ಶಿವಮೊಗ್ಗ,ಅ.13:
ಆಯನೂರು ಮಂಜುನಾಥ್ ಅಂದಾಕ್ಷಣ ಮೊದಲು ಬರುವ ಪದವೇ ಕಾರ್ಮಿಕ ನಾಯಕ. ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್ ನಲ್ಲಿ ಸದಸ್ಯರಾಗಿರುವ ಅಪರೂಪದ ರಾಜಕಾರಣಿ ಆಯನೂರು ಮಂಜುನಾಥ್ ಪ್ರಯತ್ನದ ಫಲವಾಗಿ 26 ವರ್ಷದಿಂದ ಎಳೆದಾಡುತ್ತಿದ್ದ ತುಂಗಭದ್ರ ಶುಗರ್ ಫ್ಯಾಕ್ಟರಿಯ 926 ನೌಕರರಿಗೆ ಪರಿಹಾರ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ.
ಹಾಲಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ನೇತೃತ್ವದಲ್ಲಿ ಅಂತಿಮ ಸಭೆ ನಡೆಸಿ ತ್ರಿಪಕ್ಷೀಯ ಸಂಧಾನ ನಡೆದಿದೆ.
ಕಾರ್ಖಾನೆಯ ಮಾಲೀಕರು, ಕಾರ್ಖಾನೆಯ ನೌಕರರು ಮತ್ತು ಸಂಘ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳ ನಡುವೆ ಒಪ್ಪಂದ ನಡೆದಿದೆ. ಸಾಗರ ರಸ್ತೆಯಲ್ಲಿರುವ ಪ್ರವಾಸಿಮಂದಿರದಲ್ಲಿ ನಡೆದ ಐತಿಹಾಸಿಕ ಸಭೆಯಲ್ಲಿ ಈ ಎಲ್ಲಾ ನೌಕರರಿಗೆ ಪರಿಹಾರ ನೀಡಲು ಸಭೆಯಲ್ಲಿ ಒಪ್ಪಂದ ಮಾಡಿಕೊಳ್ಳಲಾಯಿತು.
926 ನೌಕರರಿಗೆ ಪರಿಹಾರ
ಕಾರ್ಖಾನೆಯ 926 ನೌಕರರಲ್ಲಿ 356 ಜನ ನೌಕರರು ಸಾವನ್ನಪ್ಪಿದ್ದಾರೆ. ಖಾಯಂ ನೌಕರರು, ತರಬೇತಿದಾರು, ದಿನಗೂಲಿ ನೌಕರಿಗೆ ಹೊರಗುತ್ತಿಗೆ ನೌಕರರೆಲ್ಲರಿಗೂ ಪರಿಹಾರ ನೀಡಲು ಸಭೆ ತೀರ್ಮಾನಿಸಿದೆ.
ಒಪ್ಪಂದ ಏನು ಗೊತ್ತಾ….?
ಎಲ್ಲಾ ನೌಕರರಿಗೆ 26 ತಿಂಗಳ ವೇತನ ಪರಿಹಾರ ಹಣವನ್ನ ನೀಡಬೇಕು, ಇತರೆ ಕರ್ಚುಗಳ ಬಾಬ್ತಾಗಿ ಹೆಚ್ಚುವರಿ 6 ತಿಂಗಳ ಸಂಬಳ ಸೇರಿಸಿ ಕೊಡಬೇಕು. 3 ತಿಂಗಳ ಬೋನಸ್, ಗ್ರಾಜ್ಯುಟಿ ನೀಡಲು ತೀರ್ಮಾನಿಸಲಾಯಿತು.
ಪರಿಹಾರ ಹಣವನ್ನ ದಶಕಗಳ ತಡವಾಗಿ ನೀಡುತ್ತಿರುವ ಹಿನ್ನಲೆಯಲ್ಲಿ 26 ವರ್ಷಗಳಿಂದ ಇಲ್ಲಿಯ ವರೆಗೆ ಸಂಬಳದ ಮೇಲಿನ ಶೇ.6 ರಷ್ಟು ರಾಷ್ಟ್ರೀಕೃತ ಬ್ಯಾಂಕ್ ನ ಬಡ್ಡಿಯಂತೆ ನೀಡಬೇಕು.
ಬದಲೀನೌಕರರಲ್ಲಿ ತಲಾ ಒಬ್ಬರಿಗೆ 25 ಸಾವಿರ ರೂ. ವೇತನ ನೀಡಲು ತೀರ್ಮಾನಿಸಲಾಯಿತು. ಚೆಕ್ ಮೂಲಕ ಕಾರ್ಮಿಕರ ಖಾತೆಗೆಹೋಗಲಿದೆ. ಇಂದಿನಿಂದಲೇ ಈ ಒಪ್ಪಂದ ಜಾರಿಗೊಂಡಿದೆ.
ಈ ಸಂದರ್ಭದಲ್ಲಿ 12 ಜನರಿಗೆ ಸಾಂಕೇತಿಕ ಚೆಕ್ ನೀಡಲಾಯಿತು. ಸೇವೆಗೆ ಅನುಗುಣವಾಗಿ ಪರಿಹಾರ ಹಣ ನೀಡಲಾಗುವುದು. ಅಂತಿಮ ವಿತರಣೆ ಅ.31 ರಂದು ನೀಡಲಾಗುತ್ತದೆ.
ನಿಧನರಾದ ಕಾರ್ಮಿಕರ ಅವಲಂಭಿತ ಕುಟುಂಬದವರು ದಾಖಲೆ ತೆಗೆದುಕೊಂಡು ಬರುವರಿಗೂ ಪರಿಹಾರ ಹಣ ನೀಡಲಾಗುವುದು.
ಸಭೆಯಲ್ಲಿ ಸಕ್ಕರೆ ಕಾರ್ಖಾನೆಯ ಮಣಿ ವೇಲನ್, ಅಸಿಸ್ಟೆಂಟ್ ಕಮಿಷನರ್ ನಾಗರಾಜ್, ಕಾರ್ಮಿಕ ಇಲಾಖೆಯ ಶಿವಕುಮಾರ್, ಭೀಮೇಶ್ ಹಾಗೂ ನೌಕರರು ಇದ್ದರು.