ಶಿವಮೊಗ್ಗ : ಕೋವಿಡ್ ನಿಯಮ ಉಲ್ಲಂಘಿಸಿ ಪ್ರವಾಸಿಗರನ್ನು ಜಲಪಾತ ವೀಕ್ಷಣೆಗೆ ಬಿಟ್ಟ ಆರೋಪದಡಿ ಏಳು ಮಂದಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದ್ದು, ಈ ಪೈಕಿ ಮೂವರು ಹೋಂ ಗಾರ್ಡ್ ಸಿಬ್ಬಂದಿಗಳಿದ್ದಾರೆ.
ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಜೋಗ ಜಲಪಾತದ ಅಧಿಕಾರಿಗಳು, ಸಿಬ್ಬಂದಿಯ ಮೇಲೆ ಪೊಲೀಸರ ವಿಶೇಷ ತಂಡ ದಾಳಿ ನಡೆಸಿದ್ದಾರೆ.

ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಜೋಗ ಜಲಪಾತ ವೀಕ್ಷಣೆಗೆ ಬರುವವರಿಗೆ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಅಥವಾ ಎರಡನೇ ಡೋಸ್ ಲಸಿಕೆ ಪಡೆದ ವರದಿ ಕಡ್ಡಾಯಗೊಳಿಸಲಾಗಿದೆ ಎಂದು ಆದೇಶ ಹೊರಡಿಸಿದ್ದರು. ಆದರೆ ಇಲ್ಲಿನ ಸೆಕ್ಯೂರಿಟಿ ಗಾರ್ಡ್ಗಳು ಈ ಆದೇಶಕ್ಕೆ ಕ್ಯಾರೆ ಅನ್ನದೆ, ಬಂದ ಪ್ರವಾಸಿಗರನ್ನು ಒಳಬಿಡುತ್ತಿದ್ದರು.
ಜೋಗ ಗೇಟ್ ನಲ್ಲಿ ಸೆಕ್ಯೂರಿಟಿ ಗಾರ್ಡ್ಗಳ ನಿರ್ಲಕ್ಷ್ಯದ ಕುರಿತು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರಿಗೆ ದೂರು ಬಂದಿತ್ತು. ಈ ಹಿನ್ನಲೆಯಲ್ಲಿ ಪರಿಶೀಲನೆ ನಡೆಸುವಂತೆ ಜಿಲ್ಲಾ ರಕ್ಷಣಾಧಿಕಾರಿ ಅವರಿಗೆ ಸೂಚನೆ ನೀಡಿದ್ದರು. ಅದರಂತೆ ಸಾಗರ ಡಿವೈಎಸ್ಪಿ ಅವರು ವಿಶೇಷ ತಂಡ ರಚಿಸಿ, ದಾಳಿಗೆ ಸೂಚಿಸಿದ್ದರು. ಪ್ರವಾಸಿಗರ ರೂಪದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಪ್ರವಾಸಿಗರಂತೆ ಒಳಗೆ ಹೋದ ವಿಶೇಷ ಪೊಲೀಸರ ತಂಡ:
ಜೋಗ ಜಲಪಾತಕ್ಕೆ ವಿಶೇಷ ಪೊಲೀಸರ ತಂಡ ಪ್ರವಾಸಿಗರಂತೆ ತೆರಳಿದ್ದರು. ಇವರಿಗೆ ಕೋವಿಡ್ ನೆಗೆಟಿವ್ ವರದಿಯಾಗಲಿ, ಲಸಿಕೆ ಪಡೆದ ರಿಪೋರ್ಟಾಗಲಿ ವಿಚಾರಿಸಲಿಲ್ಲ. ನೇರವಾಗಿ ಜೋಗ ಜಲಪಾತ ವೀಕ್ಷಣೆಗೆ ಕಳುಹಿಸಲಾಗಿತ್ತು. ಹಾಗಾಗಿ ಕೂಡಲೇ ಸೆಕ್ಯೂರಿಟಿ ಗಾರ್ಡ್ ಮತ್ತು ಅಂಗಡಿ ಮಾಲೀಕರೊಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ.
ಜೋಗದ ಸೆಕ್ಯೂರಿಟಿಗೆ ನಿಯೋಜನೆಗೊಂಡಿದ್ದ ಸಿಬ್ಬಂದಿಗಳು, ಗೈಡ್ ಒಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಚಂದ್ರಶೇಖರ್, ಹೋಂ ಗಾರ್ಡ್ಗಳಾದ ಮಂಜುನಾಥ, ಕೃಷ್ಣಪ್ಪ, ಮಂಜುನಾಥ, ಸೆಕ್ಯೂರಿಟಿ ಗಾರ್ಡ್ ಗಳಾದ ರಾಕೇಶ, ಪ್ರಭುದಾಸ, ಅಂಗಡಿ ಮಾಲೀಕ ಸಂಜು ಅಲಿಯಾಸ್ ಮಂಜುನಾಥ್ ಎಂಬುವವರ ವಿರುದ್ಧ ಜೋಗ ಪೊಲೀಸ್ ಠಾಣೆಯಲ್ಲಿ ವಿಶೇಷ ತಂಡ ಪ್ರಕರಣ ದಾಖಲು ಮಾಡಿದೆ.