ಶಿಕಾರಿಪುರ: ಜ. 18, 19ರಂದು ಪಟ್ಟಣದಲ್ಲಿ ನಿಗದಿಯಾಗಿದ್ದ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ರದ್ದುಪಡಿಸಿ ತಾಲ್ಲೂಕು ಆಡಳಿತ ಆದೇಶ ಹೊರಡಿಸಿದೆ.
ಶಿಕಾರಿಪುರ ಪಟ್ಟಣದಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವವನ್ನು ಈ ಬಾರಿ ಅದ್ದೂರಿಯಾಗಿ ಆಚರಿಸಲು ಮಾರಿಕಾಂಬಾ ಜಾತ್ರಾ ಮಹೋತ್ಸವ ಸಮಿತಿ ಪದಾಧಿಕಾರಿಗಳು ಒಂದು ತಿಂಗಳಿನಿಂದ ಸಿದ್ಧತೆ ಮಾಡಿಕೊಂಡಿದ್ದರು. ದೇವಸ್ಥಾನ ಪಕ್ಕದಲ್ಲಿ ದೇವಿ ಮೂರ್ತಿ ಪ್ರತಿಷ್ಠಾಸಲು ಪೆಂಡಾಲ್ ಹಾಕಿದ್ದರು. ಪಟ್ಟಣವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸುವ ಕೆಲಸವೂ ಆರಂಭವಾಗಿತ್ತು.
ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆಯನ್ನು ಮುದ್ರಿಸಿ ಹಂಚಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಕುಸ್ತಿ ಪಂದ್ಯಾವಳಿಯನ್ನೂ ಆಯೋಜಿಸಲಾಗಿತ್ತು. ಕೋವಿಡ್‌ಗೆ ಎರಡು ಲಸಿಕೆ ಪಡೆದವರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಬೇಕು ಹಾಗೂ ಮಾಸ್ಕ್ ಧರಿಸಬೇಕು ಎಂಬ ಸೂಚನೆಯನ್ನೂ ನೀಡಲಾಗಿತ್ತು. ಸರ್ಕಾರದ ಆದೇಶದಂತೆ ಪ್ರಸ್ತುತ ತಾಲ್ಲೂಕು ಆಡಳಿತ ಜಾತ್ರಾ ಮಹೋತ್ಸವ, ರಥೋತ್ಸವ ರದ್ದುಪಡಿಸಿದೆ.