ಕಸಾಪದಲ್ಲಿ ಈಗ ಹಣವಿಲ್ಲ, ನೂರಾರು ನಿರೀಕ್ಷೆಗಳಿವೆ: ಡಿ. ಮಂಜುನಾಥ್
ಶಿವಮೊಗ್ಗ:
ಶಿವಮೊಗ್ಗ ಸಾಹಿತ್ಯ ಪರಿಷತ್ ನಲ್ಲಿ ಈಗ ಹಣವಿಲ್ಲ. ಆದರೆ, ನಿರೀಕ್ಷೆಗಳು ನೂರಾರು ಇವೆ ಎಂದು ಕಸಾಪ ನೂತನ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಚುನಾವಣೆಯಲ್ಲಿ ತಮ್ಮನ್ನು ಗೆಲ್ಲಿಸಿದ್ದಕ್ಕೆ ಮತದಾರರಿಗೆ ಅಭಿನಂದನೆಗಳು. ತಾವು ಗೆದ್ದ ಮೇಲೆ ಇದೀಗ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಸಾಹಿತ್ಯ ಪರಿಷತ್ ನ ಜವಾಬ್ದಾರಿಯನ್ನು ನಾನು ಸೋತಾಗ ವಹಿಸಿಕೊಟ್ಟಿದ್ದೆ. ಆಗ ಕಸಾಪ ಖಾತೆಯಲ್ಲಿ 5.89 ಲಕ್ಷ ರೂ. ಇತ್ತು. ಆದರೆ, ಈಗ ನಾನು ಅಧಿಕಾರ ವಹಿಸಿಕೊಂಡಾಗ ಕೇವಲ 2 ಸಾವಿರ ರೂ. ಮಾತ್ರವಿದೆ. ಅದರ ಜೊತೆಗೆ 1500 ರೂ. ಗಳ ವಿದ್ಯುತ್ ಬಿಲ್ ಬಾಕಿ ಇದೆ. ಹಾಗಾಗಿ ಸಾಹಿತ್ಯ ಪರಿಷತ್ ನಲ್ಲಿ ಈಗ ಯಾವ ಹಣವೂ ಇಲ್ಲ ಎಂದರು.
ಆದರೆ, ಸಾಹಿತ್ಯ ಪರಿಷತ್ ಅನ್ನು ಮತ್ತೊಮ್ಮೆ ಉತ್ತುಂಗ ಸ್ಥಿತಿಗೆ ಒಯ್ಯುವ ಮನಸ್ಸಿದೆ. ಹಾಗಾಗಿ ಇದೀಗ ಪೂರ್ವ ತಯಾರಿಯಲ್ಲಿ ನಾವಿದ್ದೇವೆ. ಜಿಲ್ಲಾದ್ಯಂತ ಪ್ರವಾಸ ಕೈಗೊಂಡಿದ್ದೇನೆ. ಎಲ್ಲಾ ತಾಲೂಕುಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನೇಮಕ ಮಾಡಿಕೊಳ್ಳಬೇಕಾಗಿದೆ. ಈ ಹಿನ್ನಲೆಯಲ್ಲಿ ಸ್ಥಳೀಯರೊಂದಿಗೆ ಸಭೆ ನಡೆಸಿ ಚರ್ಚಿಸಿ ಯಾರು ಕೆಲಸ ಮಾಡಲು ಅರ್ಹರೋ ಅಂತಹವರಿಗೆ ಅಧಿಕಾರ ನೀಡುತ್ತೇವೆ. ಏಕೆಂದರೆ ಕೆಲವರು ಮೊದಲು ಉತ್ಸಾಹ ತೋರಿಸುತ್ತಾರೆ. ಆದರೆ, ಕೊನೆಯವರೆಗೂ ಇರುವುದಿಲ್ಲ. ಈ ಹಿನ್ನಲೆಯಲ್ಲಿ ಮೊದಲು ಸಭೆ ನಡೆಸಿ ಆ ನಂತರ ಪದಾಧಿಕಾರಿಗಳ ನೇಮಕ ಮಾಡಲಾಗುವುದು ಎಂದರು.
ನಾನು ಅಧಿಕಾರ ವಹಿಸಿಕೊಂಡರೂ ಕೂಡ ಸಾಹಿತ್ಯ ಗ್ರಾಮದ ಚಾರ್ಜ್ ಅನ್ನು ಇನ್ನೂ ತೆಗೆದುಕೊಂಡಿಲ್ಲ. ನಾನು ಚಾರ್ಜ್ ಕೊಡುವಾಗ ದಾಖಲೆಗಳು, ಕಡತಗಳನ್ನು ನೀಡಿದ್ದೆ. ಆದರೆ, ಆ ಎಲ್ಲಾ ಕಡತಗಳು ಈಗ ಇಲ್ಲ. ಆದ್ದರಿಂದ ಚಾರ್ಜ್ ತೆಗೆದುಕೊಳ್ಳುವುದು ಕಷ್ಟವಾಗುತ್ತಿದೆ. ನಿಕಟಪೂರ್ವ ಅಧ್ಯಕ್ಷರು ಈ ಎಲ್ಲಾ ದಾಖಲೆಗಳನ್ನು ಒದಗಿಸಬೇಕು. ಇಲ್ಲದಿದ್ದರೆ ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ಪಡೆಯುವುದು ಕಷ್ಟವಾಗುತ್ತದೆ ಎಂದ ಅವರು, ಚುನಾವಣೆಗೆ ಮೊದಲೇ ಅವರು ಅಧಿಕಾರಿಗಳಿಗೆ ಚಾರ್ಜ್ ಕೊಡಬೇಕಿತ್ತು. ಆದರೆ, ಚುನಾವಣೆಯಲ್ಲಿ ಸೋತ ನಂತರ ಕೊಡುತ್ತಿರುವುದು ನಿಯಮದ ಉಲ್ಲಂಘನೆ ಕೂಡ ಆಗಿದೆ ಎಂದರು.
ಒಟ್ಟಾರೆ, ಕನ್ನಡ ಸಾಹಿತ್ಯ ಪರಿಷತ್ ನಿಂದ ಜಿಲ್ಲೆಯಲ್ಲಿ ಒಂದು ಉತ್ತಮ ಸಾಹಿತ್ಯಿಕ ವಾತಾವರಣ ನಿರ್ಮಿಸುವುದು, ಪ್ರತಿಭೆಗಳಿಗೆ ಆದ್ಯತೆ ನೀಡುವುದು, ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸಾಹಿತ್ಯ ಭವನಗಳ ನಿರ್ಮಾಣ ಮಾಡುವ ಸಂಕಲ್ಪ ನನಗಿದೆ.
ಈ ಹಿನ್ನಲೆಯಲ್ಲಿ ಸದಸ್ಯರು, ಸೋತವರು, ಗೆದ್ದವರು ಎಲ್ಲರೂ ನಮ್ಮ ಜೊತೆಗೆ ಇದ್ದು ಸಹಕರಿಸಬೇಕು. ಎಲ್ಲಾ ಸೇರಿ ಸಾಹಿತ್ಯ ರಥವನ್ನು ಎಳೆಯೋಣ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಶಿವಮೂರ್ತಿ, ಶಿವಪ್ಪ, ಗಣೇಶ್, ಕೃಷ್ಣಪ್ಪ, ಕೃಷ್ಣಮೂರ್ತಿ ಮತ್ತಿತರರು ಇದ್ದರು.