Tunga Taranga | April, 05, 2022
ಶಿವಮೊಗ್ಗ: ರಿಪ್ಪನ್‌ಪೇಟೆಯ ಅಮೃತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದರಹಳ್ಳಿ ಗ್ರಾಮದ ಕುಮದ್ವತಿ ನದಿಯ ನೀರಿಗೆ ವಿಷ ಬೆರೆಸಿ ಜಲಚರಗಳ ಮಾರಣಹೋಮ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬೇಸಿಗೆ ಕಾರಣದಿಂದ ನೀರು ಇಂಗಿಹೋಗಿದ್ದು, ಅಲ್ಲಲ್ಲಿ ಕೆಲ ಹೊಂಡದಲ್ಲಿ ನಿಂತ ನೀರಿನಲ್ಲಿ ಜಲಚರಗಳು ಜೀವಿಸುತ್ತವೆ.
ಇದನ್ನೇ ಗುರಿಯಾಗಿಸಿಕೊಂಡು ಕಿಡಿಗೇಡಿಗಳು ವಿಷಯುಕ್ತ ಮೈಲುತುತ್ತವನ್ನು ನೀರಿಗೆ ಬೆರೆಸಿ ಲಕ್ಷಾಂತರ ಜಲಚರಗಳ ಮಾರಣಹೋಮಕ್ಕೆ ಕಾರಣರಾಗಿದ್ದಾರೆ.
ವಿಷ ಬೆರೆಸಿದ್ದರಿಂದ ಮೀನು, ಕಪ್ಪೆ ಹಾಗೂ ಇನ್ನಿತರ ಜೀವಿಗಳು ನದಿಯ ದಂಡೆಯ ಮೇಲೆ ಸತ್ತುಬಿದ್ದಿವೆ. ಇದನ್ನೇ ಆಹಾರವಾಗಿ ಸೇವಿಸುವ ಪಕ್ಷಿ ಸಂಕುಲಗಳು ಸಹ ಸಾಯುವ ಸಾಧ್ಯತೆ ಇದೆ. ಅಲ್ಲದೆ, ಜಾನುವಾರು, ಕಾಡುಪ್ರಾಣಿಗಳು ಈ ನೀರನ್ನು ಕುಡಿಯುವುದರಿಂದ ಅವುಗಳ ಜೀವಕ್ಕೂ ಮಾರಕವಾಗಿದೆ.
ಅಮೃತ ಗ್ರಾಮ ಪಂಚಾಯಿತಿ ಪಿಡಿಒ ಸುಧಾ, ’ತಪ್ಪಿತಸ್ಥ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.