ಶಿವಮೊಗ್ಗ: ಇಲ್ಲಿನ ಪೆಸಿಟ್ ಕಾಲೇಜಿನಲ್ಲಿ ನಡೆಯುತ್ತಿರುವ ರೋಟರಿ ೩೧೮೨ರ ರಾಮ ಸಂಭ್ರಮ ಸಮಾವೇಶದ ಎರಡನೇ ದಿನವಾದ ನಾಳೆ ೧೨-೦೩-೨೦೨೨ರ ಶನಿವಾರ ಮೂಲತಃ ತೀರ್ಥಹಳ್ಳಿಯವರಾದ ಅಚ್ಚುತ್ ಗೌಡ ಅವರು ಪ್ರಮುಖ ಭಾಷಣಕಾರರಾಗಿ ಆಗಮಿಸುತ್ತಿದ್ದು, ಡಿಕ್ಲರೇಷನ್ ಆಫ್ ರೋಟೇರಿಯನ್ಸ್ ಇನ್ ಬ್ಯುಸಿನೆಸ್ ಅಂಡ್ ಫ್ರೊಫೆಷನ್ಸ್ ಎಂಬ ವಿಷಯದ ಮೇಲೆ ಮಾತನಾಡಲಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಹೊಸಕೊಪ್ಪ ಎಂಬ ಪುಟ್ಟ ಗ್ರಾಮದಲ್ಲಿ ಹುಟ್ಟಿ ಬೆಳೆದು ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದ ಅಚ್ಚುತ್ ಗೌಡರು ಇಂದು ತಮ್ಮ ಸ್ವಂತ ಪರಿಶ್ರಮದ ಮೇಲೆ ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದ್ದಾರೆ. ರಿಯಲ್ ಎಸ್ಟೇಟ್ ಸಲಹಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿರುವ ಇವರು, ಸುಮಾರು ೨ ಸಾವಿರ ಉದ್ಯೋಗಿಗಳು ಇರುವ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.
ಕೇವಲ ತಮ್ಮ ಸಂಸ್ಥೆಯಲ್ಲಿ ರಿಯಲ್ ಎಸ್ಟೇಟ್‌ಗೆ ಮಾತ್ರವಲ್ಲದೆ ಮಾವನ ಸಂಪನ್ಮೂಲ, ಫೆಸಿಲಿಟಿ ಮ್ಯಾನೇಜ್‌ಮೆಂಟ್ ಸೇರಿದಂತೆ ಇತರೆ ವಲಯಗಳಿಗೂ ಆದ್ಯತೆ ನೀಡಿ ವಿಭಿನ್ನವಾದ ಪರಿಕಲ್ಪನೆಯಲ್ಲಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಹೀಗೆ ಹಲವು ವಿಷಯಗಳಲ್ಲಿ ಪರಿಣತಿ ಸಾಧಿಸಿರುವ ಅಚ್ಚುತ್ ಗೌಡರು ಬೆಂಗಳೂರಿನಲ್ಲಿ ಕಲಾ ಗ್ಯಾಲರಿ, ಶಿಲ್ಪಾ ಫೌಂಡೇಷನ್ ಮೂಲಕ ಸಾಮಾಜಿಕ ಸೇವಾ ಕಾರ್ಯಗಳಲ್ಲೂ ಸಕ್ರಿಯರಾಗಿದ್ದಾರೆ.