
ಶಿವಮೊಗ್ಗ: ಸ್ವದೇಶಿ ತಂತ್ರಜ್ಞಾನ ಮತ್ತು ಸಂಶೋಧನೆಯ ಬಲದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿದ್ದು, ವಿದ್ಯಾರ್ಥಿಗಳು ತಮ್ಮ ಸೃಜನಶೀಲ ಆಲೋಚನೆ ಹಾಗೂ ತಾಂತ್ರಿಕ ಕೌಶಲಗಳನ್ನು ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬಳಸಿಕೊಳ್ಳಬೇಕು ಎಂದು ಪರ್ಫೆಕ್ಟ್ ಅಲಾಯ್ ಕಂಪನಿ ನಿರ್ದೇಶಕರಾದ ವಿ.ಕೆ. ದಿವೇಕರ್ ಹೇಳಿದರು.
ನಗರದ ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಶನಿವಾರ ಏರ್ಪಡಿಸಿದ್ದ ನಾಸಾ ಸ್ಪೇಸ್ ಆ್ಯಪ್ಸ್ ಚಾಲೆಂಜ್ – 48 ಗಂಟೆಗಳ ಹ್ಯಾಕಥಾನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ ಮಾತನಾಡಿ, ತರಗತಿಗಳಲ್ಲಿ ಗಳಿಸಿದ ಸೈದ್ಧಾಂತಿಕ ಜ್ಞಾನವನ್ನು ಪ್ರಾಯೋಗಿಕವಾಗಿ ಅನ್ವಯಿಸುವುದರೊಂದಿಗೆ, ನೈಜ ಜಗತ್ತಿನ ಸಮಸ್ಯೆಗಳಿಗೆ ತಂತ್ರಜ್ಞಾನಾಧಾರಿತ ಪರಿಹಾರ ರೂಪಿಸಲು ಇಂತಹ ಸ್ಪರ್ಧೆಗಳು ಪ್ರೇರಣೆ ನೀಡುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ವೈ. ವಿಜಯಕುಮಾರ್ ಮಾತನಾಡಿ, ಕೃತಕ ಬುದ್ಧಿಮತ್ತೆಯ ಯುಗದಲ್ಲಿ ತಂತ್ರಜ್ಞಾನವನ್ನು ಬಳಸುವುದಷ್ಟೇ ಸಾಕಾಗದು; ಹೊಸ ಆಲೋಚನೆಗಳನ್ನು ಸೃಷ್ಟಿಸಿ, ಅವುಗಳನ್ನು ವಿವಿಧ ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ಅನ್ವಯಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಬಾಹ್ಯಾಕಾಶ ಸಂಶೋಧನೆ, ಕೃಷಿ, ಸಾರಿಗೆ ಹಾಗೂ ಕೈಗಾರಿಕಾ ವಲಯಗಳಲ್ಲಿ ತಂತ್ರಜ್ಞಾನ ಆಧಾರಿತ ಆವಿಷ್ಕಾರಗಳಿಗೆ ವಿಪುಲ ಅವಕಾಶಗಳಿವೆ ಎಂದರು.

14 ಸವಾಲುಗಳಿಗೆ ನವೀನ ಪರಿಹಾರದ ಹುಡುಕಾಟ
250ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದ ಹ್ಯಾಕಥಾನ್ನಲ್ಲಿ, 8ನೇ ತರಗತಿಯಿಂದಲೇ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ನಾಸಾ ಸೇರಿದಂತೆ ಅದರ ಪಾಲುದಾರ ಬಾಹ್ಯಾಕಾಶ ಸಂಸ್ಥೆಗಳ ಮುಕ್ತ ದತ್ತಾಂಶವನ್ನು ಬಳಸಿಕೊಂಡು ಭೂಮಿ ಮತ್ತು ಬಾಹ್ಯಾಕಾಶಕ್ಕೆ ಸಂಬಂಧಿಸಿದ 14 ನೈಜ ಸಮಸ್ಯೆಗಳಿಗೆ ತಾಂತ್ರಿಕ ಹಾಗೂ ಸೃಜನಾತ್ಮಕ ಪರಿಹಾರಗಳನ್ನು ರೂಪಿಸಲು ಅವಕಾಶ ನೀಡಲಾಗಿತ್ತು.
ನಾಸಾ ಉಪಗ್ರಹ ದತ್ತಾಂಶದ ಮೂಲಕ ಕೃಷಿ ಭೂಮಿಯ ಆರೋಗ್ಯ ವಿಶ್ಲೇಷಣೆ, ಕಾಡ್ಗಿಚ್ಚು ಪತ್ತೆ, ಚಂದ್ರ ಮತ್ತು ಮಂಗಳ ಗ್ರಹಗಳಲ್ಲಿ ಮಾನವ ವಸತಿಗೆ ಸೂಕ್ತ ಸ್ಥಳಗಳ ಗುರುತಿಸುವಿಕೆ, ಗಗನಯಾತ್ರಿಗಳ ಆರೋಗ್ಯ ಮೇಲ್ವಿಚಾರಣೆ, ಕೃತಕ ಬುದ್ಧಿಮತ್ತೆ ಆಧಾರಿತ ಅಗ್ನಿ ಸುರಕ್ಷತೆ ಹಾಗೂ ಬಾಹ್ಯಗ್ರಹಗಳ ಅಧ್ಯಯನ ಪ್ರಮುಖ ಸವಾಲುಗಳಾಗಿದ್ದವು. ಪರಿಹಾರ ರೂಪಿಸಲು 11 ಡಿಜಿಟಲ್ ವೇದಿಕೆಗಳ ಉಚಿತ ಬಳಕೆಯೊಂದಿಗೆ ಇಂಟರ್ನ್ಶಿಪ್ ಅವಕಾಶವನ್ನೂ ಕಲ್ಪಿಸಲಾಗಿತ್ತು. ಫಲಿತಾಂಶ ನಾಸಾ ಪ್ರಕಟಿಸಬೇಕಿದ್ದು, ಅತ್ಯುತ್ತಮ 10 ತಂಡಗಳಿಗೆ ಜಾಗತಿಕವಾಗಿ ವಿಶೇಷ ಮನ್ನಣೆ ದೊರೆಯಲಿದೆ.

ಪ್ರಾಸ್ತಾವಿಕವಾಗಿ ಸಂಯೋಜಕರಾದ ಉಜ್ವಲಾ ಬಿ.ಎಸ್ ಮಾತನಾಡಿ, ಜಾಗತಿಕವಾಗಿ ವಿವಿಧ ಸ್ಥಳಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಅದರಲ್ಲಿ ಜೆ.ಎನ್.ಎನ್ ಕಾಲೇಜಿನ ಸ್ಥಳವೂ ಒಂದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸಂಶೋಧನಾ ಡೀನ್ ಡಾ. ಎಸ್.ವಿ. ಸತ್ಯನಾರಾಯಣ, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಎಸ್. ಪ್ರಮೋದ್ ಕುಮಾರ್, ನಳೀನ ಎಸ್.ಬಿ, ಡಾ. ಶ್ವೇತಾ ಎಚ್.ಆರ್, ಶ್ವೇತಾ ಬಿ., ವಿದ್ಯಾರ್ಥಿ ಸಂಚಾಲಕಿ ಐಶ್ವರ್ಯ ಎಂ. ಹಾಗೂ ಸಹಸಂಚಾಲಕ ಜಿ. ಶಿಶಿರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
