
ಶಿವಮೊಗ್ಗ: ಡಿಜಿಟಲ್ ಪರದೆಗಳ ಬಳಕೆಯಲ್ಲಿ ಸೂಕ್ತ ವಿರಾಮ, ಓದುವಾಗ ಸಮರ್ಪಕ ಬೆಳಕು ಹಾಗೂ ನಿಯಮಿತ ನೇತ್ರ ತಪಾಸಣೆಗೆ ಆದ್ಯತೆ ನೀಡುವ ಮೂಲಕ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಶಂಕರ ಕಣ್ಣಿನ ಆಸ್ಪತ್ರೆಯ ಬಿಸಿನೆಸ್ ಡೆವಲಪರ್ ನಿತಿನ್ ಯಾದವ್ ಹೇಳಿದರು.

ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಮಂಗಳವಾರ ಕುವೆಂಪು ವಿಶ್ವವಿದ್ಯಾಲಯ, ಕಾಲೇಜಿನ ಆರೋಗ್ಯ ಪಥ ಘಟಕ, ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕ ಹಾಗೂ ರೆಡ್ಕ್ರಾಸ್ ಘಟಕ, ಶಂಕರ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಮತ್ತು ನೇತ್ರದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್ ಮತ್ತು ಕಂಪ್ಯೂಟರ್ಗಳ ನಿರಂತರ ಬಳಕೆಯಿಂದ ಕಣ್ಣಿನ ಆರೋಗ್ಯದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಬೇಕು. ನೇತ್ರದಾನವು ದೃಷ್ಟಿಹೀನರ ಬದುಕಿನಲ್ಲಿ ಹೊಸ ಬೆಳಕನ್ನು ಮೂಡಿಸುವ ಮಹತ್ವದ ಮಾನವೀಯ ಸೇವೆಯಾಗಿದ್ದು, ಇದರ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವುದು ಅಗತ್ಯವೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಮಮತಾ ಪಿ.ಆರ್. ಅವರು, ಆರೋಗ್ಯದ ಸಂರಕ್ಷಣೆಯಲ್ಲಿ ಮುನ್ನೆಚ್ಚರಿಕೆ ಮತ್ತು ನಿಯಮಿತ ತಪಾಸಣೆ ಮಹತ್ವದ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳು ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವುದರ ಜೊತೆಗೆ ನೇತ್ರದಾನದಂತಹ ಮಾನವೀಯ ಕಾರ್ಯಗಳ ಮಹತ್ವವನ್ನು ಅರಿತು ಇತರರ ಬದುಕಿಗೆ ಬೆಳಕಾಗುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕರಾದ ಅನುಪಮಾ ಕೆ., ಆರೋಗ್ಯ ಪಥ ಘಟಕದ ಸಂಚಾಲಕರಾದ ಶ್ರೀಧರ್, ಸೌದ್ ಅಹಮದ್ ಖಾನ್, ರೆಡ್ಕ್ರಾಸ್ ಘಟಕದ ಸಂಚಾಲಕರಾದ ಶೃತಿ ಕೆ., ಸೌಪರ್ಣಿಕ, ಉಮೇಶ್ ಹಾಗೂ ಎನ್ಎಸ್ಎಸ್ ಘಟಕದ ಅಧಿಕಾರಿಗಳಾದ ಪ್ರವೀಣ್ ಬಿ.ಎನ್. ಮತ್ತು ಘನಶ್ಯಾಮ ಉಪಸ್ಥಿತರಿದ್ದರು.