ಭ್ರಷ್ಟಾಚಾರ ವಿರುದ್ದ ಜಾಗೃತಿ ಕಾರ್ಯಕ್ರಮ*
ಶಿವಮೊಗ್ಗ, ಅ. 30::
ಎಲ್ಲ ಅಧಿಕಾರಿ/ನೌಕರರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಸಾರ್ವಜನಿಕ ಸೇವೆಯನ್ನು ನೀಡಿದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವೇ ಇರುವುದಿಲ್ಲ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸರಸ್ವತಿ.ಕೆ.ಎನ್ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಭ್ರಷ್ಟಾಚಾರ ನಿಗ್ರಹ ದಳ ಹಾಗೂ ಲೋಕಾಯುಕ್ತ ಪೊಲೀಸ್ ಠಾಣೆ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಹಯೋಗದಲ್ಲಿ ಇಂದು ಜಿಲ್ಲಾ ಪಂಚಾಯತ್‍ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ‘ಭ್ರಷ್ಟಾಚಾರ ವಿರುದ್ದ ಜಾಗೃತಿ ಮೂಡಿಸುವ ಅರಿವು ಸಪ್ತಾಹದ ಅಂಗವಾಗಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಜಾಗೃತಿ ಕಾರ್ಯಕ್ರವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ನಾವೆಲ್ಲ ಯಾವುದೇ ರೀತಿಯಲ್ಲಿ ಭ್ರಷ್ಟಾಚಾರದಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ಪ್ರತಿಜ್ಞೆ ಸ್ವೀಕರಿಸಿದ್ದೇವೆ. ಈ ಪ್ರತಿಜ್ಞೆಯಲ್ಲಿ ಭ್ರಷ್ಟಾಚಾರ ವಿರುದ್ದವಾದ ಆರು ಸಮಗ್ರ ಅಂಶಗಳಿದ್ದು ಇದನ್ನು ಎಲ್ಲರೂ ಅಕ್ಷರಶಃ ಅಳವಡಿಸಿಕೊಂಡಲ್ಲಿ ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳ ಜವಾಬ್ದಾರಿ ಕಡಿಮೆ ಆಗುತ್ತದೆ. ನೆಮ್ಮದಿಯ ವಾತಾವರಣ ಮೂಡುತ್ತದೆ ಎಂದರು.
ಭ್ರಷ್ಟಾಚಾರ ಒಂದು ಸಾಮಾಜಿಕ ಪಿಡುಗು. ಇದರಿಂದ ಜನಸಾಮಾನ್ಯರು ಸರ್ಕಾರಿ ವ್ಯವಸ್ಥೆ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಗಿದೆ. ಆದ್ದರಿಂದ ಎಲ್ಲ ಸಾರ್ವಜನಿಕ ನೌಕರರು ತಮ್ಮ ಜವಾಬ್ದಾರಿಗಳನ್ನು ಅರಿತು ಆತ್ಮಸಾಕ್ಷಿಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರಿ ಸೌಲಭ್ಯ, ಯೋಜನೆಗಳನ್ನು ತಲುಪಿಸಬೇಕು ಎಂದರು.
ಕಾನೂನು ಸೇವಾ ಪ್ರಾಧಿಕಾರದ ವತಿಯಿಂಉದ ಜನ ಸಾಮಾನ್ಯರಿಗೆ ಉಚಿತವಾಗಿ ಕಾನೂನಿನ ಅರಿವು ಮತ್ತು ನೆರವನ್ನು ನೀಡಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು. ಹಾಗೂ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಹಲವಾರು ಜನಪರ ಕಾರ್ಯಕ್ರಮಗಳು ನಡೆಯುತ್ತಿದ್ದು ಅಧಿಕಾರಿಗಳು/ನೌಕರರು ಉತ್ತಮವಾಗಿ ಸ್ಪಂದಿಸಿ, ನಿರ್ವಹಿಸುತ್ತಿದ್ದಾರೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕ ಸೇವೆಯಲ್ಲಿ ಕೆಲವರು ಮಾಡುವ ಭ್ರಷ್ಟಾಚಾರದಿಂದ ಇಡೀ ವಲಯವನ್ನೇ ಅನುಮಾನದ ದೃಷ್ಟಿಯಿಂದ ನೋಡುವಂತಾಗಿದೆ. ಆದರೆ ಕೋವಿಡ್ ಅಂತಹ ಸಮಯದಲ್ಲಿ ಸರ್ಕಾರಿ ನೌಕರರ ಸೇವೆ ಸ್ಮರಣೀಯವಾಗಿದೆ. ಸರ್ಕಾರಿ ನೌಕರರು ಕೂಡ ಸಾರ್ವಜನಿಕರನ್ನು ಕಾಯಿಸದೇ, ಸತಾಯಿಸದೇ, ವಿಳಂಬ ಮಾಡದಂತೆ ಅವರ ಕೆಲಸವನ್ನು ಮಾಡಿಕೊಡಬೇಕು ಎಂದರು.
ಎಲ್ಲ ನೌಕರರು ‘ತಬರನ ಕಥೆ’ ಚಲನಚಿತ್ರ ಒಮ್ಮೆ ನೋಡಬೇಕು. ತಬರನಿಗೆ ಹೇಗೆ ಸೌಲಭ್ಯ ನೀಡಲು ಅಲೆದಾಡಿಸುತ್ತಾರೆ, ಅದರ ಪರಿಣಾಮವೇನು ಎಂದು ತಿಳಿಯುತ್ತದೆ. ಅವಶ್ಯಕತೆ ಇರುವವರೇ ಸೇವೆ ಪಡೆಯಲು ಬಂದಿರುತ್ತಾರೆ. ಅವರಿಂದ ಏನೂ ಅಪೇಕ್ಷಿಸದೇ ಕೆಲಸ ಮಾಡಿಕೊಡಬೇಕು. ಸರ್ಕಾರಿ ನೌಕರಿ ಯಾವುದೋ ಒಂದು ಪುಣ್ಯದಿಂದ ಲಭಿಸಿರುತ್ತದೆ. ಸೇವೆ ಮಾಡಲು ಒಂದು ಉತ್ತಮ ಅವಕಾಶ ಇದಾಗಿದ್ದು ಈ ಕೆಲಸಕ್ಕೆ ನ್ಯಾಯ ಒದಗಿಸಬೇಕು. ಆರೋಗ್ಯ ಮತ್ತು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಶ್ರದ್ದೆ ಮತ್ತು ಸಂತೋಷದಿಂದ ಕರ್ತವ್ಯದಲ್ಲಿ ನಿರತರಾದರೆ ಅದೇ ನೆಮ್ಮದಿ. ಅದು ಬಿಟ್ಟು ಬೇಡದ ಆಶೆಗಳ ಹಿಂದೆ ಹೋದಲ್ಲಿ ನೋವು ಖಚಿತ ಎಂದ ಅವರು ಸರ್ಕಾರಿ ನೌಕರರು ಎಂದರೆ ಹೀಗೇ… ಎನ್ನುವ ಮನೋಭಾವವನ್ನು ಸಾರ್ವಜನಿಕರಲ್ಲಿ ಹೋಗಲಾಡಿಸಿ ಜನ ಸ್ನೇಹಿಯಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕೆಂದು ಕಿವಿಮಾತು ಹೇಳಿದರು.
ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕ ಎನ್.ಮೃತ್ಯುಂಜಯ್ ಮಾತನಾಡಿ, ಎಲ್ಲ ಸರ್ಕಾರಿ ನೌಕರರು ತಮ್ಮ ನಿಯಮಗಳು ಮತ್ತು ಕಾಯ್ದೆಗಳಿಗೆ ಬದ್ದರಾಗಿ ಕರ್ತವ್ಯ ನಿರ್ವಹಿಸಬೇಕು. ವೈಯಕ್ತಿಕ ನಡವಳಿಕೆ ಅತ್ಯಂತ ಪ್ರಮುಖವಾಗಿದ್ದು ವ್ಯವಸ್ಥೆಯನ್ನು ದೂಷಣೆ ಮಾಡದೇ ತಾನು ವೈಯಕ್ತಿಕವಾಗಿ ಮನಸಂತೋಷದಿಂದ ಕೆಲಸ ಮಾಡಬೇಕು. ಮೊದಲು ನಮ್ಮ ಮನೋಭಾವವನ್ನು ಬದಲಿಸಿಕೊಂಡು ಮನತೃಪ್ತಿಯಿಂದ ಕರ್ತವ್ಯನಿರತನಾಗಬೇಕು. ದುರಾಸೆ ಎಂಬುದಕ್ಕೆ ಕೊನೆಯಿಲ್ಲ. ಆರೋಗ್ಯ ಮತ್ತು ಕುಟುಂಬ ಮುಖ್ಯವಾಗಿದ್ದು ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ನೀಡಬೇಕು. ಈ ನಿಟ್ಟಿನಲ್ಲಿ ಮೊದಲು ಅಧಿಕಾರಿ/ನೌಕರರು ಕರ್ತವ್ಯನಿಷ್ಟರಾಗಿ ಮಕ್ಕಳಿಗೆ ಮಾದರಿಯಾಗಿರಬೇಕು ಎಂದರು.
ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕ ಲೋಕೇಶ್ ಮಾತನಾಡಿ, ಪ್ರಿವೆನ್ಶನ್ ಆಫ್ ಕರಪ್ಷನ್ ಆಕ್ಟ್‍ನಡಿ ಸಾರ್ವಜನಿಕರು ಭ್ರಷ್ಟಾಚಾರದ ವಿರುದ್ದ ದೂರು ಸಲ್ಲಿಸಬಹುದು. ಈ ಕಾಯ್ದೆ ಬಹಳ ಶಕ್ತಿಯುತವಾಗಿದ್ದು ಅಪರಾಧ ಸಾಬೀತಾದಲ್ಲಿ ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಬಹುದು. ಈ ಕಾಯ್ದೆ ಸೆಕ್ಷನ್ 7ಎ ಪ್ರಕಾರ ಸರ್ಕಾರಿ ಸೇವೆ ನೀಡುವಲ್ಲಿ ಅನಗತ್ಯ ವಿಳಂಬ ಮಾಡುವ ಮೂಲಕ ಲಂಚಕ್ಕೆ ಬೇಡಿಕೆ ಇಟ್ಟಲ್ಲಿ ಪ್ರಕರಣ ದಾಖಲಾಗಿ ಎಫ್‍ಐಆರ್ ಆದರೆ ಇದು ಜಾಮೀನುರಹಿತ ಅಪರಾಧವಾಗುತ್ತದೆ. ಕೆಲಸ ಮಾಡಿಸಿಕೊಳ್ಳುವುದಕ್ಕಾಗಿ ಅಧಿಕಾರಿಗಳಿಗೆ ಲಂಚದ ಆಮಿಷ ತೋರಿಸುವುದು, ನೀಡುವುದು ಸೆಕ್ಷನ್ 8 ರಡಿ ಅಪರಾಧವಾಗಿದೆ. ಮಧ್ಯವರ್ತಿಗಳ ಮೂಲಕ ಲಂಚ ನೀಡುವುದು, ಲಂಚ ಕೇಳುವುದು ಮತ್ತು ನೀಡುವುದು ಇದೆಲ್ಲ ಶಿಕ್ಷಾರ್ಹ ಅಪರಾಧವಾಗಿದೆ. ಯಾವುದೇ ಒಬ್ಬ ಸರ್ಕಾರಿ ಅಧಿಕಾರಿ ತನ್ನ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಲ್ಲಿ ಅಂತಹವರ ಮೇಲೆ ನಿಗಾ ಇಟ್ಟು ಗೌಪ್ಯ ವರದಿ ಸಿದ್ದಪಡಿಸಿ ನಂತರ ಎಫ್‍ಐಆರ್ ಮಾಡಲಾಗುತ್ತದೆ. ಅಕ್ರಮ ಆಸ್ತಿ ವರದಿ ಸಿದ್ದಪಡಿಸಿ ಕ್ರಮವಹಿಸಲಾಗುತ್ತದೆ ಎಂದ ಅವರು ಕಚೇರಿಗಳಲ್ಲಿ ಇಲಾಖಾ ಮುಖ್ಯಸ್ಥರು ತಮ್ಮ ಅಧೀನ ಸಿಬ್ಬಂದಿಗಳ ಮೇಲೆ ನಿಗಾ ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ್, ಸಿಪಿಓ ಉಮಾ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.