ಶಿವಮೊಗ್ಗ, ನ 28: ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್ ಫೋನ್ಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ಹಿಂದಿರುಗಿಸುವ ನಿಟ್ಟಿನಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕರೊಬ್ಬರು ಕಳೆದುಕೊಂಡಿದ್ದ ಮೊಬೈಲ್ ಫೋನ್ ಅನ್ನು ಪೊಲೀಸರು ತಾಂತ್ರಿಕ ನೆರವಿನೊಂದಿಗೆ ಪತ್ತೆಹಚ್ಚಿ, ಸಂಬಂಧಪಟ್ಟ ವಾರಸುದಾರರಿಗೆ ಮರಳಿಸಿದ್ದಾರೆ.

ಮೊಬೈಲ್ ಕಳೆದುಕೊಂಡಿದ್ದ ವ್ಯಕ್ತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅಗತ್ಯ ಮಾಹಿತಿ ಸಂಗ್ರಹಿಸಿ, ಕೇಂದ್ರ ಸರ್ಕಾರದ CEIR (Central Equipment Identity Register) ಪೋರ್ಟಲ್ ಮೂಲಕ ಮೊಬೈಲ್ ಪತ್ತೆಹಚ್ಚುವ ಕಾರ್ಯ ಕೈಗೊಂಡಿದ್ದರು.

ತಾಂತ್ರಿಕ ಪರಿಶೀಲನೆ ಹಾಗೂ ನಿರಂತರ ಪ್ರಯತ್ನದ ಫಲವಾಗಿ ಕಳೆದುಹೋಗಿದ್ದ ಮೊಬೈಲ್ ಪತ್ತೆಯಾಗಿದ್ದು, ಅದನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.

ಮೊಬೈಲ್ ಕಳ್ಳತನ ಅಥವಾ ಕಳೆದುಹೋದ ಸಂದರ್ಭದಲ್ಲಿ ಸಾರ್ವಜನಿಕರು ಆತಂಕಪಡದೆ ತಕ್ಷಣವೇ ಪೊಲೀಸ್ ಠಾಣೆಗೆ ದೂರು ನೀಡಬೇಕು.

ಜೊತೆಗೆ CEIR ಪೋರ್ಟಲ್ ಮೂಲಕ ಮೊಬೈಲ್ನ IMEI ಸಂಖ್ಯೆಯನ್ನು ಬಳಸಿ ಬ್ಲಾಕ್ ಮಾಡುವ ಪ್ರಕ್ರಿಯೆ ಕೈಗೊಳ್ಳುವ ಮೂಲಕ ದುರುಪಯೋಗ ತಡೆಯಲು ಮುಂದಾಗಬೇಕು ಎಂದು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರ ಕಾಂಡಿಕೆ ರವರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.