆಯಾದ ನಂತರ ಸಕ್ರಿಯ ರಾಜಕಾರಣಿಯಾಗಿದ್ದಾರೆಯಾದರೂ ಕೂಡ ಸೃಜನಾತ್ಮಕ ಕ್ಷೇತ್ರಗಳಿಂದ ದೂರವಾಗಿಲ್ಲ. ಈ ಕ್ಷೇತ್ರಗಳಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿರುವ ಇವರು ವಿಭಿನ್ನ ಹಾಗೂ ವಿಶಿಷ್ಟ ರಾಜಕಾರಣಿ.

ಇಡೀ ದೇಶದ ರಾಜಕೀಯದಲ್ಲೇ ಮೌಲ್ಯಯುತ ರಾಜಕಾರಣದ ಮೂಲಕ ಮಾದರಿ ರಾಜಕಾರಣಿಯಾಗಿರುವ ವಿಧಾನ ಪರಿಷತ್‌ನ ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಅವರ ಮಗನಾಗಿರುವ ಅರುಣ್ ತಂದೆಯಂತೆಯೇ ಸಹೃದಯಿ ರಾಜಕಾರಣಿ. ಇವರು ಶಾಸಕ ಎಂದು ಗುರುತಿಸುವುದಕ್ಕಿಂತಲೂ ಹೆಚ್ಚಾಗಿ ಸಾಂಸ್ಕೃತಿಕ ರಾಯಭಾರಿಯಾಗಿ ಪ್ರತಿಬಿಂಬಿತವಾಗಿದ್ದಾರೆ. ಕೋಟ್ಯಧಿಪತಿಯಾಗಿದ್ದರೂ ಕೂಡ ನಯ-ವಿನಯ, ಸರಳ-ಸೌಜನ್ಯದ ಸಾಕಾರ ಮೂರ್ತಿಯಾಗಿದ್ದಾರೆ.

ಹಿಂದೂ ಪರಂಪರೆಯ ಪ್ರತಿಪಾದಕರಾಗಿದ್ದರೂ ಕೂಡ ಇವರು ಅಜಾತ ಶತೃವಾಗಿದ್ದರು. ಆದರೆ ಹಿಜಾಬ್, ಹಲಾಲ್, ಆಜಾನ್ ವಿರುದ್ಧದ ವ್ಯತಿರಿಕ್ತ ವಾತಾವರಣದಲ್ಲಿ ಜೀವ ಬೆದರಿಕೆಗೂ ಒಳಗಾಗಿದ್ದಾರೆ. ಆದರೆ ಇದ್ಯಾವುದಕ್ಕೂ ಅಂಜದೆ ಕೆಚ್ಚೆದೆಯಿಂದ ಇವರು ಮುನ್ನಡೆಯುತ್ತಿದ್ದಾರೆ.

ಲಾಕ್‌ಡೌನ್‌ನಲ್ಲಿ ಆಪದ್ಭಾಂದವ: ಲಾಕ್‌ಡೌನ್ ಸಂದರ್ಭದಲ್ಲಿ ಅರುಣ್ ಅಕ್ಷರಶಃ ಜೀವದ ಹಂಗು ತೊರೆದು ನಾಡಿನ ಉದ್ದಗಲಕ್ಕೂ ಸಂಚರಿಸಿ ಕೋವಿಡ್ ಪೀಡಿತರ ಚಿಕಿತ್ಸೆಗೆ ನೆರವಾಗಿದ್ದರು. ರೋಗಪೀಡಿತರ ಜೀವ ಉಳಿಸಲು ಕಾರಣರಾದರು. ಬಡವರಿಗೆ ಫುಡ್‌ಕಿಟ್ ವಿತರಿಸುವ ಮೂಲಕ ಹಸಿದವರಿಗೆ ಅನ್ನದಾತರಾಗಿದ್ದರು. ಪ್ರಚಾರಕ್ಕೆ ಹಾತೊರೆಯದೆ ಸದ್ದಿಲ್ಲದೆ, ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಿ ಆಪದ್ಭಾಂದವರಾದರು. ಇವರ ಈ ಕಾರ್ಯ ಆರ್‌ಎಸ್‌ಎಸ್ ಪ್ರಮುಖರ ಗಮನ ಸೆಳೆಯಿತು.

ಈಗೇನೋ ಅವರು ಶಾಸಕರು. ಸಂವಿಧಾನ್ಮಕವಾಗಿ ಅಧಿಕಾರ ಹೊಂದಿದ್ದಾರೆ. ಆದರೆ ಲಾಕ್‌ಡೌನ್ ಸಂದರ್ಭದಲ್ಲಿ ಅರುಣ್ ಅವರ ಬಳಿ ಯಾವ ಅಧಿಕಾರವೂ ಇರಲಿಲ್ಲ. ಆದರೂ ಸಂಸದ ಬಿ.ವೈ.ರಾಘವೇಂದ್ರ, ಎಸ್.ರುದ್ರೇಗೌಡ, ಆಗಿನ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ, ಜಿಲ್ಲಾಧಿಕಾರಿ, ಡಿಹೆಚ್‌ಓ, ಮೆಗ್ಗಾನ್ ಆಸ್ಪತ್ರೆಯ ಅಧೀಕ್ಷರು ಸೇರಿದಂತೆ ಪ್ರಮುಖರನ್ನು ವಿಶ್ವಾಸಕ್ಕೆ ಪಡೆದು ಹಗಲಿರುಳೆನ್ನದೆ ಅವರು ಕೋವಿಡ್ ಪೀಡಿತರು, ಶಂಕಿತರು, ಲಾಕ್‌ಡೌನ್‌ನಿಂದಾಗಿ ತೊಂದರೆಗೆ ಒಳಗಾದವರ ನೆರವಿಗೆ ಧಾವಿಸಿದ ಬಗೆ ಎಂತವರನ್ನೂ ದಂಗು ಬಡಿಸುತ್ತದೆ. ಒಂದು ಹಂತದಲ್ಲಿ ಅರುಣ್ ಅವರ ಸೇವಾ ಕಾರ್ಯ ಕಂಡು ಇವರ ಪತ್ನಿ ಪ್ರತಿಭಾ ಕೂಡ ಆತಂಕಕ್ಕೆ ಒಳಗಾಗಿದ್ದರು!!

ಈ ಕುಟುಂಬದ ಮೇಲೂ ಕೋವಿಡ್ ಛಾಯೆ ಆವರಿಸಿತ್ತಾದರೂ ಇದನ್ನವರು ಸಮರ್ಥವಾಗಿ ನಿಭಾಯಿಸಿದರು. ಇವರ ಈ ಸತ್ಕಾರ್ಯದ ಫಲವೇನೋ ಎಂಬಂತೆ ವಿಧಾನ ಪರಿಷತ್‌ನ ಶಿವಮೊಗ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆದ ಚುನಾವಣೆ ಭಾರೀ ಪೈಪೋಟಿಯಿಂದ ಕೂಡಿತ್ತಾದರೂ ಅರುಣ್ ಗೆಲುವು ಸಾಧಿಸಿದರು.

ಕಂಟ್ರಿ ಕ್ಲಬ್‌ಗೆ ಹೊಸ ರೂಪ: ಕಂಟ್ರಿ ಕ್ಲಬ್ ಶಿವಮೊಗ್ಗದ ಅತ್ಯಂತ ಪ್ರತಿಷ್ಠಿತ ಕ್ಲಬ್‌ಗಳಲ್ಲೊಂದು. ಸುಮಾರು ಮೂರೂವರೆ ಎಕರೆ ಪ್ರದೇಶದಲ್ಲಿ ಸುಂದರ ವಾತಾವರಣದಲ್ಲಿ ಈ ಕ್ಲಬ್ ರೂಪುಗೊಂಡಿದೆ. ಜಿಲ್ಲೆಯಲ್ಲಿಯೇ ಮೊಟ್ಟ ಮೊದಲ ಸ್ವಿಮಿಂಗ್ ಫೂಲ್ ಹೊಂದಿದ ಕ್ಲಬ್ ಎಂಬ ಹೆಗ್ಗಳಿಕೆ ಕಂಟ್ರಿ ಕ್ಲಬ್‌ಗೆ ಇದೆ.

ಈ ಕ್ಲಬ್‌ಗೆ ಸತತ ೧೪ ವರ್ಷಗಳಿಂದ ಅಧ್ಯಕ್ಷರಾಗಿರುವ ಅರುಣ್ ಇದನ್ನೊಂದು ಕೌಟುಂಬಿಕ ವಾತಾವರಣದ ಕ್ಲಬ್ಬನ್ನಾಗಿ ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಈ ಕ್ಲಬ್ ಸುಮಾರು ೬ ಕೋಟಿ ರೂ. ವೆಚ್ಚದಲ್ಲಿ ನೂತನ ಕ್ರೀಡಾ ಸಂಕೀರ್ಣ ಹೊಂದಿದ್ದು, ಇದರ ಉದ್ಘಾಟನೆ ಮೇ ೧ರಂದು ನಡೆಯಲಿದೆ.

ಇನ್ ಡೋರ್ ಶೆಟಲ್ ಕೋರ್ಟ್, ಬ್ಯಾಂಕ್ವೆಟ್ ಹಾಲ್, ಸುಮಾರು ೩೦ ಜನ ಕುಳಿತು ವೀಕ್ಷಿಸಬಹುದಾದಂತಹ ಹೋಂ ಥಿಯೇಟರ್, ಸ್ಕ್ವಾಷ್, ಬಿಲಿಯರ್ಡ್, ಕಿಕ್ರೆಟ್‌ನ ಬೌಲಿಂಗ್ ಮಾಡುವ ಮಿಷಿನ್ (ಆಲಿ), ಕೇರಂ, ಚೆಸ್, ಲೈಬ್ರರಿ, ಜಿಮ್ ಸೇರಿದಂತೆ ಉತ್ತಮ ಹಾಗೂ ಅತ್ಯಾಧುನಿಕ ಸೌಕರ್ಯವನ್ನು ಈ ಕ್ರೀಡಾ ಸಂಕೀರ್ಣದಲ್ಲಿ ಕಲ್ಪಿಸಲಾಗಿದೆ.

ಮಾಧ್ಯಮ ಸ್ನೇಹಿ- ಜನಾನುರಾಗಿ: ಈ ಕ್ರೀಡಾ ಸಂಕೀರ್ಣದ ಬಗ್ಗೆ ಮಾಹಿತಿ ನೀಡಲು ಏಪ್ರಿಲ್ ೨೩ರಂದು ಪ್ರೆಸ್‌ಮೀಟ್ ಕರೆಯಲಾಗಿತ್ತು. ಪ್ರೆಸ್‌ಮೀಟ್, ಸಾರ್ವಜನಿಕ ಸಭೆ- ಸಮಾರಂಭಗಳಲ್ಲಿ ಮಾಧ್ಯಮದವರು ಫೋಟೋ ತೆಗೆಯುವುದು, ವಿಡಿಯೋ ಮಾಡುವುದು ಸರ್ವೇಸಾಮಾನ್ಯ. ಆದರೆ ಮೀಡಿಯಾದವರೇ ಕ್ಯಾಮೆರಾ ಎದುರು ಕಾಣಿಸಿಕೊಳ್ಳುವುದು ವಿರಳಾತಿವಿರಳ. ಆದರೆ ಅಂದು ಪ್ರೆಸ್‌ಮೀಟ್ ನಂತರ ಅಧ್ಯಕ್ಷ ಅರುಣ್ ಅವರ ಮನವಿ ಮೇರೆಗೆ ಮಾಧ್ಯಮದವರೂ ಸಹ ಕ್ಲಬ್‌ನ ಪದಾಧಿಕಾರಿಗಳೊಂದಿಗೆ ಫೋಟೋಗೆ ಫೋಸು ನೀಡಿದರು. ಅರುಣ್ ಯಾವುದೇ ಹಮ್ಮು-ಬಿಮ್ಮಿಲ್ಲದೆ ಎಲ್ಲರೊಂದಿಗೂ ಬೆರೆಯುವ ಸ್ವಭಾವದವರು. ಇದರಿಂದಾಗಿಯೇ ಅವರು ಜನಾನುರಾಗಿಯಾಗಿದ್ದಾರೆ. ಅಲ್ಲದೆ ಇವರು ಮಾಧ್ಯಮ ಸ್ನೇಹಿಯಾಗಿರುವುದೇ ವಿಶೇಷತೆ.

ಮಸ್ತ್- ಮಸ್ತ್ ಡಿಜೆ: ಇವರು ಅಧ್ಯಕ್ಷರಾಗಿರುವ ಕಂಟ್ರಿ ಕ್ಲಬ್‌ನ ಮತ್ತೊಂದು ವಿಶೇಷತೆ ಎಂದರೆ ಇಲ್ಲಿ ಯುವ ಪೀಳಿಗೆಯ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಡಿಸ್ಕ್ ಜಾಕಿ (ಡಿಜೆ) ಹಾಲ್ ಕೂಡ ಇದ್ದು, ಇದನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ. ಡಿಜೆ ಸೌಂಡ್ ಕೇವಲ ಈ ಹಾಲ್‌ನಲ್ಲಿ ಮಾತ್ರ ಕೇಳಿ ಬರುತ್ತದೆಯೇ ಹೊರತು ಹೊರಗಡೆ ಈ ಶಬ್ದ ಕೇಳಿಸುವುದೇ ಇಲ್ಲ!!

ಒಟ್ಟಿನಲ್ಲಿ ವೈವಿಧ್ಯ, ವೈಭವದೊಂದಿಗೆ ಹೊಸ ಆಯಾಮ ಪಡೆದಿರುವ ಕಂಟ್ರಿ ಕ್ಲಬ್‌ನ ಕಣ್ಮನ ಸೆಳೆಯುವ ಸುಂದರ ವಾತಾವರಣ ಅನ್ಯಾದೃಶ್ಯವಾದದ್ದು. ಈ ಕ್ಲಬ್‌ನಲ್ಲಿ ೧೨೦೦ರಷ್ಟು ಸದಸ್ಯರಿದ್ದು, ಜಾತಿ-ಧರ್ಮ, ಮತ-ಪಂಥದ ಚೌಕಟ್ಟು ಇಲ್ಲಿಲ್ಲ. ಆದರೆ ಪ್ರತಿಯೊಬ್ಬರೂ ಸಾಮಾಜಿಕ ನೀತಿ, ನಿಯಮ ಪಾಲಿಸುವುದು ಕಡ್ಡಾಯ. ಮಕ್ಕಳು, ವಯೋವೃದ್ಧರಾದಿಯಾಗಿ ಕ್ಲಬ್‌ಗೆ ಬರುವವರ ಮನಸ್ಸು ಸಂತುಷ್ಟಿಗೊಳ್ಳುವಂತಹ ವಾತಾವರಣ ಇರಬೇಕೆಂಬ ಧ್ಯೇಯ ಈ ಕ್ಲಬ್‌ನ ಪದಾಧಿಕಾರಿಗಳದ್ದಾಗಿದೆ.

ಭೂಪಾಳಂ ಎಸ್.ಶಶಿಧರ್ ಅಧ್ಯಕ್ಷತೆಯಲ್ಲಿ ಸದಸ್ಯರುಗಳಾದ ಡಿ.ಎಸ್.ಅರುಣ್, ಹೆಚ್.ಜಿ.ಅಶೋಕ್, ಎ.ಮಂಜುನಾಥ್, ಬಿ.ಆರ್.ಅಮರನಾಥ್, ಜಿ.ಎನ್.ಪ್ರಕಾಶ್, ಡಾ|ವೈ.ವಿ.ಶಶಿಧರ್, ಮದನ್‌ಲಾಲ್ ಮತ್ತು ಎಸ್.ಕೆ.ಕುಮಾರ್ ಅವರನ್ನು ಒಳಗೊಂಡ ಕ್ರೀಡಾ ಸಂಕೀರ್ಣ ಕಟ್ಟಡದ ಸಮಿತಿ ಸರ್ಕಾರದಿಂದ ಯಾವುದೇ ಆರ್ಥಿಕ ನೆರವು, ಜನಪ್ರತಿನಿಧಿಗಳ ಅನುದಾನ ಪಡೆಯದೆ ಪರಿಶ್ರಮದಿಂದ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಶ್ರಮಿಸಿದೆ.

ಈ ಕ್ರೀಡಾ ಸಂಕೀರ್ಣ ಕೇವಲ ಸದಸ್ಯರು ಮತ್ತವರ ಕುಟುಂಬಕಷ್ಟೇ ಸೀಮಿತವಾಗಿರದೆ ಆಸಕ್ತ ಸದಸ್ಯೇತರರು ಕೂಡ ನಿಗಧಿತ ಶುಲ್ಕ ಪಾವತಿಸಿ ಇದರ ಪ್ರಯೋಜನ ಪಡೆಯಬಹುದಾಗಿದೆ. ಕ್ಲಬ್‌ನ ಅಧ್ಯಕ್ಷ ಅರುಣ್ ಮತ್ತವರ ತಂಡದ ಪರಿಶ್ರಮ, ಸಾಂಘಿಕ ಪ್ರಯತ್ನದ ಫಲವಾಗಿ ಕಂಟ್ರಿ ಕ್ಲಬ್‌ನ ಹೊಸ ಆಯಾಮ ಪಡೆದುಕೊಂಡಿದ್ದು, ಇದನ್ನು ಆಸಕ್ತರು ಸದ್ಭಳಕೆ ಮಾಡಿಕೊಳ್ಳಬೇಕಾಗಿದೆಯಲ್ಲದೆ ಕ್ಲಬ್‌ಗಳೆಂದರೆ ಕೇವಲ ಉಳ್ಳವರಿಗೆ ಮಾತ್ರ ಎಂಬ ಜನಸಾಮಾನ್ಯರ ಅಭಿಪ್ರಾಯ ಕಂಟ್ರಿ ಕ್ಲಬ್ ಮೂಲಕ ಸ್ವಲ್ಪವಾದರೂ ದೂರವಾದಲ್ಲಿ ಈ ಕ್ಲಬ್‌ನ ಪದಾಧಿಕಾರಿಗಳ ಪರಿಶ್ರಮ ಸಾರ್ಥಕಗೊಳ್ಳುತ್ತದೆ.

ಲೇಖಕರು:
ಸಂತೋಷ್ ಎಲಿಗಾರ್,
ಹವ್ಯಾಸಿ ಬರಹಗಾರರು, ಕೃಷಿಕರು,
ಶಿವಮೊಗ್ಗ

                                                                               
                     ಮೊ:೭೮೪೮೮-೫೧೯೬೬

By admin

ನಿಮ್ಮದೊಂದು ಉತ್ತರ

You missed

error: Content is protected !!