ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಗುತ್ತಿಗೆ ಬಿಲ್ ಪಾವತಿಗೆ 40 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದಾರೆಂದು ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಇಂದು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಲಾಠಿ ಪ್ರಹಾರದಿಂದ ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದರ್ಶನ್, ಶ್ಯಾಮ್ ಅವರಿಗೆ ಗಾಯವಾಗಿದೆ. ಗುಂಡಪ್ಪ ಶೆಡ್ ನಲ್ಲಿರುವ ಈಶ್ವರಪ್ಪನವರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ಯುವ ಕಾಂಗ್ರೆಸ್ ಕಾರ್ಯಕರ್ತರು ಮುಂದಾಗಿದ್ದು, ಲಾಠಿ ಬೀಸಿ ಅವರನ್ನು ಚದುರಿಸಿದ ಪೊಲೀಸರು ಕೆಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಉಡುಪಿಯ ಲಾಡ್ಜ್ ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಸಂತೋಷ್ ಪಾಟೀಲ್ ಬಿಜೆಪಿ ಮುಖಂಡರಾಗಿದ್ದು, ಇತ್ತೀಚೆಗೆ ಸಚಿವ ಈಶ್ವರಪ್ಪ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದರು. ಇದು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಕಳೆದ 15 ದಿನಗಳ ಹಿಂದಿನಿಂದ ನಾಪತ್ತೆಯಾಗಿದ್ದ ಗುತ್ತಿಗೆದಾರನ ಮೊಬೈಲ್ ಅನ್ನು ಪೊಲೀಸರು ಟ್ರೇಸ್ ಮಾಡಿದಾಗ ಉಡುಪಿಯ ಖಾಸಗಿ ಲಾಡ್ಜ್ ನ ಲೊಕೇಷನ್ ತೋರಿಸಿದೆ. ಅಲ್ಲಿ ಪೊಲೀಸರು ಪರಿಶೀಲಿಸಿದಾಗ ಗುತ್ತಿಗೆದಾರ ನೇಣಿಗೆ ಶರಣಾಗಿದ್ದು, ಆತ್ಮಹತ್ಯೆಗೆ ಮುನ್ನ ಕಳಿಸಿದ ಸಂದೇಶದಲ್ಲಿ ನನ್ನ ಸಾವಿಗೆ ಕೆ.ಎಸ್. ಈಶ್ವರಪ್ಪನವರೇ ಕಾರಣ ಉಲ್ಲೇಖಿಸಿದ್ದಾರೆ. ನನ್ನ ಹೆಂಡತಿ ಮಕ್ಕಳಿಗೆ ನೆರವಾಗುವಂತೆ ಸಿಎಂ, ಪಿಎಂ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಅಲ್ಲದೆ ಕಾಮಗಾರಿ ಬಿಲ್ ಕೊಡಿಸುವಂತೆ ಪ್ರಧಾನ ಮೋದಿಯವರಿಗೂ ಗುತ್ತಿಗೆದಾರ ಸಂತೋಷ್ ಪತ್ರ ಬರೆದಿದ್ದರು. ಕಾಮಗಾರಿ ಮುಗಿಸಿ ಒಂದು ವರ್ಷ ಮುಗಿದರೂ ಹಣ ಪಾವತಿಸದ ಕಾರಣ ಸಂಕಷ್ಟಕ್ಕೆ ಸಿಲುಕಿದ್ದ ಅವರು, ಹಣ ಬಿಡುಗಡೆ ಮಾಡಲು ಸಚಿವ ಈಶ್ವರಪ್ಪ 40 ಪರ್ಸೆಂಟ್ ಕಮಿಷನ್ ಗೆ ಬೇಡಿಕೆ ಇಟ್ಟಿರುವುದಾಗಿ ಮೋದಿಯವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದರು. ಈ ನಿಟ್ಟಿನಲ್ಲಿ ಸೂಕ್ತ ತನಿಖೆ ಕೈಗೊಳ್ಳಬೇಕು. ಸಚಿವ ಈಶ್ವರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪೊಲೀಸರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿ, ಕರೆದೊಯ್ದರು.
ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ. ಗಿರೀಶ್, ಪ್ರಮುಖರಾದ ಕೆ. ರಂಗನಾಥ್, ಕುಮರೇಶ್ ಮುಂತಾದವರಿದ್ದರು.
ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ:
ಶಿವಮೊಗ್ಗ: ಸಚಿವ ಕೆ.ಎಸ್.ಈಶ್ವರಪ್ಪನವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪಾಟೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸಚಿವ ಈಶ್ವರಪ್ಪ ಹಾಗೂ ಬೊಮ್ಮಾಯಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು ಪ್ರಕರಣವನ್ನು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕೆ. ದೇವೇಂದ್ರಪ್ಪ, ಸಿ.ಎಸ್. ಚಂದ್ರಭೂಪಾಲ್, ಸೌಗಂಧಿಕಾ, ಯಮುನಾ ರಂಗೇಗೌಡ, ಹೆಚ್.ಸಿ. ಯೋಗೀಶ್, ಅನ್ನು, ಚಂದನ್, ರಾಮೇಗೌಡ, ಬಿ.ಎ. ರಮೇಶ್ ಹೆಗ್ಡೆ ಮುಂತಾದವರಿದ್ದರು.