ಶಿವಮೊಗ್ಗ,ಜ.೨೦:
ಇಂದು ಬೆಳಿಗ್ಗೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಿಗೆ ವಾರಾಂತ್ಯ ಕರ್ಫೂ ಸಡಿಲಗೊಳಿಸುವ ಬಗ್ಗೆ ಹಾಗೂ ನಗರದ ಹಲವು ಅಭಿವೃದ್ದಿಪರ ಕಾರ್ಯಗಳ ಪ್ರಗತಿಯ ಬಗ್ಗೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಮನವಿ ಸಲ್ಲಿಸಲಾಯಿತು.


ಕೊರೋನಾ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ವಾಣಿಜ್ಯೋದ್ಯಮಿಗಳು ತಮ್ಮ ವ್ಯಾಪಾರ ವಹಿವಾಟುಗಳಿಲ್ಲದೆ ಹಲವಾರು ತೊಂದರೆಗಳನ್ನು ಅನುಭವಿಸಿದ್ದು, ಇದರಿಂದ ಚೇತರಿಸಿಕೊಳ್ಳಲು ಆಗದೆ ಆರ್ಥಿಕ ಸಂಕಷ್ಟವನ್ನು ನಿಭಾಯಿಸುವುದು ತುಂಬಾ ಕಷ್ಟವಾಗಿದೆ. ಕೋವಿಡ್ ನಿಯಂತ್ರಣಕ್ಕಾಗಿ ಈಗಾಗಲೇ ರಾಜ್ಯದೆಲ್ಲೆಡೆ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲೂ ವಾರಾಂತ್ಯದ ಕರ್ಫೂ ವಿಧಿಸಲಾಗಿದ್ದು, ಇದರಿಂದಾಗಿ ವಾಣಿಜ್ಯ ಸಮುದಾಯಕ್ಕೆ ಭರಿಸಲಾರದಷ್ಟು ನಷ್ಟವಾಗುವುದರ ಜೊತೆಗೆ ಜನಸಾಮಾನ್ಯರು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ವಾರಾಂತ್ಯದ ಕರ್ಫ್ಯೂ ಕ್ರಮಗಳು ಸೋಂಕು ಹರಡುವಿಕೆಯನ್ನು ತಡೆಯಲು ಪರಿಣಾಮಕಾರಿಯಾಗದೆ ಇರುವುದು ಅಂಕಿ ಸಂಖ್ಯೆಗಳಿಂದ ಸ್ಪಷ್ಟವಾಗಿದೆ. ಹಲವು ನೆರೆ ರಾಜ್ಯಗಳಲ್ಲಿ ಕೇರಳ, ತೆಲಂಗಾಣ, ಆಂದ್ರ ರಾಜ್ಯಗಳಲ್ಲಿ ಯಾವುದೇ ಕರ್ಫ್ಯೂ ಇರುವುದಿಲ್ಲ, ನಮ್ಮ ಸಂಘದ ೩೦ ಸಂಯೋಜಿತ ಸಂಘಗಳು ವಾರಾಂತ್ಯ ಕರ್ಫ್ಯೂ ತೆರವುಗೊಳಿಸಲು ಬೇಡಿಕೆಯನ್ನು ಸಲ್ಲಿಸಿರುವುದನ್ನು ಸಚಿವರ ಗಮನಕ್ಕೆ ತರಲಾಯಿತು. ವಾರಾಂತ್ಯ ಕರ್ಫ್ಯೂವನ್ನು ತೆರವುಗೊಳಿಸಿ ನಶಿಸಿ ಹೋಗುತ್ತಿರುವ ವ್ಯವಹಾಗಳಿಗೆ ಚೇತರಿಸಿಕೊಳ್ಳಲು ಅವಕಾಶ ನೀಡಬೇಕೆಂದು ನಿವೇದಿಸಿಕೊಳ್ಳಲಾಯಿತು.


ಶಿವಮೊಗ್ಗ ನಗರದ ಅಭಿವೃದ್ದಿ ಕಾಮಗಾರಿಗಳ ಕುರಿತು ಟ್ರಕ್-ಟರ್ಮಿನಲ್ ಯಾರ್ಡ್ ಸ್ಥಾಪನೆ ಕುರಿತು ಯೋಜನೆಗೆ ೧೫ ಎಕರೆ ಮಂಜೂರು ಮಾಡಲು, ಸಿಟಿ-ಬಸ್ ಸ್ಟ್ಯಾಂಡ್ ನಿರ್ಮಾಣದ – ನಗರ ಸಾರಿಗೆ ವಾಹನಗಳಿಗೆ ಒಂದು ಮುಖ್ಯ ಬಸ್-ಸ್ಟ್ಯಾಂಡ್ ನಿರ್ಮಿಸುವ ಬಗ್ಗೆ – ಕುವೆಂಪು ರಂಗಮಂದಿರ ನವೀಕರಣ ಮತ್ತು ಉನ್ನೀಕರಣ ಮಾಡುವ ಬಗ್ಗೆ – ಸಂಘದಿಂದ ಬಹುಹಂತದ ತಂತ್ರಜ್ಞಾನ ಕೌಶಲ್ಯ ಕೇಂದ್ರ ಸ್ಥಾಪನೆಗೆ ಬಗ್ಗೆ ಸಂಘಕ್ಕೆ ಸರ್ಕಾರದಿಂದ ೪ ಎಕರೆ ಜಾಗವನ್ನು ಮಂಜೂರು ಮಾಡುವ ಬಗ್ಗೆ – ಇ-ವೇಸ್ಟ್ ಕಾರ್ಯಾಚರಣೆ ಯೋಜನೆ ಪರಿಣಾಮಕಾರಿಯಾಗಿ ನಿರ್ವಹಿಸಲು ಕ್ರಮ ತೆಗೆದುಕೊಳ್ಳಲು ಕೋರಲಾಯಿತು, ಶಿವಮೊಗ್ಗ ಜಿಲ್ಲೆಯು ಪ್ರವಾಸೋದ್ಯಮದ ತಾಣವಾಗಿದ್ದು, ಸರ್ಕಾರದಿಂದ ನೂತನ ಪ್ರವಾಸೋದ್ಯಮ ನೀತಿ ಜಾರಿಗೆ ಬರುತ್ತಿದ್ದು, ಈ ಬಗ್ಗೆ ಪ್ರವಾಸೋದ್ಯಮದ ಯೋಜನೆಯಲ್ಲಿ ಆಸಕ್ತಿ ಇರುವ ಹೂಡಿಕೆದಾರರನ್ನು ಆಕರ್ಷಿಸಲು ಇನ್‌ವೆಸ್ಟರ‍್ಸ್ ಮೀಟ್ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆಯೂ ಮನವಿ ಸಲ್ಲಿಸಲಾಯಿತು.


ಮಾನ್ಯ ಸಚಿವರು ಮನವಿಗೆ ಸ್ಪಂದಿಸಿ ಕೊರೋನಾ ಪಾಸಿಟೀವ್ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿವೆ, ಹರಡುವಿಕೆಯ ಪರಿಸ್ಥಿತಿಯನ್ನು ಒಂದೆರಡು ದಿನಗಳನ್ನು ನೋಡಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು. ಕುವೆಂಪು ರಂಗಮಂದಿರದ ನವೀಕರಣ ಮತ್ತು ಉನ್ನತೀಕರಣದ ಬಗ್ಗೆ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ಬೇಗ ಕ್ರಮಕೈಗೊಳ್ಳುವುದಾಗಿ ತಿಳಿಸಿದರು
ಸಂಘದ ಅಧ್ಯಕ್ಷರಾದ ಎನ್.ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹ-ಕಾರ್ಯದರ್ಶಿ ಜಿ. ವಿಜಯಕುಮಾರ್, ನಿರ್ದೇಶಕರಾದ ಎಂ. ರಾಜು ಹಾಗೂ ಇತರರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!