ಶಿವಮೊಗ್ಗ : ಅ.7:
SIR ಪ್ರಕ್ರಿಯೆಗೂ ಮುನ್ನ ಜಿಲ್ಲೆಯಲ್ಲಿ 15,19,459 ಮತದಾರರಿದ್ದರು. ಜಿಲ್ಲೆಯ ಎಲ್ಲಾ 07 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸಲಾದ ಮತದಾರರ ವಿಶೇಷ ಪರಿಷ್ಕರಣೆಯಲ್ಲಿ 1,88,554 ಮತದಾರರು ಕಡಿಮೆಯಾಗಿದ್ದಾರೆ. ಕರಡು ಮತದಾರರ ಪಟ್ಟಿಯಲ್ಲಿರುವವರು 13,30,905ಮಂದಿ. 612 ಮತದಾರರನ್ನು ನೋಟೀಸ್ ಅವಧಿಯಲ್ಲಿ ಅನರ್ಹರನ್ನಾಗಿಸಲಾಗಿದ್ದು, 13,54,046ಮಂದಿ ಅಂತಿಮ ಮತದಾರರ ಪಟ್ಟಿಯಲ್ಲಿ ಉಳಿದುಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ತಿಳಿಸಿದರು.

ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ SIR ಮತದಾರರ ವಿಶೇಷ ಪರಿಷ್ಕರಣೆ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿ ಮಾತನಾಡುತ್ತಿದ್ದರು. ಅಂತಿಮವಾಗಿ 667100 ಪುರುಷರು, 686921 ಮಹಿಳೆಯರು, 25 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 1354046ಮತದಾರರು ಇಂದು ಬಿಡುಗಡೆ ಮಾಡಲಾದ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ ಎಂದ ಅವರು ಈ ಸಂಖ್ಯೆಯು ಸಾಮಾನ್ಯ ಮತದಾರರ ಒಟ್ಟು ಸಂಖ್ಯೆಯಾಗಿದೆ. ಅಲ್ಲದೆ 648 ಸೇವಾ ಮತದಾರರನ್ನು ಗುರುತಿಸಲಾಗಿದೆ ಎಂದರು.
2026ರ ಆಗಸ್ಟ್ 24ರಂದು ಪ್ರಕಟಿಸಿದ ಕರಡು ಮತದಾರರ ಪಟ್ಟಿಯಲ್ಲಿ 1330905 ಮತದಾರರಿದ್ದರು. ಅಂತಿಮ ಪಟ್ಟಿಯಲ್ಲಿ 13,54,046 ಮತದಾರರಿದ್ದಾರೆ. ಪ್ರಕಟಗೊಂಡ ಕರಡು ಮತದಾರರ ಪಟ್ಟಿಗೆ ಹೋಲಿಸಿದರೆ ಅಂತಿಮ ಪಟ್ಟಿಯಲ್ಲಿ ಸುಮಾರು 23141 ಮತದಾರರ ಹೆಚ್ಚಳ ಕಂಡುಬಂದಿದೆ. SIR ಪ್ರಕ್ರಿಯೆಯ ಸಂದರ್ಭದಲ್ಲಿ ಮತದಾರರನ್ನು ವಿವಿಧ ವರ್ಗಗಳಲ್ಲಿ ಗುರುತಿಸಲಾಗಿದ್ದು, ವಿಶೇಷವಾಗಿ ಶಾಶ್ವತವಾಗಿ ಸ್ಥಳಾಂತರಗೊಂಡವರು, ನಿಗದಿತ ವಿಳಾಸದಲ್ಲಿ ಪತ್ತೆಯಾಗದವರು, ಮೃತಪಟ್ಟವರು, ಒಂದಕ್ಕಿಂತ ಹೆಚ್ಚು ಕಡೆ ಹೆಸರು ನೋಂದಾಯಿಸಿಕೊಂಡವರು, ಇತರೆ ಕಾರಣಗಳಿಂದ ಪರಿಶೀಲನೆಗೆ ಒಳಪಟ್ಟವರು ಎಂದು ಗುರುತಿಸಲಾಗಿದೆ. ಪ್ರಸ್ತುತ ಕರಡು ಪಟ್ಟಿಯಲ್ಲಿ ಹೆಸರು ಕಾಣಿಸದಿರುವುದರಿಂದ ಮಾತ್ರ ಸಂಬಂಧಪಟ್ಟ ವ್ಯಕ್ತಿ ಮತದಾನಕ್ಕೆ ಅನರ್ಹರೆಂದು ನಿರ್ಧರಿಸಲಾಗುವುದಿಲ್ಲ. ತಮ್ಮ ಅರ್ಹತೆಯನ್ನು ಸಾಬೀತುಪಡಿಸಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಹೆಸರು ಸೇರ್ಪಡೆ ಪ್ರಕ್ರಿಯೆ ನಿರಂತರವಾಗಿರಲಿದೆ ಎಂದವರು ತಿಳಿಸಿದರು.

SIR ಪ್ರಕ್ರಿಯೆಯಲ್ಲಿ ಹೆಸರುಗಳ ಮ್ಯಾಪಿಂಗ್ ಆಗದಿರುವುದು ಹಾಗೂ ಮತದಾರರ ವಿವರಗಳಲ್ಲಿ ವ್ಯತ್ಯಾಸ ಕಂಡುಬಂದಿರುವುದಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 48660ಒಟ್ಟು ನೋಟಿಸ್ಗಳನ್ನು ನೀಡಲಾಗಿತ್ತು. ಈ ನೋಟಿಸ್ಗಳಿಗೆ ಸಂಬಂಧಿಸಿದ ವಿಚಾರಣೆ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದ ಅವರು, ಪ್ರಸಕ್ತ ಅಂತಿಮ ಮತದಾರರ ಪಟ್ಟಿಯಲ್ಲಿ 18–19 ವರ್ಷ ವಯಸ್ಸಿನ 19510 ಯುವ ಮತದಾರರು ಹೆಚ್ಚಾಗಿದ್ದಾರೆ ಎಂದರು.

ರಾಜ್ಯ ಸರ್ಕಾರವು ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಾಗಿರುವ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ನಷ್ಟದ ಅಂದಾಜನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ರಾಜ್ಯ ಸರ್ಕಾರವು ಸದರಿ ವರದಿಯ ಆಧಾರದ ಮೇಲೆ ರಾಜ್ಯದ ಬೆಳೆನಷ್ಟವನ್ನು ಕ್ರೋಢೀಕರಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ. ಈ ಎಲ್ಲಾ ಬೆಳವಣಿಗೆಗಳ ನಂತರ ಸರ್ಕಾರದ ನಿರ್ಣಯ ಮತ್ತು ಮಾರ್ಗದರ್ಶನದಂತೆ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲಾಗುವುದು.
ಪ್ರಸಕ್ತ ಬೇಸಿಗೆಯಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ಜಿಲ್ಲೆಯ ಎಲ್ಲಾ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಸಂಭಾವ್ಯ ಶುದ್ಧ ಕುಡಿಯುವ ಸಮಸ್ಯೆಯನ್ನು ಎದುರಿಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿನ ಜಲಾಶಯಗಳಲ್ಲಿನ ನೀರನ್ನು ಕುಡಿಯುವ ನೀರನ್ನು ಒದಗಿಸಲೆಂದೇ ಕಾಯ್ದಿಸಲಾಗುತ್ತಿದೆ. ಈ ಸಂಬಂಧ ನೀರಾವರಿ, ಸಣ್ಣ ನೀರಾವರಿ, ಕಂದಾಯ ಮತ್ತು ಪೊಲೀಸ್ ಇಲಾಖೆಗಳ ಅಧಿಕಾರಿಗಳಿಗೆ ಇದರ ಹೊಣೆಗಾರಿಕೆ ನೀಡಲಾಗಿದ್ದು, ಕೆರೆ-ಕಟ್ಟೆ-ಕಾಲುವೆಗಳಿಗೆ ಅನಧಿಕೃತವಾಗಿ ಪಂಪ್ಸೆಟ್ಗಳನ್ನು ಅಳವಡಿಸಿಕೊಂಡಿದ್ದಲ್ಲಿ ಅವುಗಳನ್ನು ತೆರವುಗೊಳಿಸಲಾಗುವುದು. ಸಾರ್ವಜನಿಕರು ಅನಧಿಕೃತ ಅಳವಡಿಕೆಗಳು ಕಂಡುಬಂದಲ್ಲಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ ಅವರು, ಎಲ್ಲಾ ಅನುಕೂಲಕ್ಕಾಗಿ ಕೈಗೊಳ್ಳುತ್ತಿರುವ ಈ ಕ್ರಮಕ್ಕೆ ಸಹಕರಿಸುವಂತೆ ಹಾಗೂ ನೀರನ್ನು ಮಿತವಾಗಿ ಬಳಸುವಂತೆ ಜಿಲ್ಲಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಈ ವಿಶೇಷ ಪರಿಷ್ಕರಣೆ ಅವಧಿಯಲ್ಲಿ ಪ್ರತಿ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಪ್ರತಿ ಮತಗಟ್ಟೆಗೆ 1150-1200ಮತದಾರರಿಗೆ ಸೀಮಿತಗೊಳಿಸಲಾಗಿದ್ದು, ನಗರ ಪ್ರದೇಶದಲ್ಲಿ 637 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 1249 ಮತಗಟ್ಟೆಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 1886 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದರು.
ಈ ವಿಶೇಷ ಪರಿಷ್ಕರಣೆ ಕಾರ್ಯದಲ್ಲಿ ನಿಯೋಜನೆಗೊಂಡು ನಿಧನರಾಗಿದ್ದ ಮಹಿಳಾ ಸಿಬ್ಬಂಧಿಯೊಬ್ಬರಿಗೆ ಸರ್ಕಾರದಿಂದ ಐದು ಲಕ್ಷ ರೂ.ಗಳ ಸಹಾಯಧನ ನೀಡಲು ಸರ್ಕಾರ ಅನುಮತಿ ನೀಡಿದೆ. ಶೀಘ್ರದಲ್ಲಿ ಹಣವನ್ನು ಫಲಾನುಭವಿಯ ಕುಟುಂಬದವರಿಗೆ ತಲುಪಿಸಲಾಗುವುದು ಎಂದರು.
ಇಂದು ಬಿಡುಗಡೆಗೊಳಿಸಲಾದ ಮತದಾರರ ಪಟ್ಟಿಯಲ್ಲಿ ಶಿವಮೊಗ್ಗ ಗ್ರಾಮಾಂತರ -2,04,780, ಭದ್ರಾವತಿ-1,78,264, ಶಿವಮೊಗ್ಗ ನಗರ – 2,24,699, ತೀರ್ಥಹಳ್ಳಿ -1,80,115, ಶಿಕಾರಿಪುರ -1,86,279, ಸೊರಬ-1,85,649 ಹಾಗೂ ಸಾಗರ-1,94,260ಮಂದಿ ನೋಂದಾಯಿಸಿಕೊಂಡಂತಾಗಿದೆ ಎಂದವರು ವಿವರಿಸಿದರು.

ಜಿಲ್ಲೆಯಲ್ಲಿ ನಿಗಧಿಪಡಿಸಿದ ಸಂಖ್ಯೆಗಿಂತ ಕಡಿಮೆ ಸಂಖ್ಯೆಯ ತೃತೀಯ ಲಿಂಗಿಗಳು ಹೆಸರು ಸೇರ್ಪಡೆಗೊಳಿಸಿದ್ದಾರೆ. ಈ ಸಂಖ್ಯೆ ವಾಸ್ತವ ತೃತೀಯ ಲಿಂಗಿಗಳ ಸಂಖ್ಯೆಗಿಂತ ಅತ್ಯಂತ ಕಡಿಮೆ ಪ್ರಮಾಣದಲ್ಲಿರುವುದನ್ನು ಗುರುತಿಸಲಾಗಿದ್ದು, ಮುಂದಿನ ದಿನಗಳಲ್ಲಿ ಹೊರಗುಳಿದ ಎಲ್ಲಾ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಕ್ರಮ ವಹಿಸುವುದಾಗಿ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ ವಿ ಮತ್ತು ಚುನಾವಣಾ ಶಾಖೆಯ ಅಧಿಕಾರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.