ಶಿವಮೊಗ್ಗ: ಭದ್ರಾವತಿ ನಗರಸಭೆ 29ನೇ ವಾರ್ಡ್ ಚುನಾವಣೆಲ್ಲಿ ಜೆಡಿಎಸ್ ಪಕ್ಷಕ್ಕೆ ವಿಜಯಲಕ್ಷ್ಮಿ ಒಲಿದಿದ್ದಾಳೆ. ಜೆಡಿಎಸ್ ಅಭ್ಯರ್ಥಿ ನಾಗರತ್ನ ಅವರು ಭರ್ಜರಿ ಗೆಲುವು ದಾಖಲಿಸಿದ್ದಾರೆ.
29ನೇ ವಾರ್ಡ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ನಾಗರತ್ನ ಅವರು 1282 ಮತಗಳನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಲೋಹಿತಾ ನಂಜಪ್ಪ 832 ಮತಗಳು, ಬಿಜೆಪಿ ಪಕ್ಷದ ಅಭ್ಯರ್ಥಿ ರಮಾ ವೆಂಕಟೇಶ್ ಅವರು 70 ಮತಗಳನ್ನು ಪಡೆದುಕೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ 450 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
29ನೇ ವಾರ್ಡ್ ನಲ್ಲಿ ನಾಲ್ಕು ಬೂತ್ ಗಳಿದ್ದವು. ಬೂತ್ ನಂಬರ್ 111ರಲ್ಲಿ ಜೆಡಿಎಸ್ 243, ಕಾಂಗ್ರೆಸ್ 143, ಬಿಜೆಪಿ 15 ಮತ ಪಡೆದಿದೆ. ಇಲ್ಲಿ ಒಟ್ಟು 402 ಮತಗಳು ಚಲಾವಣೆಯಾಗಿತ್ತು. ಇನ್ನು ಬೂತ್ 112ರಲ್ಲಿ 420 ಮತ ಚಲಾವಣೆಯಾಗಿತ್ತು. ಈ ಪೈಕಿ ಜೆಡಿಎಸ್ 211, ಕಾಂಗ್ರೆಸ್ 195, ಬಿಜೆಪಿ 10 ಮತ ಪಡೆದಿವೆ. ಬೂತ್ 113ರಲ್ಲಿ 737 ಮತಗಳು ಚಲಾವಣೆಯಾಗಿದ್ದು, ಜೆಡಿಎಸ್ 485, ಕಾಂಗ್ರೆಸ್ 237, ಬಿಜೆಪಿ 12 ಮತಗಳು ಪಡೆದಿವೆ. ಬೂತ್ 114ರಲ್ಲಿ 641 ಮತಗಳು ಚಲಾವಣೆಯಾಗಿದ್ದವು. ಜೆಡಿಎಸ್ 343 ಕಾಂಗ್ರೆಸ್ 257, ಬಿಜೆಪಿ 33 ಮತ ಗಳಿಸಿದೆ.
ಜಿದ್ದಾಜಿದ್ದಿಯ ಕಣದಲ್ಲಿ ನೋಟಾ ವೋಟುಗಳು ಕೂಡ ಚಲಾವಣೆಯಾಗಿದೆ. 16 ಮಂದಿ ನೋಟಾ ಮತಗಳನ್ನು ಚಲಾಯಿಸಿದ್ದಾರೆ. ಬೂತ್ ನಂಬರ್ 111ರಲ್ಲಿ 1, 112ರಲ್ಲಿ 4, 113ರಲ್ಲಿ 3, 114ರಲ್ಲಿ 8 ನೋಟಾ ಮತಗಳು ಚಲಾವಣೆಯಾಗಿದೆ.
29ನೇ ವಾರ್ಡ್ ನಲ್ಲಿ ಹಿಂದಿನಿಂದಲೂ ಜೆಡಿಎಸ್ ಪ್ರಾಬಲ್ಯವಿದೆ. ಈ ಚುನಾವಣೆಯ ಫಲಿತಾಂಶ ಪುನಃ ಸಾಬೀತುಪಡಿಸಿದೆ. ಈ ಹಿಂದೆ ಜೆಡಿಎಸ್ ಪಕ್ಷದ ಅನಿಲ್ ಕುಮಾರ್ ಅವರು ಈ ವಾರ್ಡ್ ನಿಂದ ಗದ್ದಿದ್ದರು. ಮೀಸಲಾತಿ ಬದಲಾದ ಹಿನ್ನೆಲೆ ಪತ್ನಿ ನಾಗರತ್ನ ಅವರನ್ನು ಕಣಕ್ಕಿಳಿಸಿದ್ದರು. ಈ ಭಾರಿಯೂ ಜನರು ಜೆಡಿಎಸ್ ಪರವಾಗಿ ಒಲವು ತೋರಿಸಿದ್ದಾರೆ.
ಜೆಡಿಎಸ್ ಪಾಳಯದಲ್ಲಿ ಸಂಭ್ರಮ
ತಮ್ಮ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸುತ್ತಿದ್ದಂತೆ ಜೆಡಿಎಸ್ ಪಾಳಯದಲ್ಲಿ ಸಂಭ್ರಮಾಚರಣೆ ಆರಂಭವಾಗಿದೆ. ಜೆಡಿಎಸ್ ಕಾರ್ಯಕರ್ತರು ಪಕ್ಷದ ಪರವಾಗಿ, ಪಕ್ಷದ ಮುಖಂಡರ ಪರವಾಗಿ ಘೋಷಣೆಗಳನ್ನು ಕೂಗಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಗೆಲುವಿನಿಂದಾಗಿ ಭದ್ರಾವತಿ ನಗರಸಭೆಯಲ್ಲಿ ಜೆಡಿಎಸ್ ಹುಮ್ಮಸ್ಸು ಹೆಚ್ಚಾಗಿದೆ. 35 ವಾರ್ಡುಗಳ ಪೈಕಿ ಕಾಂಗ್ರೆಸ್ 18, ಜೆಡಿಎಸ್ 12, ಬಿಜೆಪಿ 4, ಪಕ್ಷೇತರರಾಗಿ ಒಬ್ಬ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.